ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾನೂನು ಜಾರಿಗೆ ಕಾಠಿಣ್ಯ ಅನಿವಾರ್ಯ: ಮಾಲೂರಪ್ಪ

Srinivasa Murthy VN
Updated On : 4 Jul 2013, 11:45 am

ಕ.ಪ್ರ. ವಾರ್ತೆ ತುಮಕೂರು ಜು.4
ಕಾನೂನು ಜಾರಿಗೆ ಕಾಠಿಣ್ಯ ಅನಿವಾರ್ಯ ಎಂದು ಜಿಲ್ಲಾ ನಿವೃತ್ತ ಪೊಲೀಸರ ಸಂಘದ ಅಧ್ಯಕ್ಷ ಮಾಲೂರಪ್ಪ ಪ್ರತಿಪಾದಿಸಿದರು.
ಅವರು ತುಮಕೂರು ಸಮೀಪದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಏರ್ಪಾಟಾಗಿದ್ದ ಸಾಹಿತಿ ಹಾಗೂ ಪೊಲೀಸ್ ಇಲಾಖೆಯ ಎ.ಸಿ. ಮಹಾದೇವಪ್ಪನವರ ಬದುಕು -ಬರಹ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬಹುತೇಕ ಸಂದರ್ಭಗಳಲ್ಲಿ ಜನತೆ ಕಾನೂನಿನ ಅರಿವಿದ್ದರೂ, ಪಾಲಿಸುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ ಪೊಲೀಸರು ಕಾನೂನು ಜಾರಿಗೆ ಕಾಠಿಣ್ಯ ತೋರಬೇಕಾಗುತ್ತದೆ. ಆದರೆ ಪೊಲೀಸರ ಅಂತರಂಗದಲ್ಲಿ ಕರುಣೆ, ಪ್ರೀತಿ ಇದ್ದೇ ಇದೆ. ಪೊಲೀಸರು ಕೂಡ ಮನುಷ್ಯರೇ. ಎ.ಸಿ. ಮಹಾದೇವಪ್ಪ ಪೊಲೀಸರಾಗಿದ್ದರೂ, ಅವರಲ್ಲೂ ಕವಿತನವಿದೆ. ಸಾಹಿತಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ನೈಜ ಚಿತ್ರಣ: ಬದುಕು-ಬರಹ ಕುರಿತು ಮಾತಾಡಿದ ಕಮಲಾ ಬಡ್ಡಿಹಳ್ಳಿ ಖಾಕಿಯಲ್ಲಿ ಕಠಿಣತೆ ಇದ್ದಂತೆಯೇ ಕೋಮಲತೆಯೂ ಇರುತ್ತದೆ. ಎ.ಸಿ. ಮಹದೇವಯ್ಯ ಅವರ ಬದುಕು ಹೂವಿನಂತೆ ಮೃದು ಎಂದರೆ, ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ, ಅಸ್ಪೃಶ್ಯತೆ, ಗ್ರಾಮೀಣ ಬದುಕು ನೈಜವಾಗಿ ಚಿತ್ರಣಗೊಂಡಿದೆ ಎಂದರು. ಉಮಾಶರ್ಮ ಮಾತನಾಡಿ, ಕವನಗಳು, ಸರಳ ಸುಂದರವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವಾಚಸ್ಪತಿ ಕವಿತಾಕೃಷ್ಣ ಮಾತನಾಡಿ, ಮಾನವ ಅರಿತು ಮುನ್ನಡೆಯಬೇಕು. ಸುಜ್ಞಾನವೇ ಜನನ, ಅಜ್ಞಾನವೇ ಮರಣ ಎಂದರು. ಮಾನವ ವಿದ್ಯಾವಂತನಾದರೆ ಸಾಲದು. ಹೃದಯವಂತನಾಗಬೇಕು. ಅನುಭವ ಭಾವಕುಲುಮೆಯಲ್ಲಿ ಒಪ್ಪವಿಟ್ಟ ಚಿನ್ನವಾದಾಗ ಅಜ್ಞಾನ ಅಳಿದು, ಸುಜ್ಞಾನ  ಮೂಡುತ್ತದೆ. ಸಾಹಿತಿಗಳು ಭಾವನಾ ಜೀವಿಗಳಾಗಿ, ಕಾಲ -ಧರ್ಮಕ್ಕೆ ಸ್ಪಂದಿಸಿ, ಸಾಹಿತ್ಯ ರಚಿಸಬೇಕು ಎಂದರು. ಕಲಾಶ್ರೀ ಮಾತನಾಡಿದರು.
ಕೆ.ಜಿ.ಎಲ್. ರವಿ ಎ.ಸಿ. ಮಹದೇವಯ್ಯ ಅವರನ್ನು ಸನ್ಮಾನಿಸಿದರು. ಕುಪ್ಪೂರು ಕೃಷ್ಣಮೂರ್ತಿ, ಸೀಗೆಹಳ್ಳಿ ನಾರಾಯಣ, ಕುರುಬರ ಸಂಘದ ಮಹಾಲಿಂಗಪ್ಪ ಉಪಸ್ಥಿತರಿದ್ದರು.
ಅನುಶ್ರೀ, ಪ್ರೇಮ ಪ್ರಾರ್ಥಿಸಿದರು. ಚಂದನ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹೇಶ್ ನಿರೂಪಿಸಿ, ಎಂ.ಪಿ.ಉಷಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement