ಕಾಂಗ್ರೆಸ್ ಕಡೆಗೆ ಮುಖ ಮಾಡಿರುವ ಬಿಜೆಪಿ ಸಂಸದ
-ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ ತುಮಕೂರು ಜು. 28
ಬಿಜೆಪಿ ಸಂಸದ ಹಾಗೂ ತುಮಕೂರು ಜಿಲ್ಲೆಯ ಪ್ರಭಾವಿ ನಾಯಕ ಜಿ.ಎಸ್. ಬಸವರಾಜು ಅವರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರಾ?
ಹೌದು ಎನ್ನುತ್ತಿವೆ ಇತ್ತೀಚಿನ ಅವರ ನಡವಳಿಕೆಗಳು. ಒಂದು ವೇಳೆ ಯಡಿಯೂರಪ್ಪನವರು ಬಿಜೆಪಿಗೆ ಮರಳಿದರೆ ತಾವು ನಿಮ್ಮ ಜತೆ ಬರುವುದಿಲ್ಲವೆಂದು ಖಡಕ್ಕಾಗಿಯೇ ಹೇಳಿರುವ ಇವರು ತಮ್ಮ ಮುಂದಿನ ಆಯ್ಕೆ ಕಾಂಗ್ರೆಸ್ ಎಂಬ ಸುಳಿವನ್ನು ನೀಡಿದ್ದರು. ಆದರೆ ಕಳೆದೊಂದು ವಾರದಿಂದ ಅವರು ಕಾಂಗ್ರೆಸ್ ಮುಖಂಡರ ಜತೆ ಓಡಾಡುತ್ತಿರುವುದನ್ನು ಗಮನಿಸಿದರೆ ಸಂಸದರು ಈಗಾಗಲೇ ಮಾನಸಿಕವಾಗಿ ಕಾಂಗ್ರೆಸ್ ಜತೆ ಇದ್ದಾರೆ ಎಂಬುದು ಅವರ ಆಪ್ತರ ಆಂಬೋಣ.
ಮೊನ್ನೆಯಷ್ಟೆ ಕುಣಿಗಲ್ನಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ ಮನೆಯಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಮುಖಂಡರ ಸಭೆಗೂ ಅನಿರೀಕ್ಷಿತವಾಗಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಆದರೆ ನೀರಾವರಿ ವಿಷಯವಾಗಿ ಚರ್ಚಿಸಲು ಹೋಗಿದ್ದೆ ಎಂಬ ವಿವರಣೆ ನೀಡಿದರೂ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಮಾತ್ರ ಸಂಸದರು ಬಿಜೆಪಿ ತೊರೆಯುತ್ತಾರೆ ಎಂಬ ಅಚಲ ನಂಬಿಕೆ ಹುಟ್ಟಿದೆ.
ಬಿಜೆಪಿ ಜಾಯಮಾನ ಆಗಿ ಬರೋಲ್ಲ: ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ. ಹಾಗಾಗಿ ತಮ್ಮ ಜಾಯಮಾನಕ್ಕೆ ಬಿಜೆಪಿ ಆಗಿ ಬರುವುದಿಲ್ಲ ಎಂದು ಬಸವರಾಜ್ ಬಿಜೆಪಿಗೆ ಬಂದಾಗಿನಿಂದ ಹೇಳುತ್ತಲೇ ಇದ್ದರು. ಬಿಜೆಪಿಗೆ ಬಂದಿದ್ದರೂ ಕೇಂದ್ರ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಈಗಾಗಲೇ 4 ಬಾರಿ (3 ಬಾರಿ ಕಾಂಗ್ರೆಸ್ನಿಂದ) ಸಂಸದರಾಗಿರುವ ಬಸವರಾಜ್ ಅವರ ನಡೆ ಬಗ್ಗೆ ಜಿಲ್ಲಾ ರಾಜಕಾರಣ ಕುತೂಹಲದಿಂದ ನೋಡುತ್ತಿದೆ.
ಕುಣಿಗಲ್ನಲ್ಲಿ ರಾಮಸ್ವಾಮಿಗೌಡರ ಮನೆಗೆ ಭೇಟಿ ಕೊಟ್ಟು ಬಂದ ನಂತರ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಅವರ ಜತೆ ಹಲವಾರು ಸಭೆ, ಸಮಾರಂಭಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡು ತಮ್ಮ ಮುಂದಿನ ಆಯ್ಕೆ ಕಾಂಗ್ರೆಸ್ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ತೃತೀಯ ರಂಗದ ಸಾಧ್ಯತೆ ತೀರ ವಿರಳ ಎಂದೇ ಬಸವರಾಜ್ ನಂಬಿದ್ದಾರೆ.
ಕಾಂಗ್ರೆಸ್ ಸಂಘಟಿಸಿದ ಎಂಪಿ: ದಶಕಗಳ ಕಾಲ ತುಮಕೂರು ಜಿಲ್ಲಾ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದ ಬಸವರಾಜ್ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಸದೃಢಗೊಳಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ನಿಂದ ಮೂರು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮುನಿಸಿಕೊಂಡು ಯಡಿಯೂರಪ್ಪನವರ ಒತ್ತಾಸೆ ಮೇರೆಗೆ ಬಿಜೆಪಿಗೆ ಬಂದು ಸಂಸದರಾಗಿ ಆಯ್ಕೆಯಾದರು. ತುಮಕೂರು ಜಿಲ್ಲೆಯಲ್ಲಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವವವರು ಇಬ್ಬರು ಮಾತ್ರ. ಒಬ್ಬರು ಲಕ್ಕಪ್ಪ, ಮತ್ತೊಬ್ಬರು ಜಿ.ಎಸ್. ಬಸವರಾಜು.
ನಿಕಟ ಸಂಪರ್ಕ: ಕೇಂದ್ರದ ಕಾಂಗ್ರೆಸ್ ಪ್ರಭಾವಿ ಮುಖಂಡರೊಂದಿಗೆ ಬಸವರಾಜು ಆಪ್ತ ಒಡನಾಟ ಇಟ್ಟುಕೊಂಡಿದ್ದಾರೆ. ಬಿಜೆಪಿಯಲ್ಲಿದ್ದರೂ ಕೇಂದ್ರದಿಂದ ಸಾಕಷ್ಟು ಅನುದಾನ ತಂದಿದ್ದು ಬಸವರಾಜು ಅವರು ಕಾಂಗ್ರೆಸ್ನೊಂದಿಗೆ ಹೊಂದಿರುವ ಹಿಡಿತವನ್ನು ತೋರಿಸುತ್ತದೆ. ಬಿಜೆಪಿಗೆ ಬಂದಾಗಿನಿಂದಲೂ ಜಿಲ್ಲಾ ಮಟ್ಟದ ಮುಖಂಡರ ಜತೆ ಮುಸುಕಿನ ಗುದ್ದಾಟ ಇದ್ದೇ ಇತ್ತು. ಈಗ ಬದಲಾವಣೆಗೆ ಕಾಲ ಪಕ್ವವಾಗಿದೆ ಎಂಬುದು ಬಸವರಾಜ್ ಅವರ ನಂಬಿಕೆ.
ಒಂದು ವೇಳೆ ಬಿಜೆಪಿಯಿಂದ ಮತ್ತೆ ಕಾಂಗ್ರೆಸ್ಗೆ ವಲಸೆ ಹೋದರೆ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ ಅಭ್ಯರ್ಥಿ ಅವರೇ ಎಂಬ ವ್ಯಾಖ್ಯಾನಗಳು ಜಿಲ್ಲೆಯಲ್ಲಿ ಆರಂಭವಾಗಿದೆ.