ವಿದ್ಯಾರ್ಥಿಗಳಿಗೆ ದಕ್ಷತೆ ಅಗತ್ಯ: ರವಿಶಂಕರ್
ತುಮಕೂರು: ಐಟಿಐ ವಿದ್ಯಾರ್ಥಿಗಳು ತಾವು ಇತರರಿಗಿಂತ ಕೀಳು ಎಂಬ ಮನೋಭಾವನೆಯಿಂದ ಹೊರಬಂದು, ಮಾಡುವ ಕೆಲಸದಲ್ಲಿ ಅಚ್ಚುಕಟ್ಟು ಮತ್ತು ದಕ್ಷತೆ ರೂಢಿಸಿಕೊಂಡರೆ ಹೆಚ್ಚಿನ ಮಾನ್ಯತೆ ಪಡೆಯಬಹುದು ಎಂದು ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಸಿ.ಜಿ.ರವಿಶಂಕರ್ ಹೇಳಿದರು.
ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶ್ರೀದೇವಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕೌಶಲ್ಯಶ್ರೀ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೋಲಿಕೆ ಮಾಡಲು ಹೋಗಬಾರದು. ಇರುವುದರಲ್ಲಿಯೇ ಪರಿಣತಿ ಪಡೆದು ಮೌಲ್ಯಯುತ ಜೀವನ ನಡೆಸಬೇಕು ಎಂದರು.
ಐಟಿಐ ತರಬೇತಿ ಪಡೆದ ವಿದ್ಯಾರ್ಥಿಗಳು ಕೇವಲ ಕಾರ್ಖಾನೆಯ ಕಾರ್ಮಿಕರಾಗಿ ದುಡಿಯಲು ಮಾತ್ರ ಲಾಯಕ್ಕು ಎಂಬ ಕಾಲ ಹೋಗಿದೆ. ಐಟಿಐ ಜೊತೆಗೆ ಉನ್ನತ ವ್ಯಾಸಂಗ ಮಾಡುತ್ತಾ ಹೋದರೆ ಕಾರ್ಮಿಕರಿಂದ ಅಧಿಕಾರಿಯಾಗಿ ಬದಲಾಗುವ ಎಲ್ಲ ಅವಕಾಶವಿದೆ. ನಿರಂತರ ಅಭ್ಯಾಸ ಮಾಡುವ ಜೊತೆಗೆ ಭಾಷಾ ಪ್ರೌಢಿಮೆ, ಕಂಪ್ಯೂಟರ್ ಜ್ಞಾನ ಪಡೆದರೆ ಇತರೆ ಕೆಲಸಗಾರರಿಗಿಂತಲೂ ಎತ್ತರಕ್ಕೆ ಬೆಳೆಯಬಹುದು. ಐಟಿಐ ತರಬೇತಿ ನಂತರ ಮನೆಯಲ್ಲಿ ಕೂರದೆ ತಾವು ಕಲಿತಿದ್ದರ ಉಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಗಂಗಾಧರ ಕೊಡ್ಲಿ, ಇತ್ತೀಚಿನ ದಿನಗಳಲ್ಲಿ ಐಟಿಐ ತನಢಿ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಎಂಜಿನಿಯರ್, ಡಿಪ್ಲೊಮೋ ಕಲಿತವರು ಮಾತ್ರ ತಾಂತ್ರಿಕ ಪರ್ರಿತಿ ಹೊಂದಿರುವುದಿಲ್ಲ. ಸರಿಯಾದ ಮಾರ್ಗದಲ್ಲಿ ಐಟಿಐ ಕಲಿತರೆ ಅವರಿಗಿಂತಲೂ ಉತ್ತಮ ಪರಿಣತಿ ಹೊಂದಬಹುದು. ಮುಂದಿನ ದಿನಗಳಲ್ಲಿ ಶ್ರೀದೇವಿ ಐಟಿಐ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ವರ್ಷಕ್ಕೊಮ್ಮೆ ಎಲ್ಲರನ್ನು ಸಂಧಿಸುವ ಕಾರ್ಯ ಮಾಡಲಿದೆ. ಜೊತೆಗೆ ಕೇಂದ್ರ ಸರ್ಕಾರದ ಎಂಇಎಸ್ ಯೋಜನೆಯಡಿ ವಿಟಿಪಿ ಸೆಂಟರನ್ನು ಸಹ ತೆರೆಯಲಿದೆ ಎಂದರು.
ಬೆಂಗಳೂರಿನ ರಾಜಮನೆ ಮತ್ತು ಹೆಗಡೆ ಸರ್ವೀಸ್‌ನ ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಹೆಗಡೆ ಮಾತನಾಡಿ, ಸಾಧನೆ ಎಂಬುದು ನಿಂತ ನೀರಾಗಬಾರದ ಎಂದರು.
ಉದ್ಯಮಿ ರಾಜಮನೆ, ಶ್ರೀದೇವಿ ಐಟಿಐ ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ಸುರೇಶ್, ಕಿರಿಯ ತರಬೇತಿ ಅಧಿಕಾರಿ ಗಿರೀಶ್‌ಕುಮಾರ್, ಉಪನ್ಯಾಸಕಿ ಶೀಲಾರಾಣಿ ಇದ್ದರು.