ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶ್ರೀಕಂಠಭಟ್ ಕಂಠದ 2 ಧ್ವನಿಸುರುಳಿ ಬಿಡುಗಡೆ

Srinivasa Murthy VN
Updated On : 24 Jul 2013, 10:32 am

ಕ.ಪ್ರ. ವಾರ್ತೆ, ತುಮಕೂರು, ಜು.24
ಭಾರತೀಯ ಪರಂಪರೆಯಲ್ಲಿ ಸಂಗೀತವನ್ನೂ ಒಳಗೊಂಡು ಅದ್ಭುತ ವಿದ್ಯೆಗಳಿದ್ದು, ಔದ್ಯೋಗಿಕವಾಗಿಯೂ ಇವುಗಳನ್ನು ಅವಲಂಬಿಸಬಹುದಾದ ಸಾಧ್ಯತೆ ಹಾಗೂ ಅವಕಾಶಗಳಿವೆ ಎಂದು ಪ್ರತಿಪಾದಿಸಿದ ಶಿವಮೊಗ್ಗದ ಗುರುಗುಹ ಸಂಗೀತ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯ ಶೃಂಗೇರಿ ಎಚ್.ಎಸ್. ನಾಗರಾಜ್ ಅವರು, ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಪ್ರಯೋಗ ನಡೆಯುತ್ತಿದೆ ಎಂದು ಹೇಳಿದರು. ಅವರು ತುಮಕೂರು ಅನುಗ್ರಹ ಸಂಗೀತ ಮಹಾವಿದ್ಯಾಲಯದಿಂದ ನಡೆದ ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ಅವರು ಹಾಡಿರುವ ಹರಿದಾಸರ ದೇವರನಾಮಗಳ ಎರಡು ಧ್ವನಿಸುರುಳಿ (ಕೊಳಲನೂದುವ ಚದುರ ಮತ್ತು ಗೋವಿಂದ ಸೆಟ್ಟಿ) ಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಸಂಗೀತವೆಂದರೆ ವೇದಿಕೆಗಳಲ್ಲಿ ಹಾಡುವುದಷ್ಟೇ ಅಲ್ಲ ಅಥವಾ ಯಾವುದೋ ಪ್ರಶಸ್ತಿ, ಸನ್ಮಾನಗಳಿಗಷ್ಟೇ  ಸೀಮಿತವಾದುದಲ್ಲ. ಅದು ಸಂಪೂರ್ಣ ಆಧ್ಯಾತ್ಮಿಕವಾದುದು ಹಾಗೂ ಮನುಷ್ಯನ ಬದುಕಿನ ವಿಕಾಸಕ್ಕೆ ಹಾದಿಯಾದುದು. ಇತರೆ ಅಕಾಡೆಮಿಕ್ ಶಿಕ್ಷಣದಲ್ಲಿ ಉನ್ನತಿ ಸಾಧಿಸಲು ಸಹ ಸಂಗೀತ ಸಹಕಾರಿಯಾಗಿದೆ. ಏಕೆಂದರೆ ಸಂಗೀತದಲ್ಲಿ ಅಂತಹ ಅದ್ಭುತವಾದ ಶಕ್ತಿಯಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಾಸವಿ ಸಂಘದ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಅವರು  ಮಾತನಾಡಿದರು.ಶಿವಮೊಗ್ಗದಲ್ಲಿ ವಿದ್ವಾನ್ ನಾಗರಾಜ್ ಅವರು ನಿರ್ಮಿಸಲುದ್ದೇಶಿಸಿರುವ ಸಂಗೀತ ಭವನ ಬೃಹತ್ ಯೋಜನೆಗೆ ಇದೇ ಸಂದರ್ಭದಲ್ಲಿ ವಿದ್ವಾನ್ ಶ್ರೀಕಂಠಭಟ್ ಅವರು 10ಸಾವಿರ ರು. ದೇಣಿಗೆಯನ್ನು ಸಮರ್ಪಿಸಿದರು. ಉದ್ಯಮಿ ಜಯಕುಮಾರ್ ಅವರು ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ಜೈಮಾತಾ ರೈಸ್ ಇಂಡಸ್ಟ್ರೀಸ್‌ನ ಸಿ. ನಾಗೇಶ್‌ಬಾಬು ಅವರು ಅತಿಥಿಗಳಾಗಿದ್ದರು. ಅನುಗ್ರಹ  ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳಿಂದ ದೇವರನಾಮ, ವಚನ ಮತ್ತು ಶ್ರೀ ಶಂಕರಾಚಾರ್ಯರ ಸ್ತೋತ್ರಗಳ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement