ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿಗಳಿಗೆ ನಿತ್ಯ ನರಕ ಪಳವಳ್ಳಿ ಪ್ರೌಢಶಾಲೆ ಹಾಸ್ಟೆಲ್

Srinivasa Murthy VN
Updated On : 24 Jul 2013, 10:31 am

ಕ.ಪ್ರ.ವಾರ್ತೆ ಪಾವಗಡ ಜು. 24
ತಾಲೂಕಿನ ಪಳವಳ್ಳಿ ಪ್ರೌಢಶಾಲೆ ವಿದ್ಯಾರ್ಥಿ ನಿಲಯ ಸೇರಿದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ಬಹುತೇಕ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ಹಾಗೂ ಶುಚಿತ್ವ ಕಾಪಾಡುವಲ್ಲಿ ನಿಲಯ ಪಾಲಕರು ವಿಫಲರಾದ ಕಾರಣ ಬಡ ವಿದ್ಯಾರ್ಥಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ.
ಇಲಾಖೆಯ ಪಳವಳ್ಳಿಯ ಎಸ್‌ಸಿ, ಎಸ್‌ಟಿ ಪ್ರೌಢಶಾಲೆ ವಿದ್ಯಾರ್ಥಿ ನಿಲಯ, ಎಸ್.ಆರ್.ಪಾಳ್ಯ ವಿದ್ಯಾರ್ಥಿ ನಿಲಯ ಹಾಗೂ ಪಟ್ಟಣದ ಪಿಯುಸಿ ಹಾಸ್ಟೆಲ್‌ಗಳಲ್ಲಿ ನಿಯಮಾನುಸಾರ ಆಹಾರ ವಿತರಣೆ ಸೇರಿದಂತೆ ಕೊಳೆತ ತರಕಾರಿ ಹಾಕಿದ ಕಳಪೆ ಆಹಾರ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಪೌಷ್ಟಿಕತೆ ಕೊರತೆ ಕಾಡುತ್ತಿದ್ದು ಬಹುತೇಕ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿ ನಾನಾ ರೀತಿಯ ಹಿಂಸೆ ಅನುಭವಿಸುತ್ತಿದ್ದಾರೆ.
ರಾಜ್‌ಕುಮಾರ್ ಎಂಬ ನಿಲಯ ಪಾಲಕರೊಬ್ಬರ ನಿರ್ಲಕ್ಷ್ಯದಿಂದ ಪಳ್ಳವಳ್ಳಿಯ ಎಸ್‌ಸಿ ಎಸ್‌ಟಿ ಪ್ರೌಢಶಾಲೆ ವಿದ್ಯಾರ್ಥಿ ನಿಲಯದಲ್ಲಿ ಕೊಳೆತ ತರಕಾರಿ, ಕಳಪೆ ಮಟ್ಟದ ಅಕ್ಕಿಯಿಂದ ಮಾಡಿದ ಊಟ ತಿಂಡಿಯನ್ನು ನಿತ್ಯ ವಿದ್ಯಾರ್ಥಿಗಳಿಗೆ ಬಡಿಸುತ್ತಿರುವುದಲ್ಲದೇ ಶೌಚಾಲಯಗಳ ಗಲೀಜು ಸೇರಿದಂತೆ ಅನೇಕ ದಿನಗಳಿಂದ ಶುಚಿತ್ವ ಕಾಣದೇ ಹಾಸ್ಟೆಲ್ ಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ವಿದ್ಯಾರ್ಥಿ ನಿಲಯದ ಸುತ್ತ ಸೊಳ್ಳೆಗಳ ಹಾವಳಿ ಹೆಚ್ಚಿರುವ ಕಾರಣ ರಾತ್ರಿ ವೇಳೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿರುವುದಾಗಿ ಇಲ್ಲಿನ ಸಂಘಟನೆಗಳು ಆರೋಪಿಸಿವೆ.
ಹಾಸ್ಟೆಲ್‌ನ ಕೊಠಡಿಗಳು ಹಾಗೂ ಶೌಚಾಲಯಗಳು ನೈರ್ಮಲ್ಯ ಕಾಣದೆ ಗಬ್ಬುನಾಥದಿಂದ ಕೂಡಿವೆ. ನಿಲಯ ಪಾಲಕನ ಭಯದಿಂದ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದೇ ವಿದ್ಯಾರ್ಥಿಗಳು ನಿತ್ಯ ನರಕ ಅನುಭವಿಸುತ್ತಿರುವುದಾಗಿ ಆರೋಪಿಸಿದ್ದು ಇಲಾಖೆಯ ಬಹುತೇಕ ಎಸ್‌ಸಿ,ಎಸ್‌ಟಿ ಹಾಸ್ಟೆಲ್‌ಗಳು ಇದೇ ರೀತಿಯ ಸಮಸ್ಯೆಗಳಿಂದ ಕೂಡಿವೆ.
ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವಲ್ಲಿ ತಾ,ಸಮಾಜ ಕಲ್ಯಾಣಾ ಇಲಾಖೆಯ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಂಘಟನೆಗಳ ಆನೇಕ ಪದಾಧಿಕಾರಿಗಳು ದೂರಿದ್ದಾರೆ.
ಶಾಸಕ ಕೆ.ಎಂ.ತಿಮ್ಮರಾಯಪ್ಪ ತಾಪಂ ಅಧ್ಯಕ್ಷೆ ರಾಧರಾಜ್‌ಗೋಪಾಲ್ ಸೇರಿದಂತೆ ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement