ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮಸ್ಯೆಗಳ ಗುಡ್ಡೇನಹಳ್ಳಿ ಪ್ರಥಮ ದರ್ಜೆ ಕಾಲೇಜು

Srinivasa Murthy VN
Updated On : 25 Jul 2013, 11:48 am

-ಎಸ್.ನಾಗಭೂಷಣ
ಕ.ಪ್ರ.ವಾರ್ತೆ ತುರುವೇಕೆರೆ ಜು. 25

ನೋಡಿ ಈ ಕಾಲೇಜಿನಲ್ಲಿ ಸಾಕಷ್ಟು ಡೆಸ್ಕ್ ಇವೆ, ಕೊಠಡಿಗಳೇ ಇಲ್ಲ. ಲಕ್ಷಾಂತರ ರು.ಗಳ ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು ಇವೆ, ವಿದ್ಯಾರ್ಥಿಗಳೇ ಇಲ್ಲ. ಕಾಲೇಜಿನ ಹಿಂಬದಿಯೇ ದೊಡ್ಡ ನೀರಿನ ಟ್ಯಾಂಕ್ ಇದೆ, ಆದರೆ ವಿದ್ಯಾರ್ಥಿಗಳಿಗೆ ಕುಡಿಯಲು ನೀರೇ ಇಲ್ಲ.
ಇದು ತಾಲೂಕು ಕೇಂದ್ರಕ್ಕೆ ಹೊಂದಿಕೊಂಡಂತಿರುವ ಗುಡ್ಡೇನಹಳ್ಳಿ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುಸ್ಥಿತಿ. ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇಲ್ಲಿ ಬಿಎ, ಬಿಕಾಂ ಹಾಗೂ ಕಳೆದ 2 ವರ್ಷಗಳಿಂದೀಚೆಗೆ ಪ್ರಾರಂಭಗೊಂಡಿರುವ ಬಿಎಸ್ಸಿ ವಿಭಾಗಗಳಿವೆ. ಸರಿ ಸುಮಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರೂ ಇದ್ದಾರೆ. 6 ಕೊಠಡಿ ಇವೆ. ಇಲ್ಲಿ ಐಚ್ಚಿಕ ವಿಷಯವನ್ನು ಹೊರತು ಪಡಿಸಿದರೆ ಮಿಕ್ಕೆಲ್ಲಾ ವಿಷಯಗಳಿಗೆ ಒಂದೇ ಕೊಠಡಿಯಲ್ಲಿ ಬೋಧನೆ ಮಾಡಲಾಗುತ್ತಿದೆ. ಆ ವೇಳೆ ಕನಿಷ್ಠವೆಂದರೆ ಒಂದೇ ಕೊಠಡಿಯಲ್ಲಿ ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂರುತ್ತಾರೆ. ಉಪನ್ಯಾಸಕರು ಮಾಡುವ ಪಾಠ ಪ್ರವಚನಗಳು ಕೊನೆಯ ಸಾಲಿನಲ್ಲಿ ಕೂರುವ ವಿದ್ಯಾರ್ಥಿಗಳಿಗೆ ಕೇಳುವುದೇ ಅನುಮಾನ. ಕೆಲವೇ ಮಂದಿ ಕಾಯಂ ಉಪನ್ಯಾಸಕರು ಇದ್ದಾರೆ. ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು ಉಪನ್ಯಾಸಕರ ಕೊರತೆ ನೀಗಿಸಬಹುದು. ಆದರೆ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಮಾಸಿಕ ಸರಿಯಾಗಿ ಗೌರವ ಧನ ನೀಡದಿದ್ದುದರಿಂದ ಅತಿಥಿ ಉಪನ್ಯಾಸಕರು ಕಾಲೇಜಿಗೆ ಸಕಾಲಕ್ಕೆ ಹಾಗೂ ನಿಗದಿಯಾಗಿ ಬರಲು ಹಿಂದೇಟು ಹಾಕುತ್ತಾರೆ.
ಬಿಎಸ್ಸಿಗೆ ವಿದ್ಯಾರ್ಥಿಯೇ ಇಲ್ಲ: ಸರ್ಕಾರದಿಂದ ಕಳೆದ 2 ವರ್ಷಗಳ ಹಿಂದೆ ಬಿಎಸ್ಸಿ ಪ್ರಾರಂಭಿಸಲಾಗಿದೆ. ಪ್ರಥಮ ವರ್ಷದಲ್ಲಿ 8 ಮಂದಿ, ಎರಡನೇ ವರ್ಷದಲ್ಲಿ 18 ಮಂದಿ ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕೆ ಸೇರ್ಪಡೆಗೊಂಡಿದ್ದರು. ಆದರೆ ಕಳೆದ ಬಾರಿ ಉಪನ್ಯಾಸಕರ ನೇಮಕಾತಿ ಆಗದೆ ಬಹುಪಾಲು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿ ಪಾಠ ಪ್ರವಚನ ಮಾಡಿದ ಫಲವಾಗಿ ಈ ಶೈಕ್ಷಣಿಕ ಸಾಲಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗದಿರುವುದು ಸೋಜಿಗದ ಸಂಗತಿ. ಸರ್ಕಾರದಿಂದ ಸುಮಾರು 35 ಲಕ್ಷಕ್ಕೂ ಹೆಚ್ಚು ಬೆಲೆಯ ಪ್ರಯೋಗಾಲಯ ವಸ್ತುಗಳು ಇದೆ ಎನ್ನಲಾಗಿದೆ. ಆದರೆ ಅದರ ನಿಜವಾದ ಸರಬರಾಜು ಎಷ್ಟಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆಂದು ಸರಬರಾಜು ಆಗಿರುವ ವಸ್ತುಗಳು ಕೆಲ ದಿನಗಳಲ್ಲೇ ಅನುಪಯುಕ್ತವಾಗಲಿದೆ.
ಈ ಮಧ್ಯೆ ಕಾಲೇಜಿನ ಪ್ರಾಂಶುಪಾಲರ ಹಿಡಿತ ತಪ್ಪಿದಂತಿದೆ. ಪ್ರಾಂಶುಪಾಲರು ಪದೇ ಪದೇ ಹಾಕುವ ಗೈರು ಹಾಜರಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದ ಸ್ವೇಚ್ಛಾಚಾರಕ್ಕೆ ಕಾರಣವಾಗಿದೆ. ಕಾಲೇಜಿನ ಒಳಗೇ ಶುಧ್ಧ ನೀರು ನೀಡುವ ಯಂತ್ರ ಇದೆ. ಆದರೆ ನೀರು ಸರಬರಾಜಾಗಲು ವ್ಯವಸ್ಥೆಯೇ ಇಲ್ಲ. ಸೂಕ್ತವಾದ ವಿದ್ಯುತ್ ಸರಬರಾಜಿಗೆ ತೊಂದರೆ ಇದೆ ಎಂಬುದು ಸಿಬ್ಬಂದಿಯ ಸಬೂಬು. ನೀರಿನ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶೌಚಾಲಯಕ್ಕೆ ಹೋಗಿ ಬರುವುದು ಅಸಹನೀಯವಾಗಿದೆ. ಲಕ್ಷಾಂತರ ರು.ಗಳಲ್ಲಿ ಗ್ರಂಥಾಲಯವೇನೋ ಇದೆ. ಆದರೆ ಕುಳಿತು ಓದುವ ವ್ಯವಧಾನ ವಿದ್ಯಾರ್ಥಿಗಳಿಗೆ ಇಲ್ಲದಾಗಿದೆ. ಕಾರಣ ಕೇವಲ ಮೂರು ಮಂದಿ ಮಾತ್ರ ಗ್ರಂಥಾಲಯದೊಳಗೆ ಕುಳಿತುಕೊಳ್ಳಲು ಸಾಧ್ಯ. ನಾಲ್ಕನೇ ವಿದ್ಯಾರ್ಥಿ ಬಂದರೂ ಆಚೆ ನಿಲ್ಲುವ ಸ್ಥಿತಿ ಇದೆ. ವಿವಿಧ ಪ್ರಯೋಗ ಶಾಲೆಗಳಲ್ಲೇ ಸಿಕ್ಕ ಸ್ವಲ್ಪ ಜಾಗದಲ್ಲೇ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಮಾಡುವ ದುಸ್ಥಿತಿ ಈ ಪ್ರಥಮ ದರ್ಜೆ ಕಾಲೇಜಿಗೆ ಬಂದೊದಗಿದೆ.
ಕಾರಿಡಾರ್‌ನಲ್ಲಿ ಡೆಸ್ಕ್‌ಗಳು: ಡೆಸ್ಕ್‌ಗಳನ್ನು ಹಾಕಲು ಕೊಠಡಿಗಳು ಇಲ್ಲದೇ ಕಾಲೇಜಿನ ಕಾರಿಡಾರ್‌ನಲ್ಲೇ ಇಡಲಾಗಿದೆ. ಮಳೆ, ಬಿಸಿಲಿಗೆ ಡೆಸ್ಕ್‌ಗಳು ತನ್ನ ಗುಣಮಟ್ಟವನ್ನು ಕಳೆದುಕೊಂಡು ಕೆಲ ದಿನಗಳಲ್ಲಿ ಹಾಳಾಗುವ ಸಾಧ್ಯತೆ ಇದೆ.
ಕಾಲೇಜಿಗೆ ಇನ್ನೂ ಆರೇಳು ಕೊಠಡಿಗಳ ನಿರ್ಮಾಣ ಮಾಡಲು ಸುಮಾರು 90 ಲಕ್ಷ ರು. ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ. ಆದರೆ ಗುತ್ತಿಗೆದಾರ ಇನ್ನೂ ಕೆಲಸ ಮಾಡುವ ಮನಸ್ಸು ಮಾಡಿಲ್ಲ. ಈ ಮಧ್ಯೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯ್ತಿಯಿಂದ ಎರಡೆರೆಡು ಕೊಠಡಿಗಳನ್ನು ನಿರ್ಮಿಸಲು ಕಾಮಗಾರಿ ನಡೆದಿದೆ. ಆದರೆ ಅವೆಲ್ಲಾ ಅರ್ಧಂಬರ್ಧ ಆಗಿದೆ. ಕಟ್ಟಡಗಳ ನಿರ್ಮಾಣಕ್ಕೆಂದು ಮೀಸಲಿಟ್ಟಿದ್ದ ಹಣ ಸಂಪೂರ್ಣವಾಗಿ ಖರ್ಚಾಗಿದೆ ಎಂಬ ಮಾಹಿತಿ ಇದೆ. ಯಾಕೋ ಇನ್ನೂ ಅದ್ಯಾವುದೂ ಪೂರ್ಣಗೊಂಡಿಲ್ಲ.
ನೂತನ ಕಟ್ಟಡ ನಿರ್ಮಾಣ ಮಾಡುವವರೆಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಾಣ ಮಾಡಿ ಸದ್ಯ ಖಾಲಿ ಇರುವ ಹಳೆಯ ಪ್ರಥಮ ದರ್ಜೆ ಕಾಲೇಜಿನಲ್ಲೇ ತರಗತಿಗಳನ್ನು ತೆರೆದು ಕೊಠಡಿಯ ಸಮಸ್ಯೆಯನ್ನು ಬಗೆಹರಿಸುವುದು ಪರಿಹಾರವಾಗಿದೆ. ಪದವಿ ಕಾಲೇಜಿಗೆ ಬಸ್ ನಿಲ್ದಾಣದಿಂದ ಸೂಕ್ತ ಬಸ್ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳ ಆಗ್ರಹವಾಗಿದೆ. ಕಾಲೇಜಿಗೆ ಸಕಾಲಕ್ಕೆ ಹಾಜರಾಗದ ಪ್ರಾಂಶುಪಾಲರು ಹಾಗೂ ಇತರೆ ಸಿಬ್ಬಂದಿ ವರ್ಗಗಳ ಗೈರು ಹಾಜರಿ ಬಗ್ಗೆ ಹಾಗೂ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು  ಹಿರಿಯ ಅಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನ ಹರಿಸಿ ತಾಲ್ಲೂಕಿನ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸುವುದು ಅತ್ಯಗತ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement