ಗ್ರಾಪಂಗಳ ಸಹಕಾರ ಉದ್ಯೋಗ ಖಾತ್ರಿ ಸಾಕಾರ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಜು.27
ಗ್ರಾಮಪಂಚಾಯ್ತಿಗಳ ಸಹಕಾರವಿದ್ದರೆ ಮಾತ್ರ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಯಾಗಬಲ್ಲದು ಎಂದು ತಾಪಂ ಅಧ್ಯಕ್ಷ ಎಚ್.ಆರ್.ಶಶಿಧರ್ ನುಡಿದರು.
ಶುಕ್ರವಾರ ಅವರು ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ವಲಯ ಅರಣ್ಯಾಧಿಕಾರಿಗಳ ಕಚೇರಿ, ಕೃಷಿ ಇಲಾಖೆ, ಪಶುವೈದ್ಯ ಇಲಾಖೆ, ರೇಷ್ಮೆ, ಮೀನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಉದ್ಯೋಗ ಖಾತ್ರಿ ಯೋಜನೆ ಕ್ರಿಯಾಯೋಜನೆ ಸಂಬಂಧ ಗ್ರಾಮಪಂಚಾಯ್ತಿಗಳು ಗ್ರಾಮಸಭೆಗಳನ್ನು ಪ್ರಾಮಾಣಿಕವಾಗಿ ನಡೆಸಿದರೆ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತದೆ. ಇದರ ಜೊತೆಗೆ ಯೋಜನೆ ಬಗ್ಗೆ ಪ್ರಚಾರದ ಕೊರತೆಯು ಸಹ ಸೇರಿದೆ. ಈ ಬಗ್ಗೆ ಗ್ರಾಮಪಂಚಾಯ್ತಿಗಳನ್ನು ಪ್ರಶ್ನಿಸಿದರೆ ಯೋಜನೆ ಕೈಗೆತ್ತಿಕೊಳ್ಳಲು ಜನ ಮುಂದೆ ಬರುತ್ತಿಲ್ಲ ಎಂು ಹೇಳುತ್ತಾರೆ. ಗ್ರಾಮಪಂಚಾಯ್ತಿಗಳು ಸಹಕರಿಸುತ್ತಿಲ್ಲ ಎಂದು ಜನ ದೂರುತ್ತಾರೆ. ಗ್ರಾಮಪಂಚಾಯ್ತಿಗಳು ವರ್ಷದ ಕೊನೆಯಲ್ಲಿ ಕ್ರಿಯಾ ಯೋಜನೆ ಮಾಡಿ ಅವಸರದಲ್ಲಿ ಅರ್ಧಂಬರ್ಧ ಕಾಮಗಾರಿಗಳನ್ನು ಮಾಡುವ ಬದಲು ಈಗಿನಿಂದಲೇ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಸಲಹೆ ನೀಡಿದರು.
ತಾಪಂ ಉಪಾಧ್ಯಕ್ಷ ಎ.ಬಿ.ರಮೇಶ್‌ಕುಮಾರ್ ಮಾತನಾಡಿ ಉದ್ಯೋಗ ಖಾತ್ರಿಯೋಜನೆಗೆ ಸರ್ಕಾರದಿಂದ ಸಮರ್ಪಕವಾಗಿ ಹಣದ ಪೂರೈಕೆಯಾಗುತ್ತಿಲ್ಲ. ಸಂಸದ ಮತ್ತು ಶಾಸಕರಿಗಿಂತ ಹೆಚ್ಚಿನ ಅನುದಾನವನ್ನು ಗ್ರಾಮಪಂಚಾಯ್ತಿಗಳು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಗ್ರಾಮಪಂಚಾಯ್ತಿಗಳು ಪಕ್ಷಪಾತ ಧೋರಣೆಯಲ್ಲಿ ಸಿಲುಕಿ ಅಭಿವೃದ್ಧಿಯನ್ನು ರಾಜಕೀಯಗೊಳಿಸಿವೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕರಾದ ಹನುಮನರಸಯ್ಯನವರು ಪ್ರಸ್ತುತ ಯೋಜನೆಯಲ್ಲಿ ಹಿಂದೆ ಇದ್ದ ಕೂಲಿ ದರವನ್ನು ಪರಿಷ್ಕೃತಗೊಳಿಸಿ 174 ರು.ಗಳಿಗೆ ಏರಿಸಲಾಗಿದೆ. ನಿರ್ಮಲ ಭಾರತ್ ಅಭಿಯಾನ್ ಯೋಜನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಖಾತರಿಯೋಜನೆಯಲ್ಲಿ 4500 ಮತ್ತು ಭಾರತ್ ಅಭಿಯಾನ ಯೋಜನೆಯಡಿ 4700 ರು.ಗಳನ್ನು ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ ಶೌಚಾಲಯ ನಿರ್ಮಾಣದಲ್ಲಿ ಗುರಿಮೀರಿ ನಿರ್ಮಾಣವಾಗಿದ್ದು ಖಾತ್ರಿಯೋಜನೆಯ ಹೆಗ್ಗಳಿಕೆ ಎಂದರು.
ಜಿಪಂ ಸದಸ್ಯೆ ಲೋಹಿತಾಬಾಯಿ, ತಾಪಂ ಸದಸ್ಯರಾದ ಲತಾವಿಶ್ವೇಶ್ವರಯ್ಯ, ಹೇಮಾವತಿ, ಕೆಂಕೆರೆನವೀನ್ ಮುಂತಾದವರಿದ್ದರು. ಬಿಇಓ ಸಾ.ಚಿ.ನಾಗೇಶ್ ಸ್ವಾಗತಿಸಿದರು. ಸ.ಕೃಷಿ ನಿರ್ದೇಶಕ ಕೃಷ್ಣಪ್ಪ, ಜಲಾನಯನ ಅಧಿಕಾರಿ ಪುರುಷೋತ್ತಮ್ ಮುಂತಾದವರಿದ್ದರು.