ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಮಕೂರಿನಲ್ಲಿ ಬೀಡಾಡಿ ದನಗಳ ಕಾಟ, ನಗರಸಭೆ ನಿರ್ಲಕ್ಷ್ಯ

Srinivasa Murthy VN
Updated On : 25 Jul 2013, 11:48 am

ಕ.ಪ್ರ.ವಾರ್ತೆ ತುಮಕೂರು ಜು. 25
ಹೆದ್ದಾರಿಯಲ್ಲೇ ಎಗ್ಗಾ ಮಗ್ಗಾ ಪರೇಡ್ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಬೀಡಾಡಿ ದನಗಳ ವಕ್ರದೃಷ್ಟಿ ಈಗ ಸ್ವತಃ ಜಿಲ್ಲಾ ಎಸ್ಪಿ ಕಾರಿಗೂ ತಟ್ಟಿದೆ.
ಜಿಲ್ಲಾ ಎಸ್ಪಿ ರಮಣಗುಪ್ತ ಅವರೇ ಇದನ್ನು ಒಪ್ಪಿಕೊಳ್ಳುವ ಮೂಲಕ ಬೀಡಾಡಿ ದನಗಳ ಕಾಟ ಎಷ್ಟಿದೆ ಎಂಬುದನ್ನು ಪ್ರಶ್ನಾರ್ಥಕವಾಗಿ ಸೂಚಿಸಿದರು.
ಬೀಡಾಡಿ ದನಗಳ ನಿಯಂತ್ರಣ ಸಂಪೂರ್ಣವಾಗಿ ನಗರಸಭೆ ಜವಾಬ್ದಾರಿ. ಆದರೆ ಈ ಬಗ್ಗೆ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೀಡಾಡಿ ದನಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಹಕಾರ ಕೊಡಲು ಸಿದ್ದವಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವುದಾಗಿ ಎಸ್ಪಿ ರಮಣಗುಪ್ತ ತಿಳಿಸಿದರು.
ದನಗಳ ಹಾವಳಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ದನಗಳನ್ನು ಗೋಶಾಲೆಗೆ ಕಾಯಂ ಆಗಿ ಕಳುಹಿಸುವುದೊಂದೇ ಇರುವ ಮಾರ್ಗ ಎಂದು ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದರು. ಕೇವಲ ದನಗಳ ಹಾವಳಿಗೆ ಮಾತ್ರವಲ್ಲ. ಹಂದಿಗಳ ಹಾವಳಿ ನಿಯಂತ್ರಿಸುವಲ್ಲಿಯೂ ಪೊಲೀಸರು ಸಹಕರಿಸಿದ್ದಾರೆ ಎಂದರು. ಹಂದಿ ಮತ್ತು ದನಗಳ ಹಾವಳಿ ನಿಯಂತ್ರಣಕ್ಕೆ ರಣನೀತಿ ರೂಪಿಸುವುದೊಂದೇ ಇರುವ ಏಕೈಕ ಮಾರ್ಗ ಎಂಬುದು ರಮಣಗುಪ್ತ ಅವರ ಅಭಿಪ್ರಾಯವಾಗಿದೆ.
ಕಳೆದ ಕೆಲ ವಾರಗಳಿಂದ ಬೀಡಾಡಿ ದನಗಳ ಹಿಂಡು ತುಮಕೂರು ನಗರದಲ್ಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲೆಲ್ಲಾ ಸಂಚರಿಸುತ್ತಿವೆ. ಅಲ್ಲದೇ ರಸ್ತೆಯ ನಡು ಮಧ್ಯದಲ್ಲೇ ಮಲಗುತ್ತಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಈ ಬಗ್ಗೆ ನಗರಸಭೆಯವರಿಗೆ ಸಾರ್ವಜನಿಕರು, ವಾಹನ ಸವಾರರು ದೂರು ನೀಡಿದ್ದರೂ ಎಂದಿನ ಕುಂಭಕರ್ಣ ನಿದ್ದೆಯಲ್ಲಿ ಮುಳುಗಿದ್ದಾರೆ. ಬೀಡಾಡಿ ದನಗಳನ್ನು ನಿಯಂತ್ರಿಸದೇ ಇದ್ದರೆ ಅಪಘಾತ ಕಟ್ಟಿಟ್ಟ ಬುತ್ತಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಅಷ್ಟೆಯಲ್ಲ ಅಮಾಯಕರ ಪ್ರಾಣದ ಜತೆ ನಗರಸಭೆ ನಿತ್ಯ ಚೆಲ್ಲಾಟವಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಮುಖ್ಯ ರಸ್ತೆಯಲ್ಲಾ ತುಮಕೂರಿನ ಎಲ್ಲಾ ಬಡಾವಣೆಗಳಲ್ಲೂ ಕೂಡ ಬೀಡಾಡಿ ದನಗಳ ಹಾವಳಿ ಹೆಚ್ಚುತ್ತಲೇ ಇವೆ. ಇದರ ಜತೆಗೆ ಹಂದಿಗಳು ಕೂಡ ಸಾಥ್ ನೀಡುತ್ತಿರುವುದರಿಂದ ಬೆಂಗಳೂರಿನಭವಿಷ್ಯದ ಉಪನಗರಿ ತುಮಕೂರು ಈಗ ಹಂದಿ, ಬೀಡಾಡಿ ದನಗಳ ಊರಾಗಿ ಪರಿವರ್ತಿತವಾಗುತ್ತಿದೆ ಎಂಬ ಅನುಮಾನ ಸಾರ್ವಜನಿಕರದ್ದು. ಈ ಕೂಡಲೇ ಬೀಡಾಡಿ ದನಗಳನ್ನು ನಿಯಂತ್ರಿಸದೇ ಇದ್ದರೆ ನಗರಸಭೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಾರ್ವಜನಿಕರು ಹಾಗೂ ವಾಹನ ಸವಾರರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement