ಫ್ಲೋರೈಡ್ಯುಕ್ತ ನೀರು ಸೇವನೆ ವಿರುದ್ಧ ಬೀದಿ ಜಾಗೃತಿ
ಕ.ಪ್ರ.ವಾರ್ತೆ ತುಮಕೂರು ಜು. 24
ಫ್ಲೋರೈಡ್ಯುಕ್ತ ವಿಷ ಪೂರಿತ ನೀರು ಸೇವನೆ ಸೇರಿದಂತೆ ಬಯಲು ಮಲ ವಿಸರ್ಜನೆಯಿಂದ ಗ್ರಾಮೀಣ ಜನತೆ ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದು ಜಾಗೃತರಾಗಿ ರೋಗಮುಕ್ತರಾಗಿ ಎಂದು ಜಾನಪದ ಕಲಾವಿದ ರಂಗಸಮುದ್ರ ಜಯರಾಮ್ ತಿಳಿಸಿದರು.
ರಾಜ್ಯ ಸರ್ಕಾರ ಹಾಗೂ ಸ್ಮಾರ್ಟ್ ಇಂಡಿಯಾ ಪ್ರೈ.ಲಿ.ಹೈದಾರಾಬಾದ್ ಇವರ ವತಿಯಿಂದ ತಾಲೂಕಿನ ಶೈಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬೀದಿ ನಾಟಕ ಆಡುವ ಮೂಲಕ ಜನ ಜಾಗೃತಿಗೊಳಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದ ಜನರು ಸರ್ಕಾರ ಕಲ್ಪಿಸಿದ ನಿರ್ಮಲ ಭಾರತ್ ಯೋಜನೆ ಸದುಪಯೋಗ ಪಡಿಸಿಕೊಳುವ ಮೂಲಕ ತಮ್ಮ ಮನೆಗಳ ಬಳಿ ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಂಡು ರೋಗ ಮುಕ್ತರಾಗಿ ಎಂದು ಸಲಹೆ ನೀಡಿದರು. ತಾಲೂಕಿನಾದ್ಯಂತ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದು ಈ ನೀರು ಸೇವಿಸಿದ ಬಹುತೇಕ ಜನತೆ ಈಗಾಗಲೇ ಅಂಗವಿಕಲತೆ, ಮೂಳೆ ಹಾಗೂ ಹಲ್ಲಿನ ಸವೆತ, ಮೈ ಕೈ ನೋವು ಸೇರಿದಂತೆ ನಾನಾ ತರಹದ ರೋಗಗಳಿಗೆ ತುತ್ತಾಗಿದ್ದು, ಫ್ಲೋರೈಡ್ ಅಂಶವಿರುವ ನೀರು ಸೇವಿಸಿದ ಬಹುತೇಕ ಗರ್ಭಿಣಿ ಮಹಿಳೆಯರಲ್ಲಿ ಈ ರೋಗ ಹರಡಿರುವುದರಿಂದ ಹುಟ್ಟಿದ ಮಗು ಕೂಡ ಅಂಗವಿಲರಾಗುವ ಸಾದ್ಯತೆಗಳಿವೆ ಎಂದರು.
ವಿಷ ಪೂರಿತ ನೀರನ್ನು ನಿಯಂತ್ರಿಸಿ ತಾಲೂಕಿನ ಜನತೆಗೆ ಶುದ್ಧ ನೀರು ಕಲ್ಪಿಸುವ ಹಿನ್ನಲೆಯಲ್ಲಿ ಸ್ಮಾರ್ಟ್ ಇಂಡಿಯಾ ಪ್ರೈ,ಲಿ,ಹೈದಾರಾಬಾದ್ ಇವರು ತಾಲೂಕಿನ ಪ್ರತಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದು ಈ ಘಟಕಗಳಿಂದ ಶುದ್ದೀಕರಿಸಿದ ನೀರು ಸೇವಿಸುವ ಮೂಲಕ ಎಲ್ಲರು ಆರೋಗ್ಯವಂತರಾಗಿ ಎಂದು ಕರೆ ನೀಡಿದರು.