ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆ ತಾಲೂಕು ಕಚೇರಿಯಲ್ಲಿ ಕಳವು

Srinivasa Murthy VN
Updated On : 25 Jul 2013, 11:40 am

ಕ.ಪ್ರ.ವಾರ್ತೆ ತುರುವೇಕೆರೆ ಜು. 25
ತಾಲೂಕಿನ ಪ್ರಮುಖ ಅಧಿಕಾರಗಳ ಕೇಂದ್ರ ಸ್ಥಾನವಾದ ತಾಲೂಕು ಕಚೇರಿಯಲ್ಲೇ ಕಳ್ಳತನವಾಗಿದೆ. ಮಿನಿ ವಿಧಾನಸೌಧದ ಮೇಲ್ಭಾಗದಲ್ಲಿರುವ ಹಕ್ಕು ದಾಖಲಾತಿ ಕೊಠಡಿಯಲ್ಲಿಟ್ಟಿದ್ದ ಲ್ಯಾಪ್‌ಟಾಪ್, 3 ಹ್ಯಾಂಡಿಕ್ಯಾಮ್‌ಗಳು ಬುಧವಾರ ರಾತ್ರಿ ಕಳುವಾಗಿವೆ ಎಂದು ತಹಸೀಲ್ದಾರ್ ಜಿ.ಪಿ.ಮಂಜೇಗೌಡ ಸ್ಥಳೀಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪಟ್ಟಣದ ಮಧ್ಯ ಭಾಗದಲ್ಲಿರುವ ಈ ಮಿನಿ ವಿಧಾನಸೌಧದ ಒಳಗೆ ಖಜಾನೆ ಕಾಯಲು ಪೊಲೀಸ್ ವ್ಯವಸ್ಥೆ ಇದೆ. ಮಿನಿ ವಿಧಾನಸೌಧ ಕಾಯಲು ಸಿಬ್ಬಂದಿ ಇದೆ. ಆದಾಗ್ಯೂ ಸುಮಾರು 70 ಸಾವಿರ ಮೌಲ್ಯದ ವಸ್ತುಗಳು ಕಾಣೆಯಾಗಿರುವುದು ಸೋಜಿಗದ ಸಂಗತಿಯಾಗಿದೆ. ಬುಧವಾರ ಸಾಯಂಕಾಲ ಲ್ಯಾಪ್ ಟಾಪ್ ಹಾಗೂ 3 ಹ್ಯಾಂಡಿಕ್ಯಾಮ್ ಗಳನ್ನು ಅಲ್ಮೇರಾದಲ್ಲಿಟ್ಟು ಬೀಗ ಹಾಕಲಾಗಿತ್ತು. ಆ ಬೀಗವನ್ನು ಕೊಠಡಿಯ ಟೇಬಲ್‌ನಲ್ಲಿಡಲಾಗಿತ್ತು ಎಂದು ಹೇಳಲಾಗಿದೆ. ಕೊಠಡಿಯ ಬಾಗಿಲ ಮೇಲಿರುವ ವೆಂಟಿಲೇಟರ್ ಮೂಲಕ ಕೈ ಹಾಕಿ ಬಾಗಿಲನ್ನು ಸಲೀಸಾಗಿ ತೆಗೆಯಲಾಗಿದೆ ಎಂದು ಹೇಳಲಾಗಿದೆ. ಸುಲಭ ಮಾರ್ಗ ಗೊತ್ತಿರುವುದು ಅಲ್ಲಿಯ ಸಿಬ್ಬಂದಿಗೆ ಮಾತ್ರ. ಆದ್ದರಿಂದ ಸಿಬ್ಬಂದಿಯ ಕೈಚಳಕದಿಂದಲೇ ಲ್ಯಾಪ್ ಟಾಪ್, 3 ಹ್ಯಾಂಡಿಕ್ಯಾಮ್‌ಗಳು ನಾಪತ್ತೆಯಾಗಲು ಸಾಧ್ಯ ಎಂದು ಶಂಕೆ ವ್ಯಕ್ತಪಡಿಸಿರುವ ತಹಸೀಲ್ದಾರ್ ಜಿ.ಪಿ.ಮಂಜೇಗೌಡ ಇಬ್ಬರು ಸಿಬ್ಬಂದಿಯ ಮೇಲೆ ಅನುಮಾನಗೊಂಡು ಪೋಲಿಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಂಜೇಗೌಡ, ಎಸೈ ಅಜರುದ್ದೀನ್ ಭೇಟಿ ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement