ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಲಾವಿದರಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ

Srinivasa Murthy VN
Updated On : 4 Jul 2013, 11:44 am

ಕ.ಪ್ರ. ವಾರ್ತೆ ತುಮಕೂರು ಜು.4
ಕಲಾವಿದರಿಗೆ ಸರಕಾರ ನೀಡುವ ಪ್ರೋತ್ಸಾಹ ಧನಕ್ಕಿಂತ ಪ್ರೇಕ್ಷಕರು ನೀಡುವ ಪ್ರೋತ್ಸಾಹ ಹೆಚ್ಚಿನ ಮೌಲ್ಯ ಉಳ್ಳಂತದ್ದು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷೆ ಮಾಲತಿ ಸುಧೀರ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ದಾವಣಗೆರೆಯ ಶ್ರೀಗುರು ವಾದ್ಯವೃಂದ ಹಾಗೂ ಚಿಂದೋಡಿ ಶಾಂತರಾಜ್ ಅಸೋಷಿಯೇಷ್‌ನ್ ವತಿಯಿಂದ  ಹಮ್ಮಿಕೊಂಡಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು.
ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ವೃತ್ತಿ ರಂಗಭೂಮಿಯ ಕಲಾವಿದರು ನಿರಂತರವಾಗಿ ನಾಟಕ ಪ್ರದರ್ಶಿಸಿದರೆ ಮಾತ್ರ ಜೀವನ ನಡೆಸಲು ಸಾಧ್ಯ. ಆದರೆ ಹವ್ಯಾಸಿ ರಂಗಭೂಮಿಯಲ್ಲಿ ತಿಂಗಳಿಗೆ ಒಂದು ನಾಟಕ ಆಡಿದರು ನಡೆಯುತ್ತದೆ. ಹವ್ಯಾಸಿ ರಂಗಭೂಮಿ ಕಂಪನಿಯ ಮಾಲೀಕರ ಮೇಲೆ ಕಂಪನಿ ಕಲಾವಿದರು ಹಾಗೂ ಅವರ ಕುಟುಂಬವನ್ನು ಸಾಕುವ ಗುರುತರ ಜವಾಬ್ದಾರಿ ಇರುತ್ತದೆ. ಹೀಗಾಗಿ ಸರಕಾರದ ಪ್ರೋತ್ಸಾಹಕ್ಕಿಂತ ಪ್ರೇಕ್ಷಕರ ಪ್ರೋತ್ಸಾಹ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ ಎಂದರು.
ಕೆ.ಬಿ.ಆರ್.ಡ್ರಾಮ ಕಂಪನಿಯಿಂದ ಇಂದಿವರೆಗೆ  ಸುಮಾರು 85 ವರ್ಷಗಳ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿರುವ ಚಿಂದೋಡಿ ಕುಂಟುಬ ರಂಗಭೂಮಿಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದೆ. ಕಲಾವಿದರಿಗೆ ಕಷ್ಟ ತಪ್ಪಿದ್ದಲ್ಲ. ಅದು ದೇವರು ಕೊಟ್ಟ ಶಾಪ ಎಂದು ಭಾವಿಸಬೇಕಾಗಿದೆ ಎಂದು ತಾವು ಕಂಡ ರಂಗಭೂಮಿಯ ಕಷ್ಟ ನಷ್ಟಗಳ ಅನುಭವವನ್ನು ಬಿಚ್ಚಿಟ್ಟರು.
ಗಾಳಿಪಟದಂತೆ: ನಾಟಕೋತ್ಸವವನ್ನು ಉದ್ಘಾಟಿಸಿ ಪ್ರತಿಕೋದ್ಯಮಿ ಎಸ್. ನಾಗಣ್ಣ ಮಾತನಾಡಿ ರಂಗಭೂಮಿಗೆ ನೂರಾರು ವರ್ಷಗಳ ಇತಿಹಾಸವಿದ್ದರೂ ಇನ್ನು ಗಾಳಿಪಟದಂತೆ  ಮೇಲೆ ಸುತ್ತತ್ತಲೇ ಇದೆಯೇ ಹೊರತು ಒಂದು ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇತರೆ ಕಲಾ ಕ್ಷೇತ್ರಗಳಂತೆ ಘನತೆ, ಗಾಂಭೀರವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ರಂಗಭೂಮಿಯ ಸಂಸ್ಕೃತಿಯ ಬೇರೇ ಸಡಿಲಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಿನಿಮಾದಿಂದ ರಂಗಭೂಮಿ, ಕಿರುತೆರೆಯಿಂದ ಸಿನಿಮಾಗಳು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿವೆ ಎಂದರು.
ಇಂದು ರಂಗಭೂಮಿಯಲ್ಲಿ ಬಣ್ಣ ಹಚ್ಚುವ  ಕಲಾವಿದರು ನಾಟಕಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಬುದ್ಧತೆಯನ್ನು ಪಡೆದುಕೊಳ್ಳಬೇಕು ಎಂದ ಅವರು, ಶಾಲಾ ಕಾಲೇಜುಗಳಲ್ಲಿ ನಮ್ಮ ಸಂಸ್ಕೃತಿಯ ಬೇರುಗಳಾದ ರಂಗಭೂಮಿಯ ಬಗ್ಗೆ ಕನಿಷ್ಠ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಎಸ್.ನಾಗಣ್ಣ ಸಲಹೆ ನೀಡಿದರು.
ಸಾನಿಧ್ಯವನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ ವಹಿಸಿದ್ದು, ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಕಲಾಶ್ರೀ ಡಾ. ಲಕ್ಷ್ಮಣದಾಸ್, ಗುಬ್ಬಿ ತಹಸೀಲ್ದಾರ್ ಸಿದ್ದಕಭಪ್ಪ, ಮಧುಗಿರಿ ತಾ.ಪಂ.ಮುಖ್ಯಾಧಿಕಾರಿ ಎಚ್.ಡಿ. ಮಹಲಿಂಗಯ್ಯ, ಶ್ರೀರಂಗ ರಂಗ ಹವ್ಯಾಸಿ ಕಲಾವೃಂದದ ಕಾರ್ಯದರ್ಶಿ ಎಚ್.ಎಂ. ರಂಗಯ್ಯ, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಭಾಸ್ಕರ್, ಚಿಂದೋಡಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement