ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ಯಾರಿ-ಓವರ್‌ಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Srinivasa Murthy VN
Updated On : 27 Jul 2013, 12:34 pm

ಕ.ಪ್ರ. ವಾರ್ತೆ ತುಮಕೂರು ಜು. 26
ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕ್ಯಾರಿ-ಓವರ್ ಪದ್ಧತಿಗಾಗಿ ಆಗ್ರಹಿಸಿ, ಶುಕ್ರವಾರ ಸಾವಿರಾರು ವಿದ್ಯಾರ್ಥಿಗಳು ಹೋರಾಟ ಮುಂದುವರಿಸಿದ್ದು, ಕನ್ನಡ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಗರದ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ತಾಂತ್ರಿಕ ಶಿಕ್ಷಣ ಮಂಡಳಿಯ ಭೂತ ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಇ.ರಘುರಾಮ್, ಪ್ರಧಾನ ಕಾರ್ಯದರ್ಶಿ ಜಿ.ಟಿ.ಎಲ್ಲೇಶ್‌ಗೌಡ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸಂತೋಷ್ ಕಬ್ಬಿಗೆರೆ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಾಲೇಜು ಬಹಿಷ್ಕರಿಸಿ, ಕ್ಯಾರಿ-ಓವರ್ ಪದ್ಧತಿ ಶೀಘ್ರವೇ ಮುಂದುವರಿಸುವಂತೆ ಒತ್ತಾಯಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ಶಿವಕುಮಾರಸ್ವಾಮಿಗಳ ವೃತ್ತದ ಮುಖಾಂತರ ಟೌನ್‌ಹಾಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಭೂತ ದಹನ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಟಿ.ಇ. ರಘುರಾಮ್, ಸರ್ಕಾರಗಳು ತಾಂತ್ರಿಕ ಶಿಕ್ಷಣದ ಹೆಸರಲ್ಲಿ ವ್ಯಾಪಾರೀಕರಣ ಮಾಡುತ್ತಿವೆಯೇ ಹೊರತು ತಾಂತ್ರಿಕ ಶಿಕ್ಷಣದ ಮೂಲಭೂತ ಸಮಸ್ಯೆ ನೀಗಿಸುವಲ್ಲಿ ವಿಫಲವಾಗಿವೆ. ತಾಂತ್ರಿಕ ಶಿಕ್ಷಣ ಮಂಡಳಿಯ ಲೋಪದೋಷ ಸರಿಪಡಿಸಿಕೊಳ್ಳದೇ ವಿದ್ಯಾರ್ಥಿಗಳನ್ನು ಬಲಿಪಶುವನ್ನಾಗಿ ಮಾಡುತ್ತಿದೆ ಎಂದು ಆಪಾದಿಸಿದರು.
ಪ್ರತಿ ಸೆಮಿಸ್ಟರ್‌ಗೆ ಶಿಕ್ಷಣ ಮಂಡಳಿ  ತಿಂಗಳ ಅವಧಿ ನಿಗಧಿಪಡಿಸಿದೆ. ಇದರಲ್ಲಿ 1 ತಿಂಗಳು ಪ್ರಯೋಗಾಲಯ ಪರೀಕ್ಷೆಗಳು, 1 ತಿಂಗಳು ಲಿಖಿತ ಪರೀಕ್ಷೆಗಳು ನಡೆಯಲಿವೆ. ಉಳಿದ 4 ತಿಂಗಳಲ್ಲಿ 15 ದಿನ ಸರ್ಕಾರಿ ರಜೆ ಮತ್ತು 15  ಭಾನುವಾರದ ರಜೆಗಳಿರುತ್ತದೆ. ಇವೆಲ್ಲ ದಿನಗಳ ತೆಗೆದರೆ ಉಳಿದ 3 ತಿಂಗಳಲ್ಲಿ ವಿದ್ಯಾರ್ಥಿಗಳು 7 ವಿಷಯ ಅಧ್ಯಯನ ಜೊತೆಗೆ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಇದು ಸಾಧ್ಯವೇ ಎಂಬುದನ್ನು ತಾಂತ್ರಿಕ ಶಿಕ್ಷಣ ಮಂಡಳಿಯೇ ಸಮಾಜಾಯಿಷಿ ನೀಡಬೇಕೆಂದು ಆಗ್ರಹಿಸಿದರು. ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸಂತೋಷ್ ಕಬ್ಬಿಗೆರೆ ಮಾತನಾಡಿ, ಅಲ್ಪಾವಧಿ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರಿಂದ ಫಲಿತಾಂಶ ಇಳಿಮುಖವಾಗುತ್ತಿದ್ದು, ಕ್ಯಾರಿ-ಓವರ್ ಪದ್ಧತಿ ಅನಿವಾರ್ಯ ಎಂದರು.
ಕನ್ನಡ ಕರವೇಯ ನಗರ ವಿದ್ಯಾರ್ಥಿ ಅಧ್ಯಕ್ಷ ಚಂದನ್, ಕನ್ನಡ ಕರವೇಯ ಜಿಲ್ಲಾ ಉಪಾಧ್ಯಕ್ಷ ನಸೀರ್ ಅಹ್ಮದ್, ಕಾರ್ಯದರ್ಶಿ ಎ.ಮಹಲಿಂಗಯ್ಯ, ಕಾರ್ಮಿಕ ಘಟಕದ ಅಧ್ಯಕ್ಷ ಕರ್ಣಸ್ವಾಮಿ, ಕನ್ನಡ ಕರವೇಯ ವಿದ್ಯಾರ್ಥಿ ಘಟಕದ ಜಿಲ್ಲಾ ಉಪಾಧ್ಯಕ್ಷ ಸುರೇಶ್, ನಗರ ಕಾರ್ಯದರ್ಶಿ ಪ್ರೀತಂ, ಮಧು, ಆರ್ಯ ಭಾರತಿ ಪಾಲಿಟೆಕ್ನಿಕ್ ಕಾಲೇಜಿನ ಪುನೀತ್, ಶ್ರೀದೇವಿ ಪಾಲಿಟೆಕ್ನಿಕ್ ಕಾಲೇಜಿನ ಮಣಿಕಂಠ, ದೀಪು, ಅಕ್ಷಯ ಕಾಲೇಜಿನ ರಾಕೇಶ್, ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನ ಚಂದನ್, ಹೆಚ್.ಎಂ.ಎಸ್. ಕಾಲೇಜಿನ ರಾಜು,ಅಮೂಲ್ಯ, ವಕ್ತಾರ ಪ್ರಕಾಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement