ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶವಸಂಸ್ಕಾರ ಜಾಗ ವಿವಾದ ಇತ್ಯರ್ಥ ಜವಾಬ್ದಾರಿ ಸರ್ಕಾರದ ಅಂಗಳಕ್ಕೆ...

Srinivasa Murthy VN
Updated On : 25 Jul 2013, 11:48 am

ಕ.ಪ್ರ.ವಾರ್ತೆ ತುಮಕೂರು ಜು. 25
ರಾಜ್ಯದ ಗಮನ ಸೆಳೆದಿದ್ದ ಪಟ್ಟನಾಯಕನಹಳ್ಳಿ ಮಠ ಹಾಗೂ ಸಿಡಿಯಜ್ಜನಪಾಳ್ಯದ ವಂಶಸ್ಥರ ಶವಸಂಸ್ಕಾರ ಜಾಗ ವಿವಾದ ಇತ್ಯರ್ಥಪಡಿಸುವ ಹೊಣೆಗಾರಿಕೆಯನ್ನು ಸರ್ಕಾರದ ಹೆಗಲಿಗೇರಿಸುವ ಸುಳಿವನ್ನು ಜಿಲ್ಲಾಧಿಕಾರಿ ಸತ್ಯಮೂರ್ತಿ ನೀಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಎರಡು ಕಡೆಯವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದಾಖಲಾತಿಗಳ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡುವುದಾಗಿಯೂ, ಸತ್ಯವನ್ನು ಎತ್ತಿ ಹಿಡಿಯುವುದಾಗಿಯೂ ಎರಡು ಕಡೆಯವರಿಗೆ ಭರವಸೆ ನೀಡಿದರು. ಎರಡೂ ಕಡೆಯ ವಾದ ಆಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿಯೂ ಅವರು ತಿಳಿಸಿದರು. ಅಲ್ಲಿಯವರೆಗೂ ಎರಡು ಕಡೆಯವರೂ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ವಾದ ಆಲಿಸುವ ಹಿನ್ನೆಲೆಯಲ್ಲಿ ಇದೇ ತಿಂಗಳ 30 ರಂದು ಮಧ್ಯಾಹ್ನ 12 ಗಂಟೆಗೆ ಸಮಯ ನಿಗದಿಪಡಿಸಲಾಗಿದೆ. ಅಂದು ಎರಡೂ ಕಡೆಯ ಐದು ಮಂದಿ ಬಂದರೆ ಸಾಕು ಎಂದು ತಿಳಿಸಿದರು. ಎರಡೂ ಕಡೆಯವರಿಗೂ ತಲಾ 2 ಗಂಟೆ ವಾದ ಮಾಡಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಗುರುವಾರ ಸಂಬಂಧಪಟ್ಟ ಭೂ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.
ನಂತರ ದಾಖಲಾತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿದರು. ಈ ಪ್ರಕಾರ ದಾಖಲಾತಿಗಳು ಪರಸ್ಪರ ಎರಡೂ ಕಡೆಯವರಿಗೆ ವಿನಿಮಯಗೊಂಡವು.
ಎರಡು ವಾರಗಳ ಹಿಂದೆ ಸಿಡಿಯಜ್ಜನಪಾಳ್ಯದ ಸೋಮಲಿಂಗಯ್ಯ ವಂಶಸ್ಥರ ಪೈಕಿ ಜಯಮ್ಮ ಎಂಬುವರು ಸಾವನ್ನಪ್ಪಿದ್ದರು. ಅವರ ಶವಸಂಸ್ಕಾರಕ್ಕೆ ಮಠದ ಆವರಣದಲ್ಲಿ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಈ ಮಧ್ಯೆ ಅಹಿಂದ ಸಂಘಟನೆಯವರು ಪಟ್ಟನಾಯಕನಹಳ್ಳಿ ಮಠದ ವಿರುದ್ಧ ತುಮಕೂರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಸಭೆ ನಡೆಸುವ ಭರವಸೆ ನೀಡಿದ್ದರು. ಏತನ್ಮಧ್ಯೆ ಪಟ್ಟನಾಯಕನಹಳ್ಳಿ ಮಠದ ಭಕ್ತರು ಕೂಡ ಪಟ್ಟನಾಯಕನಹಳ್ಳಿಯಿಂದ ಶಿರಾಕ್ಕೆ ಪಾದಯಾತ್ರೆ ನಡೆಸಿದ್ದರು. ಒಟ್ಟಾರೆಯಾಗಿ ಈ ವಿಷಯ ರಾಜ್ಯದ ಗಮನವನ್ನು ಸೆಳೆದಿತ್ತು. ಸಿಡಿಯಜ್ಜನಪಾಳ್ಯದ ವಂಶಸ್ಥರ ಪರವಾಗಿ ನಿಂಗಣ್ಣ, ಸೋಮೇಶ್ವರಯ್ಯ, ಈಶ್ವರ್, ರವಿ ಹಾಗೂ ಇತರರು ಇದ್ದರು. ಮಠದ ಪರವಾಗಿ ಎಸ್. ವಿಜಯಕುಮಾರ್, ವೆಂಕಟಗಿರಿಯಪ್ಪ, ತಿಪ್ಪೇಸ್ವಾಮಿ, ಶಿವಕುಮಾರ್, ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement