ಗೋ ಸಂರಕ್ಷಣೆ ಅಗತ್ಯ: ಬಿ. ಸುರೇಶ್ ಗೌಡ
ಕ.ಪ್ರ.ವಾರ್ತೆ ತುಮಕೂರು ಜು. 4
ಗೋ ಸಂರಕ್ಷಣೆ ಅತ್ಯಗತ್ಯ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ಪ್ರತಿಪಾದಿಸಿದರು. ಅವರು ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೂಚನಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಶಾಖೆ ಉದ್ಘಾಟಿಸಿ ಮಾತನಾಡಿದರು.
ಹಸುಗಳನ್ನು ಗೋ ಮಾತೆ ಎಂದು ಪೂಜೆ ಮಾಡುವ ಪುಣ್ಯ ಭೂಮಿ ನಮ್ಮದು ಎಂದರು.
ಇಂದು ಗೋ ಸಂಪತ್ತು ವಿನಾಶದತ್ತ ಸಾಗಿದೆ ಎಂದು ವಿಷಾದಿಸಿದ ಶಾಸಕರು ಇದನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಹಾಲು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು ಹಾಲನ್ನು ಹಾಲಾಗಿ ಮಾರಾಟ ಮಾಡದೆ ಇದನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದಾಗ ಹೆಚ್ಚು ಲಾಭ ಬರುತ್ತದೆ ಎಂದು ತಿಳಿಸಿದರು.
ಇಂದು ಹೈನುಗಾರಿಕೆ ಉದ್ಯಮ ಉತ್ತಮ ಲಾಭದಾಯಕವಾಗಿದ್ದು ರೈತರು ಇದರ ಸದುಪಯೋಗ ಮಾಡಿಕೊಂಡು ತಮ್ಮ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಇದರಿಂದ ಬರುವ ಆದಾಯದಿಂದ ತಮ್ಮ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳಾಗಲು ಉನ್ನತ ಶಿಕ್ಷಣಕ್ಕೆ ಕಳುಹಿಸಿಕೊಡುವಂತೆ ಆಗ್ರಹಿಸಿದರು
ವಿಶೇಷ ಗ್ರಾಮಸಭೆಗಳು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಮಾದರೀ ಕ್ಷೇತ್ರವನ್ನಾಗಿಸಲು ಯೋಜನೆ ರೂಪಿಸಲಾಗಿದ್ದು ಇದರ ಭಾಗವಾಗಿ ಮೊದಲ ಪ್ರಯತ್ನ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಎಲ್ಲ ಇಲಾಖೆಗಳನ್ನು ಒಳಗೊಂಡಂತೆ ವಿಶೇಷ ಗ್ರಾಮಸಭೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಈ ಗ್ರಾಮಸಭೆಗಳಲ್ಲಿ ಹಾಜರಿದ್ದು ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲು ನೀಡುವಂತೆ ಮನವಿ ಮಾಡಿದರು.
ಈ ಗ್ರಾಮಸಭೆಗಳಲ್ಲಿ ಎಲ್ಲ ಇಲಾಖೆಗಳಿಗೆ ಸಂಬಂಧಪಟ್ಟಂತೆ ಕೆಲವನ್ನು ಇಲ್ಲಿ ಮಾಹಿತಿ ನೀಡಿದ್ದು ಈ ವಿಷಯಗಳಿಗೆ ಸಂಬಂದಪಟ್ಟಂತೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಅಹವಾಲು ನೀಡಬಹುದೆಂದು ಶಾಸಕರು ಮನವಿ ಮಾಡಿದರು.
ನೀರು ಹರಿಸುವ ಬಗ್ಗೆ ಗಮನ ಹರಿಸಿಲ್ಲ: ಬಿಜೆಪಿ ಆರೋಪ
ಗುಬ್ಬಿ: ಕ್ಷೇತ್ರದ ಶಾಸಕರು ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಮತ್ತು ಗ್ರಾಮೀಣ ಪ್ರದೇಶಗಳ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಗಮನ ಹರಿಸಿಲ್ಲ ಎಂದು ನೂತನವಾಗಿ ಆಯ್ಕೆಯಾದ ಬಿಜೆಪಿ ತಾಲೂಕು ಅಧ್ಯಕ್ಷ ಹೆಚ್.ಟಿ.ಭೈರಪ್ಪ ತಿಳಿಸಿದರು. ಅವರು ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಎರಡು ವರ್ಷದಿಂದ ಹೇಮಾವತಿ ನೀರು ಕೆರೆಗಳಿಗೆ ಹರಿಸುವಲ್ಲಿ ವಿಫಲರಾಗಿದ್ದು ಈ ಭಾರಿ ಗುಬ್ಬಿ ತಾಲೂಕಿನ ಪ್ರಮುಖ ಕೆರೆಗಳಾದ ಕಡಬ, ಸಿ.ಎಸ್.ಪುರ, ನಿಟ್ಟೂರು ಹಾಗೂ ಗುಬ್ಬಿ ಕೆರೆಗೆ ಸೇರಿದಂತೆ ಸಣ್ಣ ಪುಟ್ಟಕೆರೆಗಳಿಗೂ ಹೇಮಾವತಿ ನೀರು ಹರಿಸಲು ಬಿಜೆಪಿ ಪಕ್ಷದವತಿಯಿಂದ ಎಲ್ಲಾ ರೀತಿಯ ಹೋರಾಟ ಮಾಡಲಾಗುವುದೆಂದು ತಿಳಿಸಿದರು.
ಗುರುವಂದನೆ: ನಾಳೆ ಪೂರ್ವಭಾವಿ ಸಭೆ
ತಿಪಟೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಯವರಿಗೆ ತಿಪಟೂರು ತಾಲೂಕು ಒಕ್ಕಲಿಗರ ಸಂಘ ಹಾಗೂ ತಾಲೂಕಿನ ಸಮಸ್ತ ಸಮಾಜ ಬಂಧುಗಳು ಶ್ರೀಯವರಿಗೆ ಗುರುವಂದನೆ ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ಮಾಯಸಂದ್ರ ಶಾಖಾ ಮಠಾಧ್ಯಕ್ಷರಾದ ಶ್ರೀ ಶಿವಕುಮಾರನಾಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.