ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಾಸಕ ನಾಗರಾಜಯ್ಯ ಕುಟುಂಬದವರು ಅಕ್ರಮ ಮರಳುಗಾರಿಕೆ ನಡೆಸಿಲ್ಲ

Srinivasa Murthy VN
Updated On : 28 Jul 2013, 12:38 pm

ಕ.ಪ್ರ.ವಾರ್ತೆ ಕುಣಿಗಲ್ ಜು. 27
ಶಾಸಕ ಡಿ.ನಾಗರಾಜಯ್ಯನವರ ಕುಟುಂಬದ ಯಾವುದೇ ಸದಸ್ಯರು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಲ್ಲ. ನಿಯಮ ಬದ್ಧವಾಗಿ ಸರ್ಕಾರಕ್ಕೆ ರಾಯಧನ ಪಾವತಿಸಿ ಬೇಗೂರು ಕೆರೆಯ ಜೇಡಿಮಣ್ಣನ್ನು ಮಾತ್ರ ಕಾರ್ಖಾನೆಗೆ ಸಾಗಾಟ ಮಾಡುವ ಗುತ್ತಿಗೆ ಪಡೆದು, ಗುತ್ತಿಗೆಯ ಕರಾರಿನಂತೆ ಕೆಲಸ ನಿರ್ವಹಣೆ ಮಾಡಲಾಗಿದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎನ್. ಜಗದೀಶ್ ತಿಳಿಸಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಅಂಚೇಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಬಹುರಾಷ್ಟ್ರೀಯ ಇಟ್ಟಿಗೆ ತಯಾರಿಕೆ ಕಂಪನಿಯಾದ ವೀನರ್ ಬರ್ಗರ್ ಕಾರ್ಖಾನೆಗೆ ಮೂಲವಸ್ತುವಾಗಿ ಕೆರೆಯ ಜೇಡಿಮಣ್ಣು ಬಳಸುತ್ತಿದ್ದು, ಸದರಿ ಕಾರ್ಖಾನೆಗೆ ಬೇಕಾಗುವ ಜೇಡಿಮಣ್ಣನ್ನು ತಾಲೂಕಿನ ಬೇಗೂರು ಕೆರೆಯಿಂದ ಸಾಗಿಸಲು, ಶಾಸಕರ ಸಹೋದರರಾದ ರಾಮಚಂದ್ರಪ್ಪ ಗುತ್ತಿಗೆ ಪಡೆದು, ಒಂದು ತಿಂಗಳ ಮಟ್ಟಿಗೆ 16 ಲಕ್ಷ ರು. ರಾಯಧನ ಪಾವತಿಸಿ, ಜೇಡಿಮಣ್ಣನ್ನು ಮಾತ್ರ ಸಾಗಾಟ ಮಾಡಿದ್ದಾರೆ.
ಸದರಿ ಕೆರೆ ಜೇಡಿ ಮಣ್ಣನ್ನು ಸಾಗಾಟ ಮಾಡುವ ಗುತ್ತಿಗೆ ಪಡೆಯಲು ಕೆಲ ಕಾಂಗ್ರೆಸ್ ಕಾರ್ಯಕರ್ತರು ಹಲವು ಬಾರಿ ಯತ್ನಿಸಿ ವಿಫಲರಾಗಿದ್ದರು. ಈಗ ರಾಮಚಂದ್ರಪ್ಪ ನಿಯಮಬದ್ಧವಾಗಿ ಸರ್ಕಾರಕ್ಕೆ ರಾಯಧನ ಪಾವತಿಸಿ ಕೆರೆಯ ಜೇಡಿಮಣ್ಣನ್ನು ಮಾತ್ರ ಸಾಗಾಟ ಮಾಡಿದ್ದರೂ, ಇದನ್ನು ಕಡೆಗಣಿಸಿ ಬೇಗೂರು ಕೆರೆಯಲ್ಲಿ ಮರಳು ದೊರಕಿದ್ದು, ಶಾಸಕರಾದ ಡಿ.ನಾಗರಾಜಯ್ಯನವರ ಕುಟುಂಬದ ಸದಸ್ಯರು ಮರಳು ಸಾಗಾಟದಲ್ಲಿ ತೊಡಗಿದ್ದಾರೆಂದು ಆರೋಪ ಮಾಡಿದ್ದು ನಿಜಕ್ಕೂ ಕಾಂಗ್ರೆಸ್ ಕಾರ್ಯಕರ್ತರ ಹತಾಶ ಮನೋಭಾವ ತೋರಿಸಿದಂತಾಗಿದೆ ಎಂದರು.
ಕೆರೆಯ ಜೇಡಿಮಣ್ಣನ್ನು ಈ ಹಿಂದೆ ಐದು ವರ್ಷಗಳ ಕಾಲ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ, ನಂಜೇಗೌಡ ಎಂಬುವರು ಸೆವನ್‌ವಿಷನ್ಸ್ ಹಾಗೂ ಎಸ್‌ಆರ್‌ಟಿ ಲಾಜಿಸ್ಟ್‌ಕ್ಸ್ ಕಂಪನಿ ಬೆಂಗಳೂರು ಹೆಸರಲ್ಲಿ ಗುತ್ತಿಗೆ ಪಡೆದು, ಕಾರ್ಖಾನೆಯವರು ಕೋಟ್ಯಂತರ ರೂಪಾಯಿ ರಾಯಧನ ಪಾವತಿಸಿದ್ದರೂ, ಗುತ್ತಿಗೆ ಪಡೆದಂತಹವರು ಸರ್ಕಾರಕ್ಕೆ ಯಾವುದೇ ಹಣ ಪಾವತಿಸದೆ, ಸರ್ಕಾರದ ರಾಯಧನ ವಂಚನೆ ಎಸಗಿದ್ದಾರೆ. ಈ ಬಗ್ಗೆ ತಮ್ಮ ಬಳಿ ಅಗತ್ಯ ದಾಖಲೆಗಳಿದ್ದು ಕಳೆದ ಐದು ವರ್ಷಗಳಲ್ಲಿ ನಡೆದಿರುವ ರಾಯಧನ ದುರ್ಬಳಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆಂದರು.
ಕಾಂಗ್ರೆಸ್ ಶಾಸಕರ ಅವಧಿಯಲ್ಲಿ 1 ಕೋಟಿ 80 ಲಕ್ಷ ರು. ಮೌಲ್ಯದ ಮರಳನ್ನು ಶಿಂಷಾ ನದಿ ಪಾತ್ರದಲ್ಲಿ ವಶಪಡಿಸಿಕೊಂಡು, ಈ ಮರಳುಗಾರಿಕೆಯಲ್ಲಿ ಸಾಕಷ್ಟು ಮರಳು ಹಾಗೂ ಹಣ ದುರುಪಯೋಗವಾಗಿದ್ದರೂ ಈ ಬಗ್ಗೆ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ಚಕಾರ ಎತ್ತದೆ ತಪ್ಪಿತಸ್ಥ ಸಿಬ್ಬಂದಿ ರಕ್ಷಣೆಗೆ ನಿಂತಿದ್ದರು.
ಇವರು ಇಂದು ಯಾವ ಮೌಲ್ಯಗಳನ್ನು ಇಟ್ಟುಕೊಂಡು ಅಕ್ರಮ ಮರಳು ಸಾಗಾಣೆ ಬಗ್ಗೆ ಮಾತನಾಡುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರ ಮನೆಗಳ ಬಳಿ ರಾಶಿ, ರಾಶಿ ಮರಳು ಸಂಗ್ರಹಣೆ ಮಾಡಿಕೊಂಡು, ವಿನಾಕಾರಣ  ಜೆಡಿಎಸ್ ಕಾರ್ಯಕರ್ತರ ಮನೆಗಳ ಬಳಿ ಅಕ್ರಮ ಮರಳು ಸಂಗ್ರಹಣೆ ಮಾಡಿದ್ದಾರೆಂದು ದೂರು ನೀಡುವ ಕಾಂಗ್ರೆಸ್ ಮುಖಂಡರು ಆಧಾರರಹಿತ ಆರೋಪಗಳಲ್ಲೆ ಕಾಲ ಕಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ನಡೆದಿರುವ ಮತ್ತಷ್ಟು ಮರಳು, ಮಣ್ಣು ಸಾಗಾಣೆ ಅಕ್ರಮಗಳ ಬಗ್ಗೆ ದಾಖಲೆಗಳ ಸಮೇತ ಹೊರಗೆಡವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಧಾರರಹಿತ ಆರೋಪಗಳನ್ನು ಮಾಡಿದ್ದೇ ಆದಲ್ಲಿ ಅದಕ್ಕೆ ತಕ್ಕ ಬೆಲೆ ತೆರೆಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement