ಕ್ರೀಡಾಪಟುಗಳಿಗೆ ಸನ್ಮಾನ
ಭಾರತೀನಗರ: ಇಲ್ಲಿಗೆ ಸಮೀಪದ ಚಂದೂಪುರದಲ್ಲಿ ನಡೆದ ಹೋಬಳಿಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಪಂದ್ಯಾವಳಿಯಲ್ಲಿ ಜನನಿ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು, ವಾಲಿಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಥ್ಸೆಟಿಕ್ಸ್ ವಿಭಾಗದಲ್ಲಿ ಬಿ.ಎಂ. ಸಹನಾ 100 ಮೀಟರ್ ಓಟದಲ್ಲಿ ದ್ವೀತಿಯ, ಶಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಕೆ.ಎಸ್. ಸಂಗೀತ 400 ಮೀಟರ್ ಓಟ ಹಾಗೂ ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕ್ರೀಡಾಪಟುಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯದರ್ಶಿ ಬಿ.ಕೆ.ಜಗದೀಶ್, ಮುಖ್ಯ ಶಿಕ್ಷಕಿ ಸೌಮ್ಯಾ, ಶಿಕ್ಷಕರು ಹಾಗೂ ಗೌತಮ್ ಭಾರದ್ವಾಜ್ ಇದ್ದರು.
ಪದಾಧಿಕಾರಿಗಳ ಪದಗ್ರಹಣ
ಕೆ.ಆರ್. ನಗರ: ರೋಟರಿ ಸಂಸ್ಥೆಯ 2013- 14ನೇ ಸಾಲಿನ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಪದಗ್ರಹಣ ಸಮಾರಂಭ ಇಲ್ಲಿನ ಐಎಂಎ ಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸಿ.ಆರ್. ಮಲ್ಲಿಕಾರ್ಜುನ್ ಮತ್ತು ಕಾರ್ಯದರ್ಶಿಯಾಗಿ ರವಿಶಂಕರ್ ಅಧಿಕಾರ ಸ್ವೀಕರಿಸಿದರು. ನಂತರ ನೂತನ ಅಧ್ಯಕ್ಷರು ಮಾತನಾಡಿ, ಸಮಾಜದ ಒಳಿತಿಗಾಗಿ ಸಂಸ್ಥೆ ವತಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಪ್ರತಿ ವರ್ಷದಂತೆ ಪೊಲಿಯೋ, ಕಣ್ಣು ಮತ್ತು ಆರೋಗ್ಯದ ಉಚಿತ ತಪಾಸಣಾ ಶಿಬಿರ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ವಿಮಾ ಯೋಜನೆ, ಬಿಸಿಯೂಟ ಮಾಡಲು ವಿದ್ಯಾರ್ಥಿಗಳಿಗೆ ತಟ್ಟೆ- ಲೋಟ ವಿತರಿಸುವುದರ ಜೊತೆಗೆ ರೈತರಿಗಾಗಿ ಮತ್ತು ಅಂಗವಿಕಲರಿಗಾಗಿ ವಿಶೇಷ ಕಾರ್ಯಕ್ರಮ ಸಂಸ್ಥೆಯ ವತಿಯಿಂದ ನಡೆಸುವುದಾಗಿ ತಿಳಿಸಿದರು. ಡಾ. ಭರತೇಶ್, ಡಾ.ಎಲ್. ಅಮರನಾಥ್, ಬಿ.ಕೆ. ಸುರೇಶ್, ಬಿ.ಎ. ಸತೀಶ್, ಶಶಿಭೂಷಣ್, ವಿನಯ್ ಇದ್ದರು.
ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆ
ಶ್ರೀರಂಗಪಟ್ಟಣ: ತಾಲೂಕಿನ ಕೆ.ಶೆಟ್ಟಹಳ್ಳಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಮಂಡ್ಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಅಯ್ಕೆಯಾಗಿದ್ದಾರೆ. ಮಂಡ್ಯದ ಕ್ರೀಡಾಂಗಣದಲ್ಲಿ ಜು.19ರಂದು ನಡೆದ ಜಿಲ್ಲಾಮಟ್ಟದ 14 ವರ್ಷ ಹಾಗೂ 17 ವರ್ಷ ವಯೋವಾನದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡಿದ್ದಾರೆ. ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಶಾಲೆ ವಿದ್ಯಾರ್ಥಿಗಳಾದ ಭಾವನಾ, ಪೂರ್ಣಿಮ, ಶರ್ಮಿಳ ಭೂಮಿಕಾ, ಲಾವಣ್ಯ, ಸಂದೀಪ್, ದರ್ಶನ್, ಪ್ರಕಾಶ ಅವರನ್ನು ಶಾಲೆಯ ಯೋಗ ಶಿಕ್ಷಕ ಅಪ್ಪಾಜಿ, ದೈಹಿಕ ಶಿಕ್ಷಕರು ಸೇರಿದಂತೆ ಮುಖ್ಯ ಶಿಕ್ಷಕರು ವಿಧ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಕೆ.ಆರ್.ಪೇಟೆ ಬಂದ್ 27ರಂದು
ಕಿಕ್ಕೇರಿ: ತ್ರಿವಿಧ ದಾಸೋಹಿ ಸಂಸೆ ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠದ ಮೇಲೆ ನಡೆಸಿರುವ ಐಟಿ ದಾಳಿ ಹೇಯಕೃತ್ಯವಾಗಿದೆ. ಇದನ್ನು ಸರ್ವರೂ ಖಂಡಿಸಲು ಮುಂದಾಗಬೇಕು ಎಂದು ತಾಲೂಕು ಸ್ವಾಭಿಮಾನಿ ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ಬಸವೇಗೌಡ ಕರೆ ನೀಡಿದರು. ಪಟ್ಟಣದ ಬ್ರಹ್ಮೇಶ್ವರ ದೇಗುಲ ಆವರಣದಲ್ಲಿ ಮಾತನಾಡಿದ ಅವರು, ಐಟಿ ದಾಳಿ ಪಕ್ಷಾತೀತವಾಗಿ ಖಂಡಿಸಿ ಇನ್ನು ಮುಂದೆ ಇಂತಹ ಘಟನೆಗಳು ಜರುಗದಂತೆ ಎಚ್ಚರಿಸಲು 27ರಂದು ಕೆ.ಆರ್.ಪೇಟೆಯಲ್ಲಿ ತಾಲೂಕು ಬಂದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿರುವ ಬಂದ್ ಕಾರ್ಯಕ್ರಮದಲ್ಲಿ ತುರ್ತು ಸೇವೆಗಳಾದ ನರ್ಸಿಂಗ್ ಹೋಂ, ಹಾಲು ಪೂರೈಕೆ ಹಾಗೂ ಔಷಧಿ ವ್ಯಾಪಾರಸ್ಥರನ್ನು ಹೊರತುಪಡಿಸಿ ಎಲ್ಲ ರೀತಿಯ ವರ್ತಕರು ಅಂಗಡಿ ಮುಚ್ಚಿ ಬಂದ್‌ಗೆ ಬೆಂಬಲಿಸಲಿದ್ದಾರೆ ಎಂದರು. ವಿವಿಧ ಸಂಘ ಸಂಸ್ಥೆಗಳು, ಜನಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಭಾಗವಹಿಸಲಿದ್ದಾರೆ.