ಸ್ವ-ಸಹಾಯ ಗುಂಪುಗಳಿಗೆ ಜಿಲ್ಲಾ ಬ್ಯಾಂಕ್ ನೆರವು
ತಿಪಟೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಕೇವಲ ಕೃಷಿ ಚಟುವಟಿಕೆಗಳಲ್ಲದೆ, ಕೃಷಿಯೇತರ ಹಾಗೂ ಮಹಿಳಾ ಸ್ವಾವಲಂಬನೆಯಂತಹ ಚಟುವಟಿಕೆಗಳಿಗೂ ಸಾಲ ಸೌಲಭ್ಯ ನೀಡುತ್ತಾ ಬಂದಿದ್ದೇವೆಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಟಿ.ವಿ.ನರಸಿಂಹಮೂರ್ತಿ ತಿಳಿಸಿದರು. ನಗರದ ರೈತಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಿಪಟೂರು ಉಪ ವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ನಬಾರ್ಡ್ ಮತ್ತು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಜಂಟಿ ಬಾಧ್ಯತಾ ಗುಂಪುಗಳ ರಚನೆ ಹಾಗೂ ಸಾಲಗಳ ಜೋಡಣೆ ಬಗ್ಗೆ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.
ಸ್ವ-ಸಹಾಯ ಗುಂಪುಗಳ ರಚನೆ ಮತ್ತು ಸಾಲ ಜೋಡಣೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಕಳೆದ ಸಾಲಿನಲ್ಲಿ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಅದರಂತೆ, ಈ ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಿ ಸಾಲ ಜೋಡಣೆ ಮಾಡುವುದು ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜವಾಬ್ದಾರಿಯಾಗಿದೆ. ಹೈನುಗಾರಿಕೆಯಲ್ಲದೇ,ಪಶು ಸಂಗೋಪನೆಗೆ ಅದ್ಯತೆ ನೀಡುವುದು. ಸಣ್ಣಪುಟ್ಟ ವ್ಯಾಪಾರಸ್ಥರು ತಮ್ಮ ದುಡಿಮೆಯ ಎಲ್ಲಾ ಹಣವನ್ನು ಲೇವಾದಾರರಿಗೆ ನೀಡಿ ನಿರ್ಗತಿಕರಾಗುವುದನ್ನು ತಪ್ಪಿಸಲು ಮತ್ತು ಉತ್ತಮವಾದ ಜೀವನ ನಿರ್ವಹಣೆ ಮಾಡಲು ನಮ್ಮ ಬ್ಯಾಂಕ್ ಈ ಜಂಟಿ ಬಾಧ್ಯತಾ ಗುಂಪುಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು. ನಬಾರ್ಡ್ ನಿವೃತ್ತ ಎ.ಜಿ.ಎಂ. ಗುಂಡೂರಾವ್ ಮಾತನಾಡಿ, ಜಂಟಿ ಬಾಧ್ಯತಾ ಗುಂಪುಗಳು ಎಂದರೇನು ಗುಂಪುಗಳ ನಿರ್ವಹಣೆ, ಗುಂಪುಗಳ ರಚನೆ ಹಾಗೂ ಸಾಲಗಳ ಜೋಡಣೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡುತ್ತಾ ಕೃಷಿ ಚಟುವಟಿಕೆ, ಕೃಷಿಯೇತರ ಚಟುವಟಿಕೆ ಮತ್ತು ಕೃಷಿ ಪೂರಕವಾದ ಚಟುವಟಿಕೆಗೆ ಹಾಗೂ ಸಮಾಜದ ಕೆಳಸ್ತರದ ಕಡು ಬಡ ವರ್ಗಗಳಿಗೆ ಸಾಲದ ಸೌಲಭ್ಯ ನೀಡುವಂತಹ ಮತ್ತು ಅವರ ಕಷ್ಟಗಳಿಗೆ ಅನುಕೂಲ ಮಾಡುಕೊಡುವುದು, ಅಸಂಘಟಿತ ವಲಯದ ಜನರು ಅನುಕೂಲಕರವಾಗುವಂತಹ ಸಾಲ ಸೌಲಭ್ಯ ನೀಡುವುದರಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್.ದೇವರಾಜ್,ಎಸ್.ಆರ್. ರಾಜಕುಮಾರ್, ನೋಡಲ್ ಅಧಿಕಾರಿ ಕುಸುಮ, ಮೇಲ್ವಿಚಾರಕರಾದ ಹೆಚ್.ಬಿ.ಜಯರಾಮ್,ಟಿ.ಪಿ.ಉಮಾಶಂಕರ್, ದಯಾನಂದ್,ರಂಗಸ್ವಾಮಿ, ಯಶವಂತ್ ಕುಮಾರ್, ತಿಪಟೂರು, ಚಿ.ನಾ.ಹಳ್ಳಿ, ತುರುವೇಕೆರೆ ತಾಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಇಒಗಳು ಮತ್ತಿತರರು ಭಾಗವಹಿಸಿದ್ದರು.