ಮನಸ್ಸನ್ನು ತಟ್ಟುವುದೇ ಸಾಹಿತ್ಯ
ಕ.ಪ್ರ.ವಾರ್ತೆ ತುಮಕೂರು ಜು. 4
ಜೀವನದಲ್ಲಿ ಘಟಿಸುವ ಘಟನೆಗಳಿಗೆ ಮರು ಸ್ವರೂಪ ಕೊಟ್ಟು ಇನ್ನೊಂದು ಮನಸ್ಸನ್ನು ತಟ್ಟುವುದೇ ಸಾಹಿತ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ವಾರ್ಷಿಕ ಚಟುವಟಿಕೆಗಳ ಸಂಸ್ಕೃತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿರು. ಸಾಹಿತ್ಯ ಎಲ್ಲರಿಗೂ ಗೊತ್ತಿರುವಂತದ್ದು. ಇನ್ನೊಂದು ಮನಸ್ಸನ್ನು ಗೆಲ್ಲುವುದೇ ಸಾಹಿತ್ಯ ಅನ್ನುತ್ತಾರೆ. ವಿವಿಧ ಭಾಷೆಗಳನ್ನು ಬಳಸುವುದು ಹೇಗೆ ಅಂತಾ ಕಲಿತರೆ ಸಾಹಿತ್ಯ ಕೃಷಿಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಬಹುದು ಎಂದರು. ಪ್ರತಿಯೊಬ್ಬರ ಬಾಳಿನಲ್ಲೂ ಸಾಹಿತ್ಯ ದಿವ್ಯೌಷಧಿಯಾಗಿ ಕಾರ್ಯನಿರ್ವಹಿಸಲಿದೆ. ಸಾಹಿತ್ಯ ಓದುವ, ಜೀರ್ಣಿಸಿಕೊಳ್ಳುವ ಜೊತೆಗೆ ಸಾಹಿತ್ಯದಲ್ಲಿ ಸೃಜನಶೀಲರಾಗಿ ತೊಡಗಿಸಿಕೊಳ್ಳಬೇಕು. ಕತೆ, ಕವಿತೆ, ಕಾದಂಬರಿ ಏನನ್ನಾದರೂ ವಿದ್ಯಾರ್ಥಿಗಳು ಬರೆಯುವ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡಬೇಕು ಎಂದರು.
600ಕ್ಕು ಹೆಚ್ಚು ಭಾಷೆ: 600ಕ್ಕೂ ಹೆಚ್ಚು ಭಾಷೆಗಳು ಭಾರತದಲ್ಲಿ ಜೀವಂತವಾಗಿವೆ. ಇದೊಂದು ಭಾಷೆಗಳ ಸಂಗಮವೆನಿಸಿದೆ ಎಂದು ಕೃಷ್ಣಮೂರ್ತಿ ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ 24 ಭಾಷೆಗಳಿಗೆ ಅಧಿಕೃತ ಅಂಗೀಕಾರ ನೀಡಿದ್ದು ವೈವಿಧ್ಯಮಯ ಭಾಷಾ ಸಂಪತ್ತು ನಮ್ಮಲ್ಲಿದೆ. ವಿವಿಧ ಭಾಷೆಗಳ ಸಂಪತ್ತುಗಳ ಅನುಭವಿಸಿ ಹೊರಬಂದಿರುವ ಇಲ್ಲಿನ ಸಾಹಿತ್ಯವು ಅತ್ಯಂತ ಶ್ರೀಮಂತವೆನಿಸಿವೆ ಎಂದು ಬಣ್ಣಿಸಿದರು. ಜೀವನದಲ್ಲಿ ಯಶಸ್ಸಿನತ್ತ ಹೆಜ್ಜೆಹಾಕಲು ಯಾವುದೇ ಶಾರ್ಟ್ ಕಟ್ಗಳಿಲ್ಲ. ಕಠಿಣ ಪರಿಶ್ರಮ, ಅರ್ಪಣಾ ಮನೋಭಾವ ಇದ್ದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ರಾಜೀವ್ಗಾಂಧಿ ಗ್ರಾಮೀಣ ವಸತಿ ಯೋಜನೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಜಿ.ಜಗದೀಶ್ ಹೇಳಿದರು.
ಸಾಧ್ಯವಿಲ್ಲ: ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಅತ್ಯಂತ ಮಹತ್ವದ ಘಟ್ಟವೆನಿಸಿದೆ. ತಮ್ಮ ಮುಂದಿನ ಕನಸು ರೂಪುಗೊಳ್ಳುವುದೇ ಪಿಯುಸಿ ಹಂತದಲ್ಲಿ. ಯಶಸ್ಸಿನ ಇನಿಂಗ್ಸ್ ಆರಂಭದಲ್ಲಿ ಉತ್ತಮ ತಳಪಾಯ ಹಾಕಬೇಕು. ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗಲಿದೆ. ಯಾವುದೇ ಅಡ್ಡದಾರಿಗಳಿಂದ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಜೀವನದಲ್ಲಿ ಏನೇ ಸಾಧಿಸಿದರೂ ಮಾನವನಾಗದಿದ್ದರೆ ಏನೂ ಪ್ರಯೋಜನವಿಲ್ಲ. ಪ್ರತಿಯೊಬ್ಬರಲ್ಲು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಏನೇ ಓದಿ, ಏನೇ ಸಾಧನೆ ಮಾಡಿದರೂ ಮನುಷ್ಯರಾಗದಿದ್ದರೂ ಎಲ್ಲ ಸಾಧನೆಗಳು ನಿರರ್ಥಕ ಆಗಲಿದೆ ಎಂದರು.