ಫೆಲೋಶಿಪ್ ವಿತರಣೆ
ತುಮಕೂರು: ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದಲ್ಲಿ ಜ್ಞಾನಾರ್ಜನೆ ಮಾಡಲು ಅನುಕೂಲವಾಗುವಂತೆ ಫೆಲೋಶಿಪ್ ನೀಡಲಾಗುತ್ತಿದೆ ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ ಹೇಳಿದರು. ವಿಶ್ವಬ್ಯಾಂಕ್ ನೆರವು ಯೋಜನೆಯನ್ವಯ ಸಂಶೋಧನಾ ಕ್ಷೇತ್ರದ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಸಂಶೋಧನಾ ಕ್ಷೇತ್ರದ ಸವಲತ್ತು ಬಳಕೆ ಮತ್ತು ಎಂ.ಟೆಕ್ ಕೋರ್ಸ್ ವಿಸ್ತರಣೆ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊದಲ ಬಾರಿಗೆ ಈ ಸಂಸ್ಥೆಯಲ್ಲಿ ವಿಶ್ವಬ್ಯಾಂಕ್ ನೆರವು ಯೋಜನೆಯನ್ವಯ ಸಂಶೋಧನಾ ಮತ್ತು ಎಂಟೆಕ್ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕಿದೆ. ಇದರಿಂದ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಕೆ.ಎ. ಕೃಷ್ಣಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸಿ.ಎನ್. ನರಸಿಂಹಮೂರ್ತಿ 42 ವಿದ್ಯಾರ್ಥಿಗಳಿಗೆ ಫೆಲೋಶಿಪ್ ವಿತರಿಸಿದರು. ಸಿದ್ಧಾರ್ಥ ವಿವಿಯ ರಿಜಿಸ್ಟ್ರಾರ್ ಪ್ರೊ. ಎಂ.ಝೆಡ್. ಕುರಿಯನ್, ಉಪಪ್ರಾಂಶುಪಾಲ ವೀರಯ್ಯ, ವಿಶ್ವಬ್ಯಾಂಕ್ ನೆರವು ಯೋಜನಾ ವಿಭಾಗದ ಸಂಯೋಜಕ ಪ್ರೊ. ಅಶೋಕ್ ಮೆಹ್ತಾ ಇದ್ದರು.
ಮತಗಟ್ಟೆ ಕೇಂದ್ರಗಳ ಭೌತಿಕ ಪರಿಶೀಲನೆ
ಶಿರಾ: ನಂ. 136, ಶಿರಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಕೇಂದ್ರಗಳ ಭೌತಿಕ ಪರಿಶೀಲನಾ ಕಾರ್ಯ ನಡೆಯುತ್ತಿದ್ದು ಯಾವುದಾದರೂ ಮತಗಟ್ಟೆ ಕೇಂದ್ರದ ಕಟ್ಟಡ ಶಿಥಿಲಾವಸ್ಥೆ ಅಥವಾ ಅಪಾಯದ ಸ್ಥಿತಿಯಲ್ಲಿದ್ದು, ಅಂತಹ ಸ್ಥಳದಲ್ಲಿಯೇ ವಿಶಾಲವಾದ ವ್ಯವಸ್ಥಿತವಾದ ಕುಡಿಯುವ ನೀರು, ಶೌಚಾಲಯದ ಸೌಲಭ್ಯವುಳ್ಳ 2 ಬಾಗಿಲುಗಳು ಕಟ್ಟಡದ ಲಭ್ಯತೆ ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆಗಾಗಿ ಹಾಗೂ ಮತಗಟ್ಟೆ ಕೇಂದ್ರಗಳ ಬಗ್ಗೆ ಇನ್ನೇನಾದರೂ ಸಮಸ್ಯೆಗಳಿದ್ದಲ್ಲಿ ಅಂತಹ ಸಮಸ್ಯೆಗಳ ವಿವರಗಳನ್ನು ಶಿರಾ ತಾಲೂಕು ತಹಶೀಲ್ದಾರ್ ಅವರ ಗಮನಕ್ಕೆ ಲಿಖಿತವಾಗಿ ಶೀಘ್ರವಾಗಿ ಸಲ್ಲಿಸುವಂತೆ ತಹಶೀಲ್ದಾರ್ ಕುಲಕರ್ಣಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ. 23ರಿಂದ ಕೃಷಿ ಉತ್ಪನ್ನಗಳ ಮಹಾಮೇಳ
ಮಂಡ್ಯ: ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಮೀಡಿಯಾ ಟುಡೇ ಗ್ರೂಪ್ನ ಸಹಯೋಗದಲ್ಲಿ ಆಗಸ್ಟ್ 23 ರಿಂದ 3 ದಿನಗಳ ಕಾಲ ಬೆಂಗಳೂರಿನಲ್ಲಿ ಆಹಾರ ಮತ್ತು ಕೃಷಿ ಉತ್ಪನ್ನಗಳ ಮಹಾಮೇಳ ಆಯೋಜಿಸಲಾಗಿದೆ. ಈ ಮಹಾ ಮೇಳದಲ್ಲಿ ರಾಜ್ಯ ಎಲ್ಲ ಭಾಗಗಳ ರೈತರ, ರೈತ ನಿಯೋಗಗಳು, ರೈತ ಸಂಘಟನೆಗಳು ಭಾಗವಹಿಸಲಿದ್ದು, ಮೇಳದಲ್ಲಿ ಹೈನುಗಾರಿಕೆ, ಕೋಳಿಸಾಕಣಿಕೆ, ಜಾನುವಾರು ಎಂಬ ಹೆಸರಿನಡಿಯಲ್ಲಿ ವೈವಿಧ್ಯಮಯ ಕೃಷಿ ಜಗತ್ತು ಅನಾವರಣ ಆಗಲಿದೆ. ಸುಮಾರು 250 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರದರ್ಶಕರು ಮೇಳದಲ್ಲಿ ಪಾಲ್ಗೊಳ್ಳಲಿದ್ದು, ನೆದರ್ಲ್ಯಾಂಡ್ನಿಂದ 25, ಟರ್ಕಿಯಿಂದ 23, ಇಟಲಿಯಿಂದ 11 ಕಂಪನಿಗಳು ಭಾಗವಹಿಸಿ ಆಹಾರ ಕೃಷಿ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ. ಅಲ್ಲದೇ ಜರ್ಮನಿ, ಫ್ರಾನ್ಸ್, ಸ್ಪೇನ್, ತೈವಾನ್, ಬೆಲ್ಜಿಯಂ, ಥೈಲೆಂಡ್, ಇರಾನ್, ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರದರ್ಶಕರು ಆಗಮಿಸಲಿದ್ದಾರೆ. ಆದ್ದರಿಂದ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಫುಡ್ಸ್ ಇಂಡಿಯಾ ಪ್ರದರ್ಶನದ ಮುಖ್ಯ ಸಂಯೋಜಕ ಜಾಫರ್ ನಕ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ. 011-65656554, 41407851.
ಆತ್ಮಹತ್ಯೆಗೆ ಯತ್ನಿಸಿದ ಸ್ನೇಹಿತರು: ಒಬ್ಬ ಸಾವು
ಶ್ರೀರಂಗಪಟ್ಟಣ: ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮದ ಬಳಿ ಇರುವ ಕಾವೇರಿ ನದಿಯ ತೀರದಲ್ಲಿ ಸ್ನೇಹಿತರಿಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಒಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರು ತಾಲೂಕು ಮೆಲ್ಲಹಳ್ಳಿಯ ಜಯರಾಮೇಗೌಡ ಅವರ ಪುತ್ರ ಕುಮಾರ್ (21) ಮೃತ ಯುವಕ. ಅದೇ ಗ್ರಾಮದ ಮರೀಸ್ವಾಮಿ ಅವರ ಪುತ್ರ ರವಿ ಅಸ್ವಸ್ಥಗೊಂಡಿದ್ದು, ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಮಾರ್ನ ಸಾವಿನ ಬಗ್ಗೆ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.