ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಮೀನು ಹಂಚಿಕೆ ಕುರಿತು 2 ಗುಂಪುಗಳ ಮಧ್ಯೆ ಹೊಡೆದಾಟ; ತೀವ್ರ ಗಾಯ, ಆಸ್ಪತ್ರೆಗೆ ದಾಖಲು

Srinivasa Murthy VN
Updated On : 4 Jul 2013, 11:45 am

ಕ.ಪ್ರ. ವಾರ್ತೆ ಪಾವಗಡ ಜು.4
ಜಮೀನು ಹಂಚಿಕೆಯ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದು ಶಿಕ್ಷಕರೊಬ್ಬರಿಗೆ ತೀವ್ರ ಗಾಯಾಗಳಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ವಡ್ಡರಹಟ್ಟಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಹೊಡೆದಾಟದಲ್ಲಿ ತೀವ್ರ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ  ಚಿತ್ತಗಾನಹಳ್ಳಿ ಸರ್ಕಾರಿ ಎಚ್‌ಪಿಎಸ್ ಶಾಲೆಯ ಶಿಕ್ಷಕ ವಟ್ಟರಹಟ್ಟಿ ಚಿಕ್ಕೆಗೌಡ (46) ಎಂಬುವರು.
ತಾ.ಕಸಬಾ ವ್ಯಾಪ್ತಿಯ ವಡ್ಡರಹಟ್ಟಿ ಗ್ರಾಮದ ಸರ್ವೆ ನಂಬರ್ 183 ಹಾಗೂ 65ರ ಸುಮಾರು 30ಎಕರೆ ಜಮೀನು ಹಂಚಿಕೆ ವಿಚಾರವಾಗಿ ಗ್ರಾಮದ ಶಿಕ್ಷಕ ಚಿಕ್ಕೇಗೌಡ ಹಾಗೂ ಅದೇ ಗ್ರಾಮದ ಸಿದ್ದಪ್ಪ ಎಂಬುವವರ ಮಧ್ಯೆ ಆಗಾಗ್ಗೆ ವಾದ ವಿವಾದ ನಡೆಯುತಿತ್ತು. ಜಮೀನು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಪದೇಪದೇ ಸಿದ್ದಪ್ಪ ಎಂಬುವರು ಶಿಕ್ಷಕ ಚಿಕ್ಕೇಗೌಡನಿಗೆ ಮಾನಸಿಕ ಹಿಂಸೆ ಹಾಗೂ ಪ್ರಾಣ ಬೆದರಿಕೆ ಹಾಕುತ್ತಿದ್ದರು. ಗ್ರಾಮದಲ್ಲಿ ಸಿದ್ದಪ್ಪನ ಹಿಂಸೆ ಬೈಗಳು ತಾಳಲಾರದೇ ಮೊನ್ನೆಯಷ್ಟೆ ಶಿಕ್ಷಕ ಚಿಕ್ಕೇಗೌಡ ರಕ್ಷಣೆ ಕೋರಿ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಕುಪಿತಗೊಂಡ ಸಿದ್ದಪ್ಪ ಹಾಗೂ ಆತನ 8 ಮಂದಿ ಸಂಬಂಧಿಕರು ಬುಧವಾರ ಜಮೀನು ಬಳಿ ಹೋಗಿ ವಾಪಸು ಬರುತ್ತಿದ್ದ ಚಿಕ್ಕೆಗೌಡನನ್ನು ಏಕಾಏಕಿ ಹಿಡಿದು ದೊಣ್ಣೆ, ಮಚ್ಚುಗಳಿಂದ ಹಲ್ಲೆ ನಡೆಸಿದರು. ಪರಿಣಾಮ ಆತನ ಕೈಕಾಲಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲಿ ಪ್ರಜ್ಞಾಹೀನರಾಗಿ ನೆಲಕ್ಕೆ ಬಿದ್ದಿದ್ದಾರೆ.   ರಕ್ಷಣೆಗೆ ಹೋದ ಗ್ರಾಮದ ಸಿಗ್ಗಣ್ಣ, ಕೆಂಪಯ್ಯ ಎಂಬುವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ  ಸ್ಥಳಕ್ಕೆ ಆಗಮಿಸಿದ ಚಿಕ್ಕೇಗೌಡರ ಅಣ್ಣ ಟಿ.ಜೋಗಯ್ಯ ಎಂಬುವರು  ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ಶಿಕ್ಷಕ ಚಿಕ್ಕೆಗೌಡರನ್ನು ಹೆಚ್ಚಿನ ಚಿಕತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ತಿಳಿಸಲಾಗಿದ್ದು, ಆಸ್ಪತ್ರೆಗೆ ಬಿಇಒ ಬಿ.ಪಿ.ನಾಗರಾಜ್ ಹಾಗೂ ಬಿಆರ್‌ಸಿ ಧನುಂಜಯ ಭೇಟಿ ನೀಡಿದರು. ಘಟನೆ ಬಗ್ಗೆ ದೂರು ಪಡೆದ ಠಾಣಾ ಪಿಎಸ್‌ಐ ನಟರಾಜ್ ಹಾಗೂ ಸಿಬ್ಬಂದಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.      

'ಮಾಧ್ಯಮಗಳು ಸಮಾಜವನ್ನು ಬದಲಾವಣೆಯತ್ತ ಮುನ್ನಡೆಸಲಿ'
ಕ.ಪ್ರ. ವಾರ್ತೆ ಕೊರಟಗೆರೆ ಜು.4
ಉತ್ತಮ ಸಮಾಜವನ್ನು ಕಟ್ಟುವತ್ತ ಮಾಧ್ಯಮಗಳು ಕಾರ್ಯನಿರ್ವಹಿಸಿ ಸಮಾಜವನ್ನು ಬದಲಾವಣೆಯತ್ತ  ಮುನ್ನಡೆಸಬೇಕೆಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ನೂತನವಾಗಿ ಕೊರಟಗೆರೆ ಪ್ರೆಸ್ ಕ್ಲಬ್ ಕಚೇರಿ ಉದ್ಘಾಟಿಸಿ ಮಾತನಾಡಿ ಪ್ರಜಾಪ್ರಭ್ರುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗವೂ ಪ್ರಮುಖ ಅಂಗವಾಗಿದ್ದು ಸಾಮಾಜಿಕ ಜಾಗೃತಿ, ದೇಶ ಭಕ್ತಿಯ ಭಾವನೆ, ಸಾಮಾಜಿಕ ಸಾಮರಸ್ಯ ಸೇರಿದಂತೆ ಧನಾತ್ಮಕ ಅಂಶಗಳ ಮೂಲಕ ಸಮಾಜ ಕಟ್ಟುವ ಹಾಗೂ ಪ್ರಜಾತಂತ್ರ ಮೌಲ್ಯಗಳನ್ನು ರಕ್ಷಿಸುವುದರೊಂದಿಗೆ ಸಮಾಜದಲ್ಲಿ ಮಾಧ್ಯಮಕ್ಕೆ ಅತ್ಯುನ್ನತ ಸ್ಥಾನವಿದೆ. ಅದನ್ನು ಕಾಪಾಡಿಕೊಳ್ಳುವ ಗುರುತರವಾದ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತರ ಮೇಲಿದೆ ಎಂದು ಹೇಳಿದರು.
ಜನ ಸಾಮಾನ್ಯರ ನೋವುಗಳಿಗೆ ತಕ್ಷಣವೇ ಸ್ಪಂದಿಸುತಿರುವ ಮಾಧ್ಯಮಗಳು ಸರ್ಕಾರದ ಕಣ್ಣು ತೆರಸಿ ಆಗಬೇಕಾಗಿರುವ ಸೌಲಭ್ಯಗಳ ಬಗ್ಗೆ ಗಮನ ಹರಿಸುವ ಕೆಲಸದಲ್ಲಿ ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಸಮಾಜ ಮುಖಿಯಗಿ ಕೆಲಸ ಮಾಡಬೇಕೆ ವಿನಃ ಸಮಾಜವನ್ನು ಉದ್ವೇಗಗೊಳಿಸುವಂತಹ ವರದಿಗಳನ್ನು ಪ್ರಕಟಿಸಿ ಸಮಾಜದ ಅಭ್ಯುದಯಕ್ಕೆ ಮಾರಕವಾಗುವಂತೆ ಮಾಡಬಾರದು ಎಂದರು.
ಮುಂದಿನ ದಿನಗಳಲ್ಲಿ ಕೊರಟಗೆರೆ ಪ್ರೆಸ್ ಕ್ಲಬ್ ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸುವಂತೆ ಶುಭಕೋರಿದರು.
ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಕೆ.ವಿ.ಮಂಜುನಾಥ್, ಮುಖಂಡರಾದ ಮೆಡಿಕಲ್  ಕೃಷ್ಣಮೂರ್ತಿ, ಮಹಾಲಿಂಗಪ್ಪ, ಓಬಳರಾಜು, ಎಲ್. ರಾಜಣ್ಣ, ಸುರೇಶ್, ಸಿ.ಕೆ.ಗುಂಡುರಾವ್,  ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರಷೋತ್ತಮ್, ಎನ್.ಪದ್ಮನಾಭ್, ಜಿ.ಎಂ.ಶಿವಾನಂದ್, ಜಿ.ಎಲ್.ಸುರೇಶ್, ಚಿದಂಬರ, ರಂಗಧಾಮಯ್ಯ, ಲೋಕೇಶ್, ಸಂಜಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement