ಪೂಜೆಗಿಂತ ಭಗವಂತನ ಮೇಲೆ ಅಚಲ ನಂಬಿಕೆ ಮುಖ್ಯ
ಗುರುಪೂರ್ಣಿಮಾಚರಣೆ ಸಾಯಿ-ಸತ್ಸಂಗ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ತುಮಕೂರು, ಜು.24
ಶಿರಡಿ ಸಾಯಿಬಾಬಾ ಬೇಡಿದವರ ಕಲ್ಪವೃಕ್ಷ ಮತ್ತು ಕಲಿಯುಗದ ಕಾಮಧೇನು ಎಂದು ಶಿಡ್ಲುಕೋಣ ಕ್ಷೇತ್ರದ ಮಹರ್ಷಿ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಸಾಯಿ ಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಯನಗರದ ಸಾಯಿ ಬಾಬಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾಚರಣೆ ಸಾಯಿ-ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಾವು ನಮ್ಮ ಕಾಮನೆಗಳನ್ನು ಮುಂದಿಟ್ಟು ಭಗವಂತನಿಗೆ ಆಮಿಷಗಳನ್ನು ಒಡ್ಡುತ್ತೇವೆ. ಅಭಿಷೇಕ, ಮಜ್ಜನ, ಪೂಜೆ ಪುನಸ್ಕಾರಗಳಿಗಿಂತ ಹೆಚ್ಚಾಗಿ ಭಗವಂತನಿಗೆ ಬೇಕಿರುವುದು ಆತನ ಮೇಲೆ ಅಚಲವಾದ ನಂಬಿಕೆ ಮತ್ತು ಸಹನೆ ಎಂದರು.
ಟ್ರಸ್ಟ್ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಎಂ.ಹೆಚ್. ಗೋಪಾಲ್ ಮಾತನಾಡಿ ದಾನ ಮಾಡುವ ಇಚ್ಚೆಯಾದಾಗ ಮತ್ತು ದಾನ ಮಾಡಲು ಸಮರ್ಥನಾದಾಗ ತನ್ನ ಚಂಚಲ ಮನಸ್ಸಿಗೆ ಕಡಿವಾಣ ಹಾಕಿ ಕೂಡಲೇ ದೀನ ದಲಿತರಿಗೆ ಮತ್ತು ಅಶಕ್ತರಿಗೆ ದಾನ ಮಾಡಬೇಕು. ದಾನವಿಲ್ಲದ ಜೀವನ ಪರಿಮಳವಿಲ್ಲದ ಪುಷ್ಪದಂತೆ ಎಂದರು.
ಗುರುಪೂರ್ಣಿಮಾಚರಣೆ ಅಂಗವಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತಲ್ಲದೆ ವಾಸನ್ ಐ ಕೇರ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಿ ರಕ್ತದೊತ್ತಡ, ಡಯಾಬಿಟೀಸ್ ಹಾಗೂ ನೇತ್ರ ಪರೀಕ್ಷೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಸುಮಾರು 50 ವರ್ಷಗಳಿಂದ ಸಾಯಿ ಭಜನೆಯಲ್ಲಿ ನಿರತರವಾಗಿರುವ ನ್ಯಾಯಾಂಗ ಇಲಾಖೆ ನಿವೃತ್ತ ಅಧಿಕಾರಿ ಎಸ್. ಮಹದೇವಯ್ಯನವರಿಗೆ ಸಾಯಿ ಭಜನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತುಮಕೂರಿನ ನ್ಯಾಯಾಧೀಶ ಎಸ್. ರಾಮು, ದೇವರಾಜು, ನಿವೃತ್ತ ನ್ಯಾಯಾಧೀಶ ಸಚ್ಚಿದಾನಂದ ಪ್ರಸಾದ್, ಗೆಳೆಯರ ಬಳಗದ ಗೋವಿಂದರಾಜು, ಸಾಯಿ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಜಿ. ಭಾನುಪ್ರಸಾದ್, ಅಧ್ಯಕ್ಷ ನರಸೇಗೌಡ, ಪ್ರಧಾನ ಕಾರ್ಯದರ್ಶಿ ಡಾ. ಅಂಜನಕುಮಾರ್ ವಾಲ್ಮೀಕಿ, ಕಾನೂನು ಸಲಹೆಗಾರ ಹೆಚ್. ಲೋಕೇಶ್, ಉಪಾಧ್ಯಕ್ಷ ಬಿ.ಆರ್. ಪರಮೇಶ್, ಡಾ. ಚೈತನ್ಯ ವರ್ಧನ್, ಟ್ರಸ್ಟಿಗಳಾದ ಸುಜಾತ, ಪ್ರವೀಣ ಶಿಂದೆ, ಮಹಾಲಕ್ಷ್ಮೀ, ಪದ್ಮ ಉಪಸ್ಥಿತರಿದ್ದರು. ಡಾ. ಟಿ.ಜೆ. ಸಂಜಯನಾಯಕ್ ನಿರೂಪಿಸಿದರು. ವೀರಪ್ಪದೇವರು ಸ್ವಾಗತಿಸಿ ಸತೀಶ್ ವೀರಭದ್ರಪ್ಪ ವಂದಿಸಿದರು.