'ಸೇವಾ ಮನೋಭಾವದಿಂದ ಜೀವನ ಸಾರ್ಥಕ'
ಕ.ಪ್ರ.ವಾರ್ತೆ ಮಧುಗಿರಿ ಜು. 22
ಸಮಾಜದಲ್ಲಿ ಪ್ರತಿಯೊಬ್ಬರು ಸೇವಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಂ. ಮಂಜುನಾಥಶೆಟ್ಟಿ ಕರೆ ನೀಡಿದರು.
ಇತ್ತಿಚೆಗೆ ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಮಧುಗಿರಿ ರೋಟರಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸ ಮಾಡಲು ರೋಟರಿ ಸಂಸ್ಥೆ ಸಹಕಾರಿ. ಯುವ ಜನಾಂಗ ರೋಟರಿ ಸಕ್ರಿಯ ಸದಸ್ಯರಾಗುವ ಮೂಲಕ ಸಮಾಜಸೇವೆ ಮಾಡುವ ಮೂಲಕ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದರು.
ಮುಖ್ಯ ಅತಿಥಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಸಮಾಜದಲ್ಲಿ ನೊದಂವರಿಗೆ ಆರೋಗ್ಯ, ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಸೇವೆ ಅಮೂಲ್ಯವಾದುದು ಎಂದ ಅವರು, ಇಂದಿನ ಜಗತ್ತಿನಲ್ಲಿ ದುಷ್ಟ ಶಕ್ತಿಗಳು ಭಯೋತ್ಪಾದನೆ ಮೂಲಕ ದೇಶವನ್ನು ಛಿದ್ರಗೊಳಿಸಲು ಯತ್ನಿಸುತ್ತಿರುವುದು ವಿಷಾದದ ಸಂಗತಿ. ಆದರೆ, ರೋಟರಿ ಸಂಸ್ಥೆ ಸಂಘಟನೆ ಮೂಲಕ ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಂ.ವೆಂಕಟರಾಮು ಮುಂಬರುವ ದಿನಗಳಲ್ಲಿ ರೋಟರಿ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ತಂಗುದಾಣ, ಬಡವರಿಗೆ ಮನೆ, ಕುವೆಂಪು ಶಾಲೆಗಳಿಗೆ ಗ್ರಂಥಾಲಯ ನಿರ್ಮಿಸಿ ಸಾರ್ವಜನಿಕರಿಗೆ ರೋಟರಿ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ತಾಯಿ ಮತ್ತು ಮಗುವಿನ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಚಲನಚಿತ್ರ ನಿರ್ಮಾಪಕ ಮುರುಳೀಧರ ಹಾಲಪ್ಪ, ರೋಟರಿ ಉಪರಾಜ್ಯಪಾಲ ರಾಜೇಶ್ ಹಿರೇಮಠ್, ಎಚ್.ಕೆ.ವಿ. ರೆಡ್ಡಿ ಮಾತನಾಡಿದರು. ಲತಾನಾರಾಯಣ್, ಡಿ.ಜಿ.ಶಂಕರನಾರಾಯಣಶಟ್ಟಿ, ನಂಜುಂಡಯ್ಯ, ರೆಡ್ಡಿ, ಅನ್ನಪೂರ್ಣಮ್ಮ, ಕೆ.ಎಂ.ಮಧು ಉಪಸ್ಥಿತರಿದ್ದರು. ಮಲ್ಲಿಕಾರ್ಜುನಯ್ಯ ಸ್ವಾಗತಿಸಿ, ವಂದಿಸಿದರು.