ಪ್ರತಿಭಾ ಪುರಸ್ಕಾರಕ್ಕೆಅರ್ಜಿ
ತಿಪಟೂರು: ತಾಲೂಕಿನ ದೇವಾಂಗ ನೌಕರರ ಸಂಘದ ವತಿಯಿಂದ 2012- 13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ದೇವಾಂಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜು. 31ರೊಳಗೆ ಅರ್ಜಿ ಸಲ್ಲಿಸಬಹುದೆಂದು ಸಂಘದ ಅಧ್ಯಕ್ಷರಾದ ಎಚ್.ಆರ್. ಪ್ರಕಾಶ್ ತಿಳಿಸಿದ್ದಾರೆ. ಅರ್ಜಿಗಳು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಲಿಂಗಣ್ಣ ಕಾಂಪ್ಲೆಕ್ಸ್, ಕೀರ್ತಿಲಕ್ಷ್ಮಿ ನಾವೆಲ್ಟೀಸ್ ಇಲ್ಲಿ ದೊರೆಯುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಮೊ. 9844260725 ಅಥವಾ 9902856065 ಸಂಪರ್ಕಿಸಬಹುದು.
ಎಂಟೆಕ್ ಕೋರ್ಸ್ ಬಗ್ಗೆ ಕಾರ್ಯಕ್ರಮ
ತುಮಕೂರು: ವಿಶ್ವಬ್ಯಾಂಕ್ ನೆರವು ಯೋಜನೆಯನ್ವಯ ಸಂಶೋಧನಾ ಕ್ಷೇತ್ರದ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವತಿಯಿಂದ ಸಂಶೋಧನಾ ಕ್ಷೇತ್ರದ ಸವಲತ್ತು ಬಳಕೆ ಮತ್ತು ಎಂ.ಟೆಕ್ ಕೋರ್ಸ್ ವಿಸ್ತರಣೆ ವಿಷಯ ಕುರಿತ ಕಾರ್ಯಕ್ರಮವನ್ನು ಮಂಗಳವಾರ ಏರ್ಪಡಿಸಲಾಗಿದೆ. ಎಸ್ಎಸ್ಐಟಿ ಕ್ಯಾಂಪಸ್ನಲ್ಲಿರುವ ಪಿಜಿ ಸೆಮಿನಾರ್ ಹಾಲ್ನಲ್ಲಿ ಮಧ್ಯಾಹ್ನ 3.30ಗಂಟೆಗೆ ಸಮಾರಂಭ ಪ್ರಾರಂಭವಾಗಲಿದ್ದು, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಜಿ. ಪರಮೇಶ್ವರ್, ಫೆಲೋಷಿಪ್ ಪಡೆದ 48 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಕೆ.ಎ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬಾಲಕ ಸಾವು
ಚಾಮರಾಜನಗರ: 209 ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶಾಲಾ ಬಾಲಕನೊಬ್ಬ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ತಾಲೂಕಿನ ಅಂಕಶೆಟ್ಟಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರದೀಪ್ಕುಮಾರ್(13) ಮೃತಪಟ್ಟಿದ್ದು, ಆತನ ಸಹಪಾಠಿ ಚಂದನ್ಕುಮಾರ್(13) ತೀವ್ರ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊಲೆ ಪ್ರಕರಣ: ಚಿಕ್ಕಪ್ಪನ ಮೇಲೆ ಹಲ್ಲೆ
ತುರುವೇಕೆರೆ: 13 ತಿಂಗಳ ಮಗು ವಿಶಾಲ್ ಕೊಲೆಯಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಮೃತ ಮಗುವಿನ ಚಿಕ್ಕಪ್ಪನ ಮೇಲೆ ಮಗುವಿನ ತಾಯಿ ಸಹಿತ ಸುಮಾರು 12 ಮಂದಿ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಕರಡಗೆರೆಯಲ್ಲಿ ಕಳೆದ ಗುರುವಾರ ಸಾಯಂಕಾಲ ಮಗು ವಿಶಾಲ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ಹಿನ್ನಲೆಯಲ್ಲಿ ತಂದೆ ರಘುಕುಮಾರ್, ಅಜ್ಜ ಲಕ್ಷ್ಮಣ್ ಹಾಗೂ ಅಜ್ಜಿ ರಂಗಮ್ಮ ಅವರನ್ನು ಕೊಲೆ ಮಾಡಿರುವ ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಮಧ್ಯೆ ಮಗುವಿನ ಚಿಕ್ಕಪ್ಪ ಬೆಂಗಳೂರಿನಿಂದ ಬಂದು ಕರಡಗೆರೆಯ ತಮ್ಮ ಸ್ವಂತ ಮನೆಯಲ್ಲಿ ಉಳಿದುಕೊಂಡಿದ್ದರು. ಆ ವೇಳೆ ಚಿಕ್ಕಪ್ಪ ನವೀನ್ಕುಮಾರ್ ಮಗುವಿನ ತಾಯಿ ಸುನಿತಾರವರಿಗೆ ಮಗು ಸಾವಿನ ಬಗ್ಗೆ ಹಾಗೂ ತಮ್ಮ ಕುಟುಂಬದ ಸದಸ್ಯರನ್ನು ಜೈಲಿಗೆ ಕಳಿಸಿದ್ದ ಬಗ್ಗೆ ಗಲಾಟೆ ಮಾಡಿದರು ಎಂದು ಸುನಿತಾ ಸ್ಥಳೀಯ ಪೊಲೀಸರಲ್ಲಿ ದೂರು ನೀಡಿದ್ದರು. ಠಾಣೆಗೆ ಕರೆದು ವಿಚಾರಣೆ ನಡೆಸಿ ಯಾವುದೇ ತಂಟೆಗೆ ಹೋಗದಂತೆ ಭಾನುವಾರ ಪೊಲೀಸರು ಸೂಚನೆ ನೀಡಿದ್ದರು. ಆದರೆ, ಭಾನುವಾರ ತಡರಾತ್ರಿ ಮನೆಯಲ್ಲಿದ್ದ ಸುನಿತಾಳ ಸಂಬಂಧಿಗಳು ಹಾಗೂ ಹಲವಾರು ಮಂದಿ ಮೋಟಾರ್ ಸೈಕಲ್ನಲ್ಲಿ ಬಂದು ಚಿಕ್ಕಪ್ಪ ನವೀನ್ಕುಮಾರ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಅಂಗವಿಕಲನಾಗಿರುವ ನವೀನ್ಕುಮಾರ್ನನ್ನು ರಾತ್ರಿ ಸುನಿತಾ, ಆಕೆಯ ತಂದೆ ರಾಮೇಗೌಡ, ಮಾವ ಶಂಕರ್ ಹಾಗೂ ಬಂದಿದ್ದ ಆಗುಂತಕರು ತಮ್ಮನ್ನು ಮನಸೋಇಚ್ಛೆ ಥಳಿಸಿ ಗಾಯಗೊಳಿಸಿದ್ದಾರೆ ಎಂದು ನವೀನ್ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. ನವೀನ್ಕುಮಾರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.