ಮರಳು ಮಾಫಿಯಾ ಜತೆ ತಹಶೀಲ್ದಾರ್ ಜಗದೀಶ್ ಶಾಮೀಲು: ಆರೋಪ
ಕುಣಿಗಲ್: ಲೋಕಾಯುಕ್ತ ಸಿಪಿಐ ಗೌತಮ್ ಪಕ್ಕದಲ್ಲೆ ಕುಳಿತಿದ್ದ ತಹಶೀಲ್ದಾರ್ ಜಗದೀಶ್ ವಿರುದ್ಧವೇ ತನಿಖೆ ನಡೆಸುವಂತೆ ಸಾರ್ವಜನಿಕರೊಬ್ಬರು ದೂರು ನೀಡಿದ ಘಟನೆ ನಡೆಯಿತು. ಲೋಕಾಯುಕ್ತ ಸಿಪಿಐ ಗೌತಮ್ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವಾಗ ಮಾಗಡಿಪಾಳ್ಯ ಲಕ್ಷ್ಮಣ್ ಎಂಬುವವರು, ತಾಲೂಕಿನ ಬೇಗೂರು ಕೆರೆಯಲ್ಲಿ ಅಂಚೆಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದ ಸಮೀಪದ ವೀನರ್ ಬರ್ಗರ್ ಕಾರ್ಖಾನೆಗೆ ಜೇಡಿ ಮಣ್ಣು ಸರಬರಾಜು ಮಾಡಲು, ಶಾಸಕ ಡಿ.ನಾಗರಾಜಯ್ಯನವರ ಸಹೋದರ ರಾಮಚಂದ್ರ ಎಂಬುವವರು ಗುತ್ತಿಗೆ ಪಡೆದಿದ್ದು, ಗುತ್ತಿಗೆಯ ಕರಾರಿನಂತೆ ಕೆರೆಯ ಎಲ್ಲಾ ಪ್ರದೇಶದಲ್ಲಿ ಕೇವಲ ಮೂರು ಮಾತ್ರ ಅಗೆಯಬೇಕಿದೆ. ಆದರೆ, ಅದನ್ನು ಉಲ್ಲಂಘಿಸಿ, ಕೆರೆಯಲ್ಲಿ ಮನಬಂದಂತೆ ಅಗೆದು, ಯಥೇಚ್ಚವಾಗಿ ಮರಳು ಸಿಕ್ಕಿದ ಮೇಲೆ, ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಲ್ಲದೆ, ಪ್ರಭಾವಿಗಳ ಮನೆಗಳ ಬಳಿ ಸಂಗ್ರಹ ಸಹ ಮಾಡಿದ್ದಾರೆ.
ಈ ಬಗ್ಗೆ ತಹಶೀಲ್ದಾರ್‌ರವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ, ಪ್ರಭಾವಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅಕ್ರಮ ಎಸಗಿದ್ದಾರೆ.
ಅಲ್ಲದೆ ಕೆರೆಯಲ್ಲಿ 2 ಹಿಟಾಚಿ ಯಂತ್ರ ಮತ್ತು 11 ದೊಡ್ಡ ಟಿಪ್ಪರ್‌ಗಳು ಮರಳು ತುಂಬಿಕೊಂಡು ಬರುತ್ತಿದ್ದಾಗ, ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಟಿಪ್ಪರ್‌ಗಳಲ್ಲಿದ್ದ ಮರಳನ್ನು ಸುರಿಸಿ ನಂತರ ವಾಹನಗಳನ್ನು ಬಿಟ್ಟು ಕಳಿಸಿದ್ದು, ಪ್ರಕರಣ ದಾಖಲಿಸದೆ ಕರ್ತವ್ಯಲೋಪ ಎಸಗಿದ್ದಾರೆ.
ತಹಶೀಲ್ದಾರ್ ಅಕ್ರಮ ಮರಳು ಸಾಗಣೆ ಮಾಫಿಯದೊಂದಿಗೆ ಶಾಮೀಲಾಗಿದ್ದು, ಇವರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದರು. ದೂರನ್ನು ಸ್ವೀಕರಿಸಿದ ಲೋಕಾಯುಕ್ತ ಸಿಪಿಐ, ಸದರಿ ದೂರನ್ನು ಮುಂದಿನ ಕ್ರಮಕ್ಕೆ ಉಪವಿಭಾಗಾಧಿಕಾರಿಗಳಿಗೆ ನೀಡಿ, ವರದಿ ಕೇಳಲಾಗುವುದೆಂದರು.