ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಣಿಗಲ್ ಕಾಡು ಒತ್ತುವರಿಗೆ ಇಲಾಖಾಧಿಕಾರಿಗಳು ಜಾಣಕುರುಡು

Srinivasa Murthy VN
Updated On : 28 Jul 2013, 12:35 pm

ಕ.ಪ್ರ.ವಾರ್ತೆ ಕುಣಿಗಲ್ ಜು.27
ತಾಲೂಕಿನಲ್ಲಿ ಅರಣ್ಯ ಇಲಾಖೆ ಕುಂಭಕರ್ಣ ನಿದ್ದೆಯಲ್ಲಿದೆ. ಅರಣ್ಯ ಪ್ರದೇಶದ ಮರಗಳನ್ನು ಅವ್ಯಾಹತವಾಗಿ ಕಡಿದು ಸಾಗಿಸಿ, ಅರಣ್ಯಪ್ರದೇಶಗಳನ್ನು ವ್ಯಾಪಕ ಒತ್ತುವರಿ ಮಾಡುತ್ತಿದ್ದರೂ, ಅರಣ್ಯ ಇಲಾಖಾಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆಂದು ವಕೀಲರಾದ ಐಡಿಯಾ ಪ್ರಕಾಶ್, ಲೋಕಾಯುಕ್ತ ನಿರೀಕ್ಷಕರಿಗೆ ಅರ್ಜಿ ಸಲ್ಲಿಸಿ ಆರೋಪಿಸಿದರು.
ಲೋಕಾಯುಕ್ತ ನಿರೀಕ್ಷಕ ಗೌತಮ್ ಶುಕ್ರವಾರ ಕಂದಾಯ ಭವನದಲ್ಲಿ ಸಾರ್ವಜನಿಕರ ವಿವಿಧ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಹವಾಲು ಸಲ್ಲಿಸಿದ ವಕೀಲ ಐಡಿಯಾ ಪ್ರಕಾಶ್, ತರೇದಕುಪ್ಪೆ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಂದೆ ಕುಟುಂಬಕ್ಕೆ ಸೇರಿದ ಬಲಾಢ್ಯ ವ್ಯಕ್ತಿಗಳು ಅರಣ್ಯಪ್ರದೇಶ ಒತ್ತುವರಿ ಮಾಡಿದ್ದು, ದಾಖಲೆಗಳ ಸಮೇತ ರುಜುವಾತಾಗಿದ್ದರೂ, ಹಿಂದಿನ ತಹಶೀಲ್ದಾರ್ ಕೆಲ ಸರ್ವೇ ನಂಬರ್‌ನ ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸಿರುವುದಾಗಿ ಸುಳ್ಳು ದಾಖಲೆ ನೀಡಿದ್ದಾರೆ. ಇನ್ನು ಅರಣ್ಯಇಲಾಖೆ ಅಧಿಕಾರಿಗಳಂತೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ದಾಖಲೆ ಸಮೇತ ದೂರು ನೀಡಿದರು.
ಆಗ ಅರಣ್ಯ ಇಲಾಖಾಧಿಕಾರಿಗಳನ್ನು ಲೋಕಾಯುಕ್ತ ಸಿಪಿಐ ಪ್ರಶ್ನಿಸಿದಾಗ, ಅರಣ್ಯಾಧಿಕಾರಿಗಳು ಒತ್ತುವರಿಯಾಗಿರುವುದನ್ನು ಒಪ್ಪಿಕೊಂಡರು. ಒತ್ತುವರಿ ತೆರವುಗೊಳಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಪಿಐ, 15 ದಿನದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ತಿಂಗಳು ಉಪಲೋಕಾಯುಕ್ತರು ತುಮಕೂರಿಗೆ ಆಗಮಿಸಲಿದ್ದು, ಪ್ರಕರಣವನ್ನು ಅವರ ಮುಂದೆ ವಿಚಾರಣೆಗೆ ಇಡುವುದಾಗಿ ಎಚ್ಚರಿಸಿದರು.
ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್, ರಾಜ್ಯಹೆದ್ದಾರಿ 33ಕ್ಕೆ ಮತ್ತು ಪಟ್ಟಣದ ವಿವಿಧ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ ಪ್ರದೇಶ ಹಾಗೂ ಕೋಡಿ ಪ್ರದೇಶ ವ್ಯಾಪಕ ಒತ್ತುವರಿಯಾಗಿದ್ದು ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ ಮೇರೆಗೆ, ಹೇಮಾವತಿ ನಾಲಾ ವಲಯದ ಅಧಿಕಾರಿಗಳಿಗೆ ಕೂಡಲೆ ಅಗತ್ಯ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಸಿಪಿಐ ಸೂಚಿಸಿದರು.
ಕಾಸ್ ಕೊಟ್ರೆ ಕನೆಕ್ಷನ್: ಅಮೃತೂರು ಮಾದಿಹಳ್ಳಿಯ ದಲಿತ ಕಾಲೋನಿಯ 15ಕ್ಕೂಹೆಚ್ಚು ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ ಮಾಡಿದರೆ, ಆಭಾಗದ ಬೆಸ್ಕಾಂ ಎಸ್‌ಒ, ಹಣ ನೀಡಿದರೆ ಮಾತ್ರ ಕನೆಕ್ಷನ್ ಇಲ್ಲಾಂದ್ರೆ ಇಲ್ಲ ಎಂದು ಹಣಕ್ಕಾಗಿ ಪೀಡಿಸುತ್ತಿದ್ದಾರೆಂದು, ಗ್ರಾಮದ ರಾಮಯ್ಯ ನೀಡಿದ ದೂರಿನ ಮೇರೆಗೆ, ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಲೋಕಾಯುಕ್ತ ಸಿಪಿಐ, ಕೂಡಲೆ ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದರು.
ಮಾರ್ಕೋನಹಳ್ಳಿಯ ಸರ್ವೇ ನಂಬರ್ 61ರಲ್ಲಿ ಎರಡುವರೆ ಎಕರೆ ಗ್ರಾಮಠಾಣಾ ಜಮೀನಿದ್ದು, ಕಂದಾಯ ಇಲಾಖಾಧಿಕಾರಿಗಳು ಅಕ್ರಮ ಎಸಗಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಪಹಣಿ ಬರುವಂತೆ ಮಾಡಿರುವ ಬಗ್ಗೆ ಮಾರ್ಕೋನಹಳ್ಳಿಯ ಮಂಚೇಗೌಡ ದೂರು ನೀಡಿದ ಮೇರೆಗೆ, ಸದರಿ ಪ್ರಕರಣವನ್ನು ಉಪಲೋಕಾಯುಕ್ತರ ನೇರ ವಿಚಾರಣೆಗೆ ಪರಿಗಣಿಸಿದರು.
ಕಳೆದ ಹಲವು ಸಭೆಗಳಿಗೆ ಹೋಲಿಸಿದರೆ ಶುಕ್ರವಾರ ನಡೆದ ಲೋಕಾಯುಕ್ತ ಅಹವಾಲು ಸ್ವೀಕರಣಾ ಸಭೆಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಯಿತು. 19 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಳೆದ ತಿಂಗಳು ಸಲ್ಲಿಕೆಯಾದ 17 ಅರ್ಜಿಗಳ ಪೈಕಿ 5 ವಿಲೇವಾರಿ ಮಾಡಲಾಗಿದ್ದು, ಉಳಿಕೆ 12ಕ್ಕೆ ಮಧ್ಯಂತರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದ ಅವರು, ಹೇಮಾವತಿ ನಾಲಾ ವಲಯಕ್ಕೆ ಸೇರಿದ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ತೆರವು ಮಾಡದ ನಾಲಾ ವಲಯದ ಜೆಇ ಅವರನ್ನು ತರಾಟೆಗೆ ತೆಗೆದುಕೊಂಡರು. ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ, ನಾವೇ ಮುಂದಾಗಿ ಅಗತ್ಯ ಕ್ರಮ ಕೈಗೊಂಡು, ನಂತರ ನಿಮ್ಮ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಜಗದೀಶ್ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement