ನೊಂದ ಮಹಿಳೆ, ಮಕ್ಕಳ ಕಾರ್ಯಕ್ರಮ ಅನುಷ್ಠಾನಗೊಳಿಸಿ: ಡಿಸಿ ಸತ್ಯಮೂರ್ತಿ
ಕ.ಪ್ರ.ವಾರ್ತೆ ತುಮಕೂರು ಜು. 25
ಸಮಾಜದಲ್ಲಿ ನೊಂದಂತಹ, ದೌರ್ಜನ್ಯ, ತುಳಿತಕ್ಕೊಳಗಾದಂತಹ ಮಹಿಳೆಯರು, ಮಕ್ಕಳ ಪರ ಸರ್ಕಾರ ಕಾಳಜಿಯಿಂದ ಹಲವಾರು ಕಾಯ್ದೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದು, ಕಾಯ್ದೆಗಳನ್ನು ಅರಿತು ಅಧಿಕಾರಿಗಳು ಬದ್ದತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಅವರ ನೋವಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾಂತ್ವನ, ಕೌಟುಂಬಿಕ ದೌರ್ಜನ್ಯ ತಡೆ, ವರದಕ್ಷಿಣೆ ನಿಷೇಧ ಮತ್ತು ಮಹಿಳೆಯರು ಮತ್ತು ಮಕ್ಕಳ ಸಾಗಾಟ ತಡೆಗಟ್ಟುವ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಮೇಲೆ ಗುರುತರವಾದ ಹೊಣೆಗಾರಿಕೆ ಇದೆ ಎಂದರು.
ಜಿಲ್ಲೆಯ ಸಾಂತ್ವನ ಕೇಂದ್ರದಲ್ಲಿ ವರದಕ್ಷಿಣೆ ಸೇರಿದಂತೆ ಮಹಿಳಾ ದೌರ್ಜನ್ಯ ಪ್ರಕರಣಗಳು ಒಟ್ಟು 2475 ದಾಖಲಾಗಿದ್ದು, ಈ ಪೈಕಿ 1749 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಬಾಕಿ ಪ್ರಕರಣ 756 ಇವೆ. ಸಿ.ಡಿ.ಪಿ.ಓ.ಗಳು ಮತ್ತು ಸಾಂತ್ವನ ಕೇಂದ್ರದ ಸಿಬ್ಬಂದಿ ದೂರು ನೀಡಿದಂತಹ ಮನೆಮನೆಗೆ ಭೇಟಿ ನೀಡಿ, ಪ್ರಕರಣ ಕೌಟುಂಬಿಕ ಹಂತದಲ್ಲಿ ಇತ್ಯರ್ಥಗೊಂಡಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದರು.
ಶಿರಾ ತಾಲೂಕು ಮೆಹಬೂಬ್ ನಗರವಾಸಿ ಸಾದೀಕ್ ಭಾನು ಎಂಬ ಮಹಿಳೆಯನ್ನು ಈಕೆಯ ಗಂಡ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಮಹಿಳೆ ಈಗ ತನ್ನ ತಂದೆಯ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ನೊಂದ ಮಹಿಳೆಗೆ ನಿಯಮಾನುಸಾರ ಸಿಗಬಹುದಾದ ಆರ್ಥಿಕ ಪರಿಹಾರಕ್ಕೆ ಸಂಬಂಧಿಸಿದಂತೆ ಮತ್ತು ಮಹಿಳೆಯ ಸ್ಥಿತಿಗತಿ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸ್ವತಃ ಮಹಿಳೆ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿದುಕೊಂಡು ಅನುಪಾಲನಾ ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ತಿಳಿಸಿದರು.
ಅಧಿಕಾರಿಗಳ ವರದಿ: ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು 2012-13ನೇ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲು 41671 ರು. ಅನುದಾನ ಬಿಡುಗಡೆಯಾಗಿದ್ದು, ಸದರಿ ಮೊತ್ತವನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪಾವಗಡ ಮತ್ತು ಮಧುಗಿರಿಗೆ ಮರು ಹಂಚಿಕೆ ಮಾಡಲಾಗಿದ್ದು, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸುಜಾತ ಅವರು ಸಭೆಗೆ ಮಾಹಿತಿ ನೀಡಿದರು.
ಸಾಂತ್ವನ ಯೋಜನೆಯಡಿ ಜಿಲ್ಲೆಯ ಸಾಂತ್ವನ ಕೇಂದ್ರಗಳಲ್ಲಿ ಒಟ್ಟು 2475 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 3 ಮಹಿಳೆಯರಿಗೆ ಆಶ್ರಯ ನೀಡಿದ್ದು, 219 ಮಹಿಳೆಯರಿಗೆ ಕಾನೂನು ನೆರವು ಒದಗಿಸಲಾಗಿದ್ದು, 1479 ಪ್ರಕರಣಗಳನ್ನು ಕೌಟುಂಬಿಕ ಸಲಹೆಯಿಂದ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.
ವರದಕ್ಷಿಣೆ ನಿಷೇಧ ಕಾಯ್ದೆಯಡಿ ಒಟ್ಟು 46 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುತ್ತವೆ ಎಂದು ತಿಳಿಸಿದರು.
ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ, ಜಿ.ಪಂ. ಸಿ.ಇ.ಓ. ಗೋವಿಂದರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವಾಸಂತಿ, ನಟರಾಜ್ ಮತ್ತು ಸಾಮಾಜಿಕ ಕಾರ್ಯಕರ್ತರಾದ ರೇಣುಕಾ ಪರಮೇಶ್, ಸಾ.ಚಿ. ರಾಜಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಸಾಂತ್ವನ ಕೇಂದ್ರಗಳ ಸಿಬ್ಬಂದಿ, ಎಲ್ಲ ತಾಲೂಕುಗಳ ಸಿ.ಡಿ.ಪಿ.ಓ.ಗಳು ಮತ್ತು ಸರ್ಕಾರೇತರ ಸಂಸ್ಥೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.