ಮಧುಗಿರಿಯಲ್ಲಿ ಮುಂಗಾರು ಸಂಪೂರ್ಣ ಕ್ಷೀಣ
ಕ.ಪ್ರ.ವಾರ್ತೆ ಮಧುಗಿರಿ ಜು. 4
ತಾಲೂಕಿನಲ್ಲಿ ಮುಂಗಾರು ಸಂಪೂರ್ಣ ಕ್ಷೀಣಿಸಿದ್ದು ಬಿತ್ತನೆಗೆ ಯೋಗ್ಯ ಆರಿದ್ರ ಮಳೆ ಸಂಪೂರ್ಣ ಕೈ ಕೊಟ್ಟಿದ್ದು ಶನಿವಾರ ಹುಟ್ಟುವ ಪುನರ್ವಸ್ಸು ಮಳೆ ಬೀಳದಿದ್ದರೆ ಮಧುಗಿರಿ ತಾಲೂಕಿನ ಜನತೆ ಮತ್ತೊಮ್ಮೆ ಜಲಕ್ಷಾಮ ಹಾಗೂ ಭೀಕರ ಬರಗಾಲದ ದವಡೆಗೆ ತುತ್ತಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ರಾಜ್ಯದ ಬಹುತೇಕ ಕಡೆ ಮಳೆ ಬೀಳುತ್ತಿದ್ದು ಪ್ರಮುಖ ಜಲಾಶಯಗಳು ತುಂಬಿವೆ. ಉತ್ತರ ಭಾರತದಲ್ಲಿ ನೆರೆ ಬಂದು ಜನರು ಕೊಚ್ಚಿ ಹೋಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಆದರೆ ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ರಾಯಲ್‌ಸೀಮೆ ವಲಯಕ್ಕೆ ಸೇರಿದ ಮಧುಗಿರಿ, ಪಾವಗಡ, ಶಿರಾ ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ಮಳೆ ಬಿದ್ದಿಲ್ಲ. ಇದರಿಂದ ಮುಂಗಾರು ಸಂಪೂರ್ಣ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ರೈತರು, ಕೂಲಿಕಾರ್ಮಿಕರು ಹಾಗೂ ಕೃಷಿಕರು ಅತಂಕದಲ್ಲಿದ್ದಾರೆ. ಮಳೆರಾಯನ ಆಗಮನಕ್ಕಾಗಿ ಆಕಾಶದತ್ತ ಮುಖ ಮಾಡಿ ಚಲಿಸುವ ಕಪ್ಪು, ಬಿಳಿ ಮೋಡಗಳನ್ನು ನೋಡಿ ಸೋತು ಸುಣ್ಣವಾಗಿದ್ದಾನೆ.
ಕಾಯುತ್ತಿದ್ದಾನೆ ರೈತ: ಈ ಸಲ ತಾಲೂಕಿನಲ್ಲಿ ಈವರೆಗೆ ಹೇಳಿಕೊಳ್ಳುವಂತಹ ಮಳೆ ಬಿದ್ದಿಲ್ಲ, ಮಧುಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುದ್ಧ ಕುಡಿವ ನೀರು ಸಿಗುತ್ತಿಲ್ಲ. ಈಗಾಗಲೇ ಮಿಡಿಗೇಶಿ ಹೋಬಳಿ, ಐ.ಡಿ.ಹಳ್ಳಿ ಹೋಬಳಿಗಳಲ್ಲಿ ಅಲ್ಪ ಪ್ರಮಾಣದ ತೇವಾಂಶಕ್ಕೆ ಶೇ.20ರಷ್ಟು ಬಿತ್ತಿರುವ ಬೆಳೆಗಳು ಕೂಡ ಮಳೆ ಇಲ್ಲದೆ ಒಣಗುತ್ತಿವೆ. ಇನ್ನು ದೊಡ್ಡೇರಿ, ಕೊಡಿಗೇನಹಳ್ಳಿ ಹಾಗೂ ಕಸಬಾ ಹೋಬಳಿಗಳಲ್ಲಿ ಬಿತ್ತನೆಗೆ ಭೂಮಿ ಹಸನುಗೊಳಿಸಿ ಮಳೆಗೆ ಕಾಯುತ್ತಿದ್ದಾರೆ. ಹೀಗಾಗಿ ಈಗ ಒಂದು ತಿಂಗಳಿಂದ ಮಳೆ ಬಾರದೇ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿವೆ. ತಾಲೂಕಿನಲ್ಲಿ 46,730 ಹೇಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿತ್ತು. ಆದರೆ ಮಳೆ ಬಾರದ ಕಾರಣ ಸದ್ಯಕ್ಕೆ 1787 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆ ಆಗಿದೆ. ಈವರೆಗೆ ಒಟ್ಟು 128 ಮಿಮಿ ಮಳೆ ಬರಬೇಕಿತ್ತು. ಆದರೆ ಈಗ ಬಿದ್ದಿರುವ ಮಳೆ ಪ್ರಮಾಣ ಕೇವಲ 94 ಮಿಮಿ. ಅತ್ಯಂತ ಕಡಿಮೆ ಮಳೆ ಬಿದ್ದಿದ್ದು ಬಿತ್ತನೆ ಆಗಿಲ್ಲ, ಹೆಚ್ಚು ಇಳುವರಿ ಪಡೆಯಬೇಕಾದರೆ ತಾಂತ್ರಿಕವಾಗಿ ಜೂನ್ ವೇಳೆಗೆ ಶೇಂಗಾ ಬಿತ್ತನೆ ಆಗಬೇಕು. ಶನಿವಾರ ಹುಟ್ಟಲಿರುವ ಪುನರ್ವಸು ಮಳೆಗೆ ಪ್ರಮುಖ ಆರ್ಥಿಕ ಬೆಳೆ ಶೇಂಗಾ , ನವಣೆ, ಜೋಳ, ಹಲಸಂದೆ ಹೆಸರು ಸೇರಿದಂತೆ ದ್ವಿದಳ ದಾನ್ಯ ಬೆಳೆ ಬಿತ್ತಲು ಅವಕಾಶವಿದೆ. ಮಳೆ ಕೈ ಕೊಟ್ಟರೆ ಮತ್ತೆ ಮಧುಗಿರಿ ತಾಲೂಕಿನ ಜನತೆ ಭೀಕರ ಬರಗಾಲ, ಜಲಕ್ಷಾಮಕ್ಕೆ ತುತ್ತಾಗುವ ಜತೆಗೆ ಜನ, ಜಾನುವಾರುಗಳಿಗೆ ಮೇವಿನ ಕೊರತೆ ಎದುರಿಸಲು ಸಜ್ಜಾಗಬೇಕಿದೆ.
ವಿತರಣೆ: ಕೃಷಿ ಇಲಾಖೆಯಿಂದ ಈವರೆಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ಜಿಪ್ಸಮ್, ಎರೆಹುಳು ಗೊಬ್ಬರ ವಿತರಿಸಲಾಗಿದೆ. ರೈತರು ಕೂಡ ಬೀಜ, ಗೊಬ್ಬರ ಶೇಖರಿಸಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಬಂದಿಲ್ಲ ರೈತರ ಹಿತ ದೃಷ್ಟಿಯಿಂದ ಈ ಭಾಗದಲ್ಲಿ ಎಕರೆಗೆ 2 ಸಾವಿರ ರು. ಕೊಟ್ಟು ಸರ್ಕಾರ ರೈತರ ಬದುಕು ಹಸನು ಮಾಡಲು ಟೊಂಕ ಕಟ್ಟಿ ನಿಲ್ಲಲು ಮುಂದಾಗಬೇಕು ಎಂಬುದು ರೈತರ ಬೇಡಿಕೆಯಾಗಿದೆ.