ವಿಪತ್ತು ನಿರ್ವಹಣೆಗೆ ಯೋಜನೆ ಬೇಕು
ಕ.ಪ್ರ.ವಾರ್ತೆ ತುಮಕೂರು ಜು. 22
ದೇಶದ ಶೇ. 60ರಷ್ಟು ಭೂಪ್ರದೇಶ ಪ್ರಕೃತಿ ವಿಕೋಪಕ್ಕೆ ಗುರಿಯಾಗುತ್ತಿದೆ. ಹಲವು ಸಾವಿರ ಕೋಟಿ ರು.ಗಳನ್ನು ಸರ್ಕಾರಗಳು ಪ್ರಕೃತಿ ವಿಕೋಪ ನಿರ್ವಹಣೆಗೆ ವ್ಯಯಿಸುತ್ತಿವೆ. ಪ್ರಕೃತಿ ವಿಕೋಪದಲ್ಲಿ ಅಮೂಲ್ಯ ಜೀವ ಹಾಗೂ ಆಸ್ತಿ ಹಾನಿ ಉಂಟಾಗುತ್ತಿದ್ದು, ಇದು ದೇಶದ ಪ್ರಗತಿಗೆ ಅಡ್ಡಿಯಾಗಿದೆ ಎಂದು ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಆರ್. ಧರ್ಮರಾಜು ಅವರು ತಿಳಿಸಿದರು.
ಅವರು ಊರುಕೆರೆಯ ಜಿಲ್ಲಾ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಪ್ರಾಯೋಜಕತ್ವದ ಅಡಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಪತ್ತು ನಿರ್ವಹಣಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸಂಭವಿಸಬಹುದಾದ ವಿಕೋಪಗಳೇನು, ಕೈಗೊಳ್ಳಬೇಕಾದ ಕ್ರಮ ಕುರಿತು ಕಾರ್ಯಾಗಾರದಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು. ವಿಕೋಪ ನಿರ್ವಹಣೆಯಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುದರ ಕುರಿತು ಚರ್ಚಿಸಲಾಗುವುದು ಮತ್ತು ಅದಕ್ಕೆ ಪರಿಹಾರ ಕಂಡುಕೊಂಡು ವಿಪತ್ತು ನಿರ್ವಹಣಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ವಿವರಿಸಿದರು.
ಮತ್ತೋರ್ವ ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಡಾ. ಜಿ. ವಿಶ್ವನಾಥ್ ಮಾತನಾಡಿ, ಪ್ರಕೃತಿ ಅಥವಾ ಮಾನವ ನಿರ್ಮಿತ ವಿಕೋಪ ಸಂಭವಿಸಿದಾಗ, ಪರಿಸ್ಥಿತಿಯ ನಿರ್ವಹಣೆ ಸ್ಥಳೀಯ ಆಡಳಿತದ ವ್ಯಾಪ್ತಿಯನ್ನು ಮೀರಿದಾಗ ಅಂತಹ ಸನ್ನಿವೇಶವನ್ನು ವಿಪತ್ತು ಎಂದು ಕರೆಯಲಾಗುವುದು. ಪ್ರಕೃತಿ ವಿಪತ್ತು ನಿರ್ವಹಣೆಯನ್ನು ಸಮಗ್ರವಾಗಿ ಎದುರಿಸಲು ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎಂಎ(ನ್ಯಾಷನಲ್ ಡಿಸಾಸ್ಟ್ರರ್ ಮ್ಯಾನೇಜ್‌ಮೆಂಟ್ ಆಥಾರಿಟಿ), ರಾಜ್ಯ ಮಟ್ಟದಲ್ಲಿ ಎಸ್‌ಡಿಎಂಎ ಮತ್ತು ಜಿಲ್ಲಾ ಮಟ್ಟದಲ್ಲಿ ಡಿಡಿಎಂಎ ಪ್ರಾಧಿಕಾರ ರಚಿಸಲಾಗಿದೆ ಎಂದರು.
ಹೆಚ್ಚಿನ ಪ್ರಮಾಣದ ಜೀವ ಹಾಗೂ ಆಸ್ತಿ ನಷ್ಟ ತಡೆಗಟ್ಟುವ ಕಾರ್ಯವಿಧಾನಗಳನ್ನು ಭಾರತ ಸರ್ಕಾರವು ವಿಕೋಪ ನಿರ್ವಹಣಾ ಕಾಯ್ದೆ 2005 ರ ಮೂಲಕ ಅನುಷ್ಠಾನಕ್ಕೆ ತಂದಿದೆ.
ಈ ನಿಟ್ಟಿನಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯನ್ನು ವಿವಿಧ ಮಟ್ಟದ ಎಲ್ಲಾ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಮುದಾಯ, ಸಿಬ್ಬಂದಿ ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ತಯಾರಿಸಬೇಕಾಗಿರುತ್ತದೆ ಎಂದು ತಿಳಿಸಿದರು.
ರಾಜ್ಯದ ಶೇ.23ರಷ್ಟು ಭಾಗ ಭೂಕಂಪ, 15 ಜಿಲ್ಲೆಗಳು ಪ್ರವಾಹ, ಬಿರುಗಾಳಿ ಹಾಗೂ ಚಂಡಮಾರುತದ ಅಂಚಿನಲ್ಲಿದೆ. ಸಮುದ್ರತೀರದ ಜಿಲ್ಲೆಗಳಲ್ಲಿ ಚಂಡಮಾರುತ, ಕಡಲಕೊರೆತ, ಭೂಕಂಪ ಮತ್ತು ಭೂಕುಸಿತದ ಭೀತಿ ಎದುರಾಗಿದೆ. ರಾಜ್ಯದ ಒಟ್ಟು ಭೂಭಾಗದ 152.18 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶ ಅನಾವೃಷ್ಟಿ ಎದುರಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚನ್ನಮಲ್ಲಯ್ಯ, ತುಮಕೂರು ಜಿಲ್ಲೆ ಪ್ರಕೃತಿ ವಿಕೋಪಗಳಿಂದ ಬಹುತೇಕ ಸುರಕ್ಷಿತವಾಗಿದೆ. ಆದರೂ ಅಗ್ನಿದುರಂತ, ಮಾನವ ಪ್ರಾಣಿ ಸಂಘರ್ಷಗಳಂತಹ ವಿಪತ್ತುಗಳನ್ನು ನಾವು ಸಧ್ಯದ ಪರಿಸ್ಥಿತಿಯಲ್ಲಿ ಎದುರಿಸುತ್ತಿದ್ದೇವೆ. ವಿಪತ್ತನ್ನು ನಿರ್ವಹಿಸಲು ಎಲ್ಲಾ ಇಲಾಖೆಗಳ ಸಹಕಾರ ಅತ್ಯಗತ್ಯ ಮತ್ತು ವಿಪತ್ತು ನಿರ್ವಹಣಾ ಯೋಜನೆಯನ್ನು ಎಲ್ಲಾ ಇಲಾಖೆಗಳು ಪೂರ್ವಯೋಜಿತವಾಗಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸುಜಾತ, ಉಪವಿಭಾಗಾಧಿಕಾರಿಗಳಾದ ಶಿಲ್ಪ, ಅನಿತ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ವಿಪತ್ತು ನಿರ್ವಹಿಸಲು ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದ್ದು, ಈ ಪ್ರಾಧಿಕಾರಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಂಭವಿಸಬಹುದಾದ ವಿಪತ್ತುಗಳ ಕುರಿತಂತೆ ಯೋಜನೆ ರಚಿಸಿ, ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಪ್ರತಿ ಜಿಲ್ಲೆಯ ಯೋಜನೆಗಳನ್ನು ಕಾಲಕಾಲಕ್ಕೆ ಪುನರ್‌ರಚಿಸಿ, ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.
ಆರ್. ಧರ್ಮರಾಜು