ಕೋಟಿ ಲೂಟಿ ಮಾಡಿ ಪರಾರಿಯಾದ ಭೂಪ!
ತುರುವೇಕೆರೆ: ಮುಂದಿನ ಜೀವನ ಸುಖಮಯವಾಗಲೆಂದು ಜೀವಮಿಮೆ ಮಾಡಿಸಿ ನೆಮ್ಮದಿಯಿಂದ ಇರೋಣ ಎಂದು ಭಾವಿಸಿ ಹಣ ಕಟ್ಟಿದ್ದ ತಾಲೂಕಿನ ಸುಮಾರು 20 ಸಾವಿರ ಗ್ರಾಹಕರಿಗೆ ಹಾಗೂ ಸಾವಿರಾರು ಪ್ರತಿನಿಧಿಗಳಿಗೆ ಸಂಸ್ಥೆಯ ವ್ಯಕ್ತಿಯೊಬ್ಬ ಟೋಪಿ ಹಾಕಿ ಪರಾರಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ತಾಲೂಕಿನಲ್ಲಿ ಸುಮಾರು 3-4 ಕೋಟಿಗೂ ಅಧಿಕ ಪ್ರಮಾಣದ ಹಣ ನುಂಗಿ ನೀರು ಕುಡಿದಿರುವ ಭೂಪನ ಹೆಸರು ಮೋಹನ್ಕುಮಾರ್ ಎಂದು ಹೇಳಲಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಶ್ರೀರಾಮಸೇನಾ ಸಮಿತಿ ಅಧ್ಯಕ್ಷ ಜಾನಕೆರೆ ಹೇಮಂತ್ ಮತ್ತಿತರರು ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿವರ: ಪಟ್ಟಣದ ಬಾಣಸಂದ್ರದ ಹೊರಪೇಟೆಯಲ್ಲಿ ಭಾರತೀಯ ಜೀವಮಿಮಾ ನಿಗಮದ (ಎಲ್ಐಸಿ) ವತಿಯಿಂದ ಅನುಮತಿ ಪಡೆದಿರುವ ಸಮನ್ವಯ ಮೈಕ್ರೋ ವಿಮಾ ಕಂಪನಿ ಎಂಬ ಹೆಸರಿನಲ್ಲಿ ಮಳಿಗೆಯನ್ನು ತೆರೆಯಲಾಗಿತ್ತು. ಕಳೆದ 2008 ರಿಂದ ಈ ಅಂಗಡಿಯಲ್ಲಿ ವ್ಯವಹಾರ ನಡೆಸಲಾಗುತ್ತಿತ್ತು. ಮಾಸಿಕ ಸುಲಭ ಕಂತುಗಳಲ್ಲಿ ಹಣ ಕಟ್ಟುವುದು ನಂತರ 5 ವರ್ಷಗಳ ತರುವಾಯ ಶೇ 40 ಹಣವನ್ನು ನೀಡಲಾಗುವುದು ಎಂದು ಗ್ರಾಹಕರನ್ನು ನಂಬಿಸಲಾಗಿದೆ. ಪ್ರತಿ ತಿಂಗಳು ಗ್ರಾಹಕರ ಯೋಗ್ಯತಾನುಸಾರ ಸುಮಾರು ಪ್ರತಿ ತಿಂಗಳು 100 ರಿಂದ 500 ಮಾಸಿಕ ಕಂತುಗಳನ್ನು ಕಟ್ಟಿಸಿಕೊಳ್ಳುವುದು ವಾಡಿಕೆಯಾಗಿದೆ. ತಾಲೂಕಿನಲ್ಲಿ ಸುಮಾರು 600 ಅಂಗನವಾಡಿ ಶಿಕ್ಷಕಿಯರು ಹಾಗೂ ಇತರೆ ನೂರಾರು ಮಂದಿಯನ್ನು ತನ್ನ ಪ್ರತಿನಿಧಿಯನ್ನಾಗಿಸಿಕೊಳ್ಳಲಾಗಿದೆ. ಪ್ರತಿಯೊಬ್ಬ ಪ್ರತಿನಿಧಿಗೆ ಶೇ.3ರಂತೆ ಕಮಿಷನ್ ಕೊಡುವ ಆಸೆ ನೀಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಅಂಗನವಾಡಿ ಶಿಕ್ಷಕಿಯರ ಪ್ರಭಾವ ಹೆಚ್ಚಿರುವುದರಿಂದ ಅಮಾಯಕ ಜನರು ಸುಲಭವಾಗಿ ಈ ಮೈಕ್ರೋ ವಿಮಾ ಕಂಪನಿಗೆ ಹಣ ಸಂದಾಯ ಮಾಡಿದ್ದಾರೆ. ಕಳೆದ 2008 ರಿಂದ ಈ ಯೋಜನೆ ಪ್ರಾರಂಭ ಮಾಡಲಾಗಿದೆ. ಯೋಜನೆ ಪ್ರಾರಂಭಿಸಿದ 5 ವರ್ಷಗಳಲ್ಲಿ ಹಣವನ್ನು ಬೋನಸ್ ಸಹಿತ ನೀಡುವುದು ಕಡ್ಡಾಯವಾಗಿದೆ.
ಪ್ರತಿ ತಿಂಗಳು 100 ರೂಗಳಂತೆ 5 ವರ್ಷಕ್ಕೆ 6 ಸಾವಿರವಾಗಲಿದೆ. ಇದಕ್ಕೆ ಸುಮಾರು 4 ಸಾವಿರ ಹೆಚ್ಚುವರಿಯಾಗಿ ನೀಡಿ ಸುಮಾರು 10 ಸಾವಿರ ರೂಗಳನ್ನು ನೀಡುವುದಾಗಿ ಬಾಂಡ್ ಸಹ ನೀಡಲಾಗಿದೆ. ಪ್ರತಿನಿಧಿಗಳು ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಇಲ್ಲಿಯ ಸಂಸ್ಥೆಗೆ ಕಟ್ಟಲಾಗಿದೆ.ಸಂಸ್ಥೆಯಲ್ಲಿ ಕುಳಿತಿದ್ದ ವ್ಯಕ್ತಿ ಪ್ರತಿನಿಧಿಗಳಿಂದ ಪಡೆದಿರುವ ಹಣಕ್ಕೆ ಪಾಸು ಬುಕ್ ಗಳಲ್ಲಿ ಸಂದಾಯದ ಬಗ್ಗೆ ದಾಖಲೆ ನೀಡಿದ್ದಾನೆ. ಆದರೆ ಈಗ ಗ್ರಾಹಕರು ತಾವು ಕಳೆದ 5 ವರ್ಷದಿಂದ ಹಣ ಕಟ್ಟಲಾಗಿದ್ದು ಮರುಪಾವತಿ ಮಾಡಿಕೊಳ್ಳಲು ಸಂಸ್ಥೆಯ ಬಳಿ ಬಂದಾಗ ಸಂಸ್ಥೆಯ ಬಾಗಿಲು ಹಾಕಿರುವುದು ಕಂಡು ಬಂದಿದೆ. ಆಗಲೇ ತಾವುಗಳು ಟೋಪಿ ಹೋಗಿರುವುದು ಬೆಳಕಿಗೆ ಬಂದಿದೆ. ಈಗ ಹಣ ಕಳೆದುಕೊಂಡಿರುವ ಗ್ರಾಹಕರು ಪ್ರತಿನಿಧಿಗಳನ್ನು ಹಣ ಹಿಂತಿರುಗಿಸುವಂತೆ ಒತ್ತಡ ಹೇರುತ್ತಿದ್ದಾರೆ.
ಗ್ರಾಹಕರು ಹಾಗೂ ಪ್ರತಿನಿಧಿಗಳಿಂದ ಸಂಗ್ರಹ ಮಾಡಿಕೊಂಡಿರುವ ಹಣವನ್ನು ಕಳೆದ 2010 ರ ಅಕ್ಟೋಬರ್ ತನಕದ ಹಣವನ್ನು ಮಾತ್ರ ಭಾರತೀಯ ವಿಮಾ ಸಂಸ್ಥೆಗೆ ಪಾವತಿ ಮಾಡಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರಿಂದೀಚಿನ ಹಣವನ್ನು ಗುಳುಂ ಮಾಡಲಾಗಿದೆ ಎಂದು ಜಿಲ್ಲಾ ಶ್ರೀರಾಮಸೇನಾ ಸಮಿತಿ ಅಧ್ಯಕ್ಷ ಹೇಮಂತ್ ಆರೋಪಿಸಿದ್ದಾರೆ.
15 ರಂದು ಪ್ರತಿಭಟನೆ, ಎಚ್ಚರಿಕೆ: ಪಟ್ಟಣದಲ್ಲೇ ಎಲ್ಐಸಿ ಅಧಿಕೃತ ಕಚೇರಿಯೂ ಇದ್ದು ಮೈಕ್ರೋ ವಿಮಾ ಘಟಕ ಸೂಕ್ತ ರೀತಿಯಲ್ಲಿ ಹಣ ಜಮಾ ಮಾಡದೇ ಇರುವ ಬಗ್ಗೆ ಯಾವುದೇ ತನಿಖೆ ನಡೆಸದೇ ಇರುವದು ಎಲ್ಐಸಿಯ ಬೇಜವಾಬ್ದಾರಿಯಾಗಿದೆ. ಈ ಮೈಕ್ರೋ ವಿಮಾ ಸಂಸ್ಥೆಯೂ ಸಹ ಎಲ್ಐಸಿ ಅಂಗವೇ ಆಗಿರುವುದರಿಂದ ಹಣ ಕಳೆದುಕೊಂಡಿರುವ ಎಲ್ಲಾ ಗ್ರಾಹಕರಿಗೆ ಕೂಡಲೇ ಹಣ ಮರು ಪಾವತಿ ಮಾಡಬೇಕೆಂದು ಒತ್ತಾಯಿಸಿ ಜು.15 ರಂದು ಎಲ್ ಐಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಲ್ಲದೇ ಕಚೇರಿ ಗೆ ಬೀಗ ಜಡಿಯುವುದಾಗಿ ಹೇಮಂತ್ ಎಚ್ಚರಿಕೆ ನೀಡಿದ್ದಾರೆ. ಅಂದು ಎಲ್ಲಾ ಗ್ರಾಹಕರು ಹಾಗೂ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿಲಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲು ಮಾಡಲಾಗಿದೆ. ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಮಂತ್ ಆರೋಪಿಸಿದ್ದಾರೆ.