ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚಿಕ್ಕಮಳಲವಾಡಿ 'ಆಶ್ರಯ' ಅತಿಕ್ರಮಣ ತೆರವು

Srinivasa Murthy VN
Updated On : 25 Jul 2013, 11:40 am

ಕ.ಪ್ರ.ವಾರ್ತೆ ಕುಣಿಗಲ್ ಜು. 25
ಗುರುವಾರ ಬೆಳ್ಳಂ ಬೆಳಗ್ಗೆ ಆಶ್ರಯ ನಿವೇಶನ ವಿತರಣೆಗೆ ಗುರುತಿಸಲಾಗಿದ್ದ ಸರ್ಕಾರಿ ಜಮೀನು ಅತಿಕ್ರಮಣದ ವಿರುದ್ಧ ತುಮಕೂರು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಾಲೂಕು ಆಡಳಿತ, 8 ಎಕರೆ ವಶಪಡಿಸಿಕೊಂಡು ಮುಂದಿನ ಕ್ರಮಕ್ಕೆ ತಾಪಂಗೆ ಹಸ್ತಾಂತರಿಸಿದೆ.
2003-04ರಲ್ಲಿ ಅಂದಿನ ಶಾಸಕರಾದ ಎಸ್.ಪಿ.ಮುದ್ದಹನುಮೇಗೌಡರು, ಚಿಕ್ಕಮಳಲವಾಡಿ ಗ್ರಾಮದ ವ್ಯಾಪ್ತಿಯ ಸರ್ವೇ ನಂ. 26ರ 8 ಎಕರೆ ಪ್ರದೇಶದಲ್ಲಿ 350 ಮಂದಿಗೆ ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ಹಕ್ಕುಪತ್ರ ವಿತರಿಸಿದ್ದರು.
 ನಂತರದ ಕೆಲ ರಾಜಕೀಯ ವಿದ್ಯಮಾನಗಳು ನಡೆದು ಸದರಿ ಪ್ರದೇಶದಲ್ಲಿ ಆಶ್ರಯನಿವೇಶನ ಫಲಾನುಭವಿಗಳ ಸ್ವಾಧೀನಕ್ಕೆ ಕೊಡದೆ, ಕೆಲವರು ಎಂಟು ಎಕರೆ ಪ್ರದೇಶದಲ್ಲಿ ಬಗರ್‌ಹುಕುಂ ಸಮಿತಿಗೆ ಅರ್ಜಿ ಸಲ್ಲಿಸಿ, ಉಳುಮೆ ಮಾಡಿಕೊಂಡು ಅನುಭವದಲ್ಲಿದ್ದು ನೂರಾರು ಮಾವಿನ ಮರಗಳನ್ನು ಸಹ ಬೆಳೆಸಿದ್ದರು.
ನಂತರದ ದಿನಗಳಲ್ಲಿ ಸದರಿ ಪ್ರದೇಶ ಆಶ್ರಯ ಯೋಜನೆಗೆ ನೀಡಿರುವುದರಿಂದ ಬಗರ್‌ಹುಕಂ ಸಮಿತಿಯಲ್ಲಿ ಭೂಮಿ ಮಂಜೂರು ಮಾಡಲಾಗದು ಎಂದು ಸಮಿತಿ ಅರ್ಜಿ ವಜಾಗೊಳಿಸಿತ್ತು, ಆದರೂ ಕೆಲ ರೈತರು ಜಮೀನಿನ ಉಳುಮೆ ಮಾಡುತ್ತಾ ಸ್ವಾಧೀನದಲ್ಲಿದ್ದರು.
ಈ ಮದ್ಯೆ ಈ ಭಾಗದ ಜಿಪಂ ಮಾಜಿ ಸದಸ್ಯ ಶಿವರಾಮಯ್ಯ ಇತರರು ಸದರಿ ಆಶ್ರಯನಿವೇಶನ ಅತಿಕ್ರಮಣ ತೆರವುಗೊಳಿಸಿ, ಫಲಾನುಭವಿಗಳಿಗೆ ಜಮೀನು ಕೊಡಿಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದಲ್ಲದೆ, ಲೋಕಾಯುಕ್ತಕ್ಕೂ ದೂರು ನೀಡಿ, ಈ ನಿಟ್ಟಿನಲ್ಲಿ ತಾಪಂ, ಜಿಪಂ ಸೇರಿದಂತೆ ಹಲವು ಪತ್ರ ವ್ಯವಹಾರ ಸಹ ನಡೆಸಿ ಅತಿಕ್ರಮ ತೆರವಿಗೆ ಆಗ್ರಹಿಸಿ ನೂತನ ಸರ್ಕಾರಕ್ಕೂ ಸಹ ಪತ್ರ ಬರೆದಿದ್ದರು.
ಕೆಲ ತಿಂಗಳ ಹಿಂದೆ ಸದರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲು ತೆರಳಿದ್ದ ತುಮಕೂರು ಉಪವಿಭಾಗಾಧಿಕಾರಿ ನಕುಲ್, ಸದರಿ ಪ್ರದೇಶಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಅತಿಕ್ರಮವಾಗಿರುವ ಬಗ್ಗೆ ಸ್ಪಷ್ಟ ಪುರಾವೆಗಳು ದೊರೆತ ಹಿನ್ನೆಲೆಯಲ್ಲಿ, ಗುರುವಾರ ಬೆಳಗ್ಗೆ ಎರಡು ಜೆಸಿಬಿ ಯಂತ್ರಗಳ ನೆರವಿನಿಂದ, ಸಾಕಷ್ಟು ಪೊಲೀಸ್ ಬಂದೋಬಸ್ತ್‌ನೊಂದಿಗೆ ಅಕ್ರಮವಾಗಿ ಆಶ್ರಯ ನಿವೇಶನ ಪ್ರದೇಶದಲ್ಲಿ ಬೆಳೆಸಲಾಗಿದ್ದ ನೂರಾರು ಮಾವಿನಮರಗಳನ್ನು ಬುಡಸಮೇತ ತೆರವುಗೊಳಿಸಿ, ಸರ್ಕಾರಕ್ಕೆ ಸೇರಿದ ಪ್ರದೇಶವನ್ನು ಗುರುತಿಸಿ, ಸ್ವಾಧೀನಡಿಸಿಕೊಂಡು ಮುಂದಿನ ಕ್ರಮಕ್ಕೆ ತಾಪಂ ಇಒರವರಿಗೆ ಹಸ್ತಾಂತರಿಸಿದರು.
ನೀತಿಸಂಹಿತೆ ನಂತರ ಅರ್ಹರ ಆಯ್ಕೆಗೆ ಸೂಚನೆ: ಈಗಾಗಲೆ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ, ನೀತಿಸಂಹಿತೆ ಅವಧಿ ಮುಗಿದ ನಂತರ, ಪುನಃ ಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆಮಾಡಿ ನಿವೇಶನ ವಿತರಿಸುವಂತೆ, ಈ ಹಿಂದೆ ವಿತರಿಸಲಾಗಿರುವ ನಿವೇಶನದಾರರ ಪೈಕಿ ಅರ್ಹರು, ಸ್ಥಳೀಯರನ್ನು ಗುರುತಿಸುವಂತೆ, ಸದರಿ ತೆರವುಗೊಳಿಸಲಾಗಿರುವ ಪ್ರದೇಶದಲ್ಲಿ ಯಾರೇ ವ್ಯಕ್ತ ಪುನಃ ಅತಿಕ್ರಮಣ ಮಾಡಿದಲ್ಲಿ ಅವರ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವಂತೆ ಇಒ ರಾಮಚಂದ್ರಯ್ಯನವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಹಶೀಲ್ದಾರ್ ಜಗದೀಶ್, ಪಿಎಸೈ ಗುರುಪ್ರಸಾದ್ ಸೇರಿದಂತೆ, ಕಂದಾಯ, ಸರ್ವೇ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಒತ್ತುವರಿ ತೆರವು.. ಈ ಸಾವು ನ್ಯಾಯವೆ?
-ಆನಂದ್ ಸಿಂಗ್ ಟಿ.ಎಚ್
ಕುಣಿಗಲ್:
ಅಮ್ಮ ಎಲ್ಲಿದ್ದೀಯಾ, ನಾವು ಮಾಡಿದ ತಪ್ಪಾದರೂ ಎನು..? ನಮ್ಮನ್ನು ಬೇಗ ರಕ್ಷಿಸು, ಇರುವೆಗಳು ಕಚ್ಚಿ ನೋವಾಗುತ್ತಿದೆ ಎಂಬ ಅರ್ಥದಲ್ಲಿ ಗಿಜುಗನಹಕ್ಕಿಯ ಮೂರು ನವಜಾತ ಮರಿಗಳು ಬೊಬ್ಬಿಡುತ್ತಿದ್ದರೆ, ತಾಯಿ ಹಕ್ಕಿ ಮಕ್ಕಳನ್ನು ಸಂರಕ್ಷಿಸಲಾಗದೆ ನರಕಯಾತನೆ ಅನುಭವಿಸುತ್ತಾ ತೆರವು ಪ್ರದೇಶದ ಸುತ್ತ ಹಾರಾಡುತ್ತಾ ಮೂಕವೇದನೆ ಅನುಭವಿಸಿದ ಹೃದಯ ವಿದ್ರಾವಕ ಘಟನೆ ಗುರುವಾರ ನಡೆಯಿತು.
ಗುರುವಾರ, ತಾಲೂಕಿನ ಚಿಕ್ಕಮಳಲವಾಡಿ ಗ್ರಾಮದಲ್ಲಿನ ಆಶ್ರಯಯೋಜನೆಯ ಅತಿಕ್ರಮ ಪ್ರದೇಶವನ್ನು ತಾಲೂಕು ಆಡಳಿತ ತೆರವುಗೊಳಿಸಿದ್ದು, ಈ ಪ್ರದೇಶದಲ್ಲಿ ಹಾಕಲಾಗಿದ್ದ ಮರಗಳಲ್ಲಿ ಗಿಜುಗನ ಹಕ್ಕಿಯ ಗೂಡಿತ್ತು. ಮರಗಳನ್ನು ಜೆಸಿಬಿ ಯಂತ್ರದ ಮೂಲಕ ಕತ್ತರಿಸಿ ನೆಲಕ್ಕೆ ಉರುಳಿಸಿದಾಗ, ಮರದಲ್ಲಿದ್ದ ಗೂಡು ಕಳೆಗೆ ಬಿದ್ದು, ಗಿಜುಗನಹಕ್ಕಿ ಮೂರು ಮರಿಗಳು ನೆಲದ ಮೇಲೆ ಬಿದ್ದು, ಒದ್ದಾಡಿದವು. ಬೆಳಗ್ಗೆ ಗೂಡು ಬಿಟ್ಟು ತನ್ನ ಮಕ್ಕಳಿಗೆ ಆಹಾರ ಅರಸಿ ಹೋಗಿದ್ದ ತಾಯಿ ಹಕ್ಕಿ ಆಹಾರ ತಂದು, ಗೂಡಿಗೆ ಬರಲೆತ್ನಿಸಿದಾಗ ಇಡೀ ಮರಗಳು ಧರಾಶಾಹಿಯಾಗಿದ್ದು, ತಾಯಿಹಕ್ಕಿಗೆ ತನ್ನ ಗೂಡು, ಮಕ್ಕಳು ಎಲ್ಲಿದ್ದಾವೆಂದು ತಿಳಿಯಲು ಪರದಾಡುವಂತಾಯಿತು. ಮರಿಗಳಿಗಾಗಿ ಹಂಬಲಿಸಿ, ಕೂಗಿಕೊಂಡು ಹಾರತೊಡಗಿತು. ಈ ಮಧ್ಯೆ ತಾಯಿಯಮಡಿಲಲ್ಲಿ ಬೆಚ್ಚಗಿರಬೇಕಿದ್ದ ನವಜಾತ ಹಕ್ಕಿಮರಿಗಳು, ಹಾರಲು ಸಾಮರ್ಥ್ಯ ಇಲ್ಲದೆ, ಚೀರಲು ಶಕ್ತಿ ಇಲ್ಲದೆ ನೆಲದ ಮೇಲೆ ಬಿದ್ದು ಒದ್ದಾಡತೊಡಗಿ, ತಾಯಿಯ ಆಸರೆಗಾಗಿ ರೋದನೆ ಇಡುತ್ತಾ ಹೊರಳಾಡತೊಡಗಿದವು. ಕೆಲವೇ ಕ್ಷಣದಲ್ಲಿ ಎಲ್ಲಿದ್ದವೊ ಇರುವಗೆಳ ಹಿಂಡು ನವಜಾತ ಹಕ್ಕಿಮರಿಗಳ ಮೇಲೆ ದಾಂಗುಡಿ ಇಟ್ಟವು. ಮೊದಲೆ ತಾಯಿಯಿಂದ ದೂರವಾಗಿ ವೇದನೆ ಅನುಭವಿಸುತ್ತಿದ್ದ ಎಳೆಮರಿಗಳಿಗೆ, ಇರುವೆಗಳ ಧಾಳಿ ನರಕಯಾತನೆಯಾಯ್ತು. ನೋಡ ನೋಡುತ್ತಲೆ ಇರುವೆಗಳ ಹಿಂಡು ನವಜಾತ ಹಕ್ಕಿಮರಿಗಳ ಪ್ರಾಣಹರಣ ಮಾಡಿದರೆ, ತಾಯಿ ಹಕ್ಕಿ ಮಾತ್ರ ಇನ್ನೂ ತನ್ನ ಮರಿಗಳು ಜೀವಂತವಾಗಿವೆ ಎಂಬ ಭ್ರಮೆಯಲ್ಲಿ ಹುಡುಕಾಟದಲ್ಲಿ ಇಡೀ ಪ್ರದೇಶದ ತುಂಬಾ ಘೀಳಿಡುತ್ತಾ ಹಾರಾಡುತಿತ್ತು. ಆದರೆ, ನಿಯಮಾನುಸಾರ ಕ್ರಮ ಕೈಗೊಳ್ಳಲು ಬಂದ ಅಧಿಕಾರಿ ವರ್ಗಕ್ಕೆ ಮಾತ್ರ ಇದಾವುದರ ಪರಿವೇ ಇಲ್ಲದೆ, ತಮ್ಮ ಪಾಡಿಗೆ ತಾವು ಬಂದ ಕಾರ್ಯ ನೆರವೇರಿದರ ಬಗ್ಗೆ ನೆಮ್ಮದಿ ಭಾವನೆಯಿಂದ ತೆರಳಿದ್ದು, ಏನೊಂದು ತಿಳಿಯದ ಗಿಜುಗನಹಕ್ಕಿಯ ಕುಟುಂಬ ಮಣ್ಣುಪಾಲಾಗಿದ್ದಕ್ಕೆ ಹೊಣೆ ಯಾರೆಂಬ ಮಿಲಿಯನ್ ಡಾಲರ್ ಪ್ರಶ್ನೆಎದುರಾಯಿತು. ಪ್ರಕೃತಿಯ ಮಡಿಲಲ್ಲಿ ನಡೆದ ಈ ಘಟನೆಯಲ್ಲಿ ಯಾರದು ತಪ್ಪು, ಯಾರದು ಸರಿ ಎಂಬುದು ಮಾತ್ರ ಉತ್ತರವಿಲ್ಲದ ಪ್ರಶ್ನೆಯಂತಾಗಿದೆ.

ಉಪವಿಭಾಗಾಧಿಕಾರಿ ಮೇಲೆ ಗ್ರಾಮಸ್ಥರು ಗರಂ
ಕುಣಿಗಲ್:
ಸ್ವಾಮಿ...ಒಂದೇ ಕುಟುಂಬ ನಲವತ್ತು ಎಕರೆ ಅರಣ್ಯಪ್ರದೇಶದಲ್ಲಿ ಬೆಳೆದಿದ್ದ ಮರಗಳನ್ನು ಕತ್ತರಿಸಿ, ಮನೆ, ತೋಟ ಮಾಡಿಕೊಂಡು ಅನುಭವಿಸುತ್ತಿದ್ದಾರೆ. ಇಲ್ಲಿ ಬಡ ರೈತರು ಉಳುಮೆ ಮಾಡುತ್ತಿರುವುದನ್ನು ತೆರವುಗೊಳಿಸಲು ಬಂದಿದ್ದಾರಾ, ಇದೇನಾ ನ್ಯಾಯ ಎಂದು ಉಪವಿಭಾಗಾಧಿಕಾರಿಯವರೊಂದಿಗೆ ರೈತರು ವಾಗ್ವಾದ ನಡೆಸಿದರು.
ಗುರುವಾರ ಬೆಳಗ್ಗೆ ಚಿಕ್ಕಮಳಲವಾಡಿಯ ಸರ್ಕಾರಿ ಭೂಮಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಉಪವಿಭಾಗಾಧಿಕಾರಿಗಳೊಂದಿಗೆ, ಗ್ರಾಮದ ಮುಖಂಡರಾದ ಪ್ರಕಾಶ್, ಬೋಜೇಗೌಡ, ಕೃಷ್ಣಯ್ಯ, ಇತರರು ತರೇದಕುಪ್ಪೆ ಸರ್ವೇ ನಂ.100ರ ವ್ಯಾಪ್ತಿಯಲ್ಲಿ ಜಿಪಂ ಮಾಜಿ ಸದಸ್ಯ ಶಿವರಾಮಯ್ಯ ಮತ್ತು ಕುಟುಂಬದವರು ನಲವತ್ತು ಎಕರೆ ಅರಣ್ಯಪ್ರದೇಶದಲ್ಲಿ ಬೆಳೆದಿದ್ದ ಮರಗಳನ್ನು ಕತ್ತರಿಸಿ, ಆ ಪ್ರದೇಶವನ್ನು ಅತಿಕ್ರಮಿಸಿ, ತೋಟ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆ ಪ್ರದೇಶ ತೆರವುಗೊಳಿಸುವಂತೆ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ, ತಮಗೆ, ತಹಶೀಲ್ದಾರ್, ಲೋಕಾಯುಕ್ತ ಮತ್ತು ಸರ್ಕಾರ, ಬಾಲಸುಬ್ರಮಣ್ಯಂ ಸಮಿತಿಗೂ ಅರ್ಜಿ ಸಲ್ಲಿಸಲಾಗಿದೆ. ಆದರೆ ನೀವುಗಳು ಅದರ ತೆರವಿಗೆ ಮುಂದಾಗಿಲ್ಲ. ಈಗ ಅಮಾಯಕ ರೈತರು, ಉಳುಮೆ ಮಾಡಿಕೊಂಡಿರುವ ಪ್ರದೇಶ ತೆರವಿಗೆ ಬಂದಿದ್ದಾರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೆ ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ ಸಾಮಾಜಿಕ ನ್ಯಾಯ ಕಾಪಾಡಿ, ಒಬ್ಬರಿಗೊಂದು ಮತ್ತೊಬ್ಬರಿಗೊಂದು ನ್ಯಾಯ ಎಂಬಂತೆ ತಾರತಮ್ಯ ಮಾಡಬೇಡಿ ಎಂದು ಉಪವಿಭಾಗಾಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಮಾತಿನ ಭರದಲ್ಲಿ ಉಪವಿಭಾಗಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಬಂದಿದ್ದಾರೆ ಎಂದು ಆರೋಪಿಸಿದರು.
ಕೆರಳಿದ ಉಪವಿಬಾಗಾಧಿಕಾರಿ: ಇದರಿಂದ ಕೆರಳಿದ ಉಪವಿಬಾಗಾಧಿಕಾರಿ, ತಾವು ಸರ್ಕಾರದ ಕೆಲಸ ಮಾಡಲು ಇದ್ದು, ಯಾರ ಒತ್ತಡದ ಮೇಲೂ ಕೆಲಸ ಮಾಡುತ್ತಿಲ್ಲ, ಸರ್ಕಾರಿ ಭೂಮಿಗಳ ಅತಿಕ್ರಮಣ ಬಗ್ಗೆ ಕೂಲಂಕಷ ದಾಖಲೆಗಳನ್ನು ಪರಿಶೀಲಿಸದ ಹೊರತು ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಆದ್ದರಿಂದ ಈಗ ಮನವಿ ನೀಡಿ, ನಂತರ ದಾಖಲೆಗಳನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಗುಂಪುಘರ್ಷಣೆ ಸಾಧ್ಯತೆ: ಗುಂಪುಘರ್ಷಣೆ ಆಗುವ ಸಾಧ್ಯತೆ ಇದೆ, ಶಾಂತಿ ಭಂಗ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಮನವಿ ಮಾಡಿದರು. ತಾಲೂಕು ಆಡಳಿತ ತೆರವುಗೊಳಿಸಿದ ಆಶ್ರಯ ಯೋಜನೆ ಪ್ರದೇಶದಲ್ಲಿ, 2003-04ರಲ್ಲಿ ನಿವೇಶನ ಪಡೆದಂತವರು, ನಿವೇಶನ ಅತಿಕ್ರಮಿಸುವ ಸಾಧ್ಯತೆಗಳು ದಟ್ಟವಾಗಿವೆ. ಈ ಮದ್ಯೆ ಇದೇ ಪ್ರದೇಶದಲ್ಲಿ ನಿವೇಶನಕ್ಕಾಗಿ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಯಾವುದೇ ಒಬ್ಬರೂ ನಿವೇಶನ ಸ್ವಾಧೀನಕ್ಕೆ ಮುಂದಾದಲ್ಲಿ ಬಹಳ ಅನಾಹುತವಾಗಿ, ಗುಂಪುಘರ್ಷಣೆಗೆ ಎಡೆಮಾಡಿಕೊಡುವ ಸಾಧ್ಯತೆ ಇರುವ ಕಾರಣ, ಸ್ಥಳೀಯ ಗ್ರಾಪಂ ನಿಂದ ಸೂಕ್ತ ಪ್ರಕ್ರಿಯೆಗಳು ಪೂರ್ಣಗೊಳ್ಳುವ ತನಕ ಯಾವುದೇ ಅತಿಕ್ರಮ ನಡೆಯದಂತೆ ತಹಶೀಲ್ದಾರ್‌ರವರಿಗೆ ಮನವಿ ಮಾಡಿದರಲ್ಲದೆ, ಈ ಹಿಂದೆ ವಿತರಿಸಲಾಗಿರುವ ಹಕ್ಕುಪತ್ರಗಳ ಸಾಚಾತನದ ಬಗ್ಗೆಯೂ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement