ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತ್ತೊಂದು ಅಟಲ್‌ಜೀ ಕೇಂದ್ರಕ್ಕೆ ಒತ್ತಾಯ

Srinivasa Murthy VN
Updated On : 29 Jul 2013, 12:20 pm

ತಿಪಟೂರು: ನಗರದ ತಾಲೂಕು ಕಚೇರಿಯ ಅಟಲ್‌ಜೀ ಜನ ಸ್ನೇಹ ಕೇಂದ್ರದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ, ಅಂಗವಿಕಲ ವೇತನ ಸೇರಿದಂತೆ ಮತ್ತಿತರ ಫಲಾನುಭವಿಗಳು ಅರ್ಜಿ ಹಾಕಲು ಬಳಿಗ್ಗೆಯಿಂದ ಸಂಜೆಯವರೆಗೂ ಸಾಲುಗಟ್ಟಿ ನಿಂತರೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಗರದಲ್ಲಿ ಮತ್ತೊಂದು ಕೇಂದ್ರವನ್ನು ತೆರೆಯಬೇಕೆಂದು ದಲಿತ ಸಂಘರ್ಷ ಸಮಿತಿ ತಾ. ಅಧ್ಯಕ್ಷ ನಾಗತೀಹಳ್ಳಿ ಕೃಷ್ಣಮೂರ್ತಿ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ. ತಾಲೂಕಿನ ಕಸಬಾ 1 ಮತ್ತು 2 ಹಾಗೂ ನಗರದ ನಿವಾಸಿಗಳು ವಿಧವಾ ವೇತನ, ಸಂಧ್ಯಾಸುರಕ್ಷಾ ಇನ್ನೂ ಮುಂತಾದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಪ್ರತಿ ದಿನ ಊಟ ನೀರು ಇಲ್ಲದೆ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ವಯೋವೃದ್ಧರೇ ಹೆಚ್ಚಾಗಿ ಬರುವುದರಿಂದ ಊಟವಿಲ್ಲದೆ ಪ್ರಜ್ಞೆತಪ್ಪಿ ಬಿದ್ದರೂ ಸಹ ಯಾರೂ ಕೂಡ ಸ್ಪಂದಿಸುವುದಿಲ್ಲ. ಇದಕ್ಕೆಲ್ಲಾ ತಾಲೂಕು ಆಡಳಿತವೇ ನೇರ ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ. ನಗರಕ್ಕೆ ಸೀಮಿತವಾಗಿ ಬೇರೊಂದು ಕೇಂದ್ರ ಸ್ಥಾಪಿಸುವಂತೆ ತಾಲೂಕು ಆಡಳಿತಕ್ಕೆ ಹಲವು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಈ ಕೂಡಲೆ ಮತ್ತೊಂದು ಕೇಂದ್ರವನ್ನು ತೆರೆಯದಿದ್ದರೆ ತಾಲೂಕು ಕಚೇರಿ ಮುಂದೆ ಉಗ್ರ ಹೋರಾಟ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ದ.ಸಂ.ಸ  ತಾ. ಅಧ್ಶಕ್ಷ ನಾಗತೀಹಳ್ಳಿ ಕೃಷ್ಣಮೂರ್ತಿ, ತಾ. ಸಂಘಟನಾ ಸಂಚಾಲಕ ಬಸವರಾಜು, ಮಾಜಿ .ಜಿ.ಪಂ. ಸದಸ್ಯ ಕೆ.ಎಂ. ಶಾಂತಪ್ಪ, ಮಾದಿಗ ದಂಡೋರ ಅಧ್ಯಕ್ಷ ಈಚನೂರು ಮಹದೇವ ಎಚ್ಚರಿಕೆ ನೀಡಿದ್ದಾರೆ.

'ಸೀಮೆಎಣ್ಣೆ ವಿತರಣೆಯಲ್ಲಿ ಲೋಪವಿಲ್ಲ'
ತುರುವೇಕೆರೆ: ಮಲ್ಲಾಘಟ್ಟದ ಸಹಕಾರಿ ಸಂಘದ ಮೂಲಕ ಪಡಿತರ ವಸ್ತುಗಳ ವಿತರಣೆಯಲ್ಲಿ ಲೋಪವಾಗಿದೆ ಎಂದು ಕೆಲವರು ದೂರಿರುವುದು ಸತ್ಯಕ್ಕೆ ದೂರವಾದ ಸಂಗತಿ. ಈಗಿನ್ನೂ ಪ್ರತಿ ರು.ಗೆ ಒಂದು ಕೆಜಿ ಎಂದು ಹೇಳಿ ನೀಡಿಕೆ ಪ್ರಾರಂಭವಾಗಿದೆ. ಈ ಮಧ್ಯೆ ಕೆಲ ಗೊಂದಲಗಳಿಂದ ಹಾಗೂ ಚೀಲಗಳ ತೂಕದಲ್ಲಿ ಕೆಲ ಗ್ರಾಂಗಳು ವ್ಯತ್ಯಾಸವಾಗಿರಬಹುದು. ಅದನ್ನೇ ಕೆಲವರು ದುರುದ್ದೇಶದಿಂದ ತಮ್ಮ ಸಂಘದ ಮೇಲೆ ಕೆಟ್ಟ ಹೆಸರು ಬರಲು ಪ್ರಯತ್ನಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಜೆ. ಗೋವಿಂದಯ್ಯ ಹಾಗೂ ಉಪಾಧ್ಯಕ್ಷ ಶೇಷೇಗೌಡ ಸ್ಪಷ್ಟಪಡಿಸಿದ್ದಾರೆ. ಯೋಜನೆಯನ್ನು ಈಗಷ್ಟೇ ಪ್ರಾರಂಭಿಸಲಾಗಿತ್ತು. ದುರುದ್ದೇಶಪೂರ್ವಕವಾಗಿ ಅಕ್ಕಿಯನ್ನು ಕಡಿಮೆ ನೀಡಿರಲಿಲ್ಲ. ಕಣ್ತಪ್ಪಿನಿಂದ ಕೆಲ ಗ್ರಾಂ ಕಡಿಮೆಯಾಗಿರಬಹುದು ಎಂದು ಹೇಳಿದ್ದಾರೆ.  ಸೀಮೆಎಣ್ಣೆ ವಿತರಣೆಯಲ್ಲಿ ಯಾವತ್ತೂ ಲೋಪವಾಗಿಲ್ಲ. 5 ಲೀಟರ್ ಸೀಮೆ ಎಣ್ಣೆ ವಿತರಣೆ ಮಾಡಲು ಕಳೆದ ಎರಡು ದಿನಗಳ ಹಿಂದೆಯಷ್ಟೇ ಗೋಡೌನಿನಿಂದ ತರಿಸಿಕೊಳ್ಳಲಾಗಿದೆ. ಆದ್ದರಿಂದ 5 ಲೀಟರ್ ಬದಲು 3 ಲೀಟರ್ ಕೊಡಲಾಗುತ್ತಿದೆ ಎಂದು ದೂರಿರುವುದು ಸರಿಯಲ್ಲ ಎಂದಿದ್ದಾರೆ.

ಸಾಂಪ್ರದಾಯಿಕ ಜ್ಞಾನ ಪುನಾರಚನೆ ಅಗತ್ಯ: ಪ್ರೊ. ಜಾವರೆ
ತುಮಕೂರು: ಸಾಂಪ್ರದಾಯಿಕ ಜ್ಞಾನ ಹೊಸ ಜ್ಞಾನವಾಗಿ ಪುನಾರಚನೆಗೊಳ್ಳಬೇಕಾದುದು ಇಂದಿನ ಅಗತ್ಯ ಎಂದು ಪೂನಾ ವಿವಿ ಪ್ರಾಧ್ಯಾಪಕ ಪ್ರೊ. ಅನಿಕೇತ್ ಜಾವರೆ ಅಭಿಪ್ರಾಯಪಟ್ಟರು. ಅವರು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಇಂಗ್ಲಿಷ್ ವಿಬಾಗವು ಆಯೋಜಿಸಿದ್ದ ಎರಡು ದಿನಗಳ ರಿಸರ್ಚ್ ಟ್ರೆಂಡ್ಸ್ ಇನ್ ಇಂಗ್ಲಿಷ್ ಸ್ಟಡೀಸ್ ಎಂಬ ವಿಷಯದ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ನೀಡುತ್ತಿದ್ದರು. ಇಂಗ್ಲಿಷ್ ಭಾಷಾ ಬೋಧನೆಯ ವಿಭಿನ್ನ ತೊಡಕುಗಳನ್ನು ಪ್ರಸ್ತಾಪಿಸಿದ ಅವರು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿರುವ ಶಿಕ್ಷಕರು ಇಂಗ್ಲಿಷ್ ಭಾಷೆಯನ್ನು ಕಲಿಸುವಂತಾಗಿರುವುದು ಒಂದು ದೊಡ್ಡ ಸವಾಲೇ ಸರಿ. ಇದಲ್ಲದೆ ನಮ್ಮದಲ್ಲದ ಇಂಗ್ಲಿಷ್ ಸಂಸ್ಕೃತಿಯ ಸಾಹಿತ್ಯವನ್ನು ಭಾರತೀಯ ವಾತಾವರಣಕ್ಕೆ ಹೊಂದಿಸುವುದು, ಶಿಕ್ಷಕರ ಮುಂದಿರುವ ಇನ್ನೊಂದು ತೊಡಕು ಎಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲ ಟಿ.ಎನ್. ಹರಿಪ್ರಸಾದ್ ಅವರು ಭಾಷೆಯ ಮೇಲೆ ಪ್ರಭುತ್ವ, ಸೂಕ್ಷ್ಮ ಸಂವೇದನೆ ಹಾಗೂ ಸ್ವಂತಿಕೆಯ ತುಡಿತ ಸಂಶೋಧಕರಲ್ಲಿರಬೇಕು. ಜಾಗತಿಕ ಭಾಷೆಯಾದ ಇಂಗ್ಲಿಷ್ ಕೂಡ ಇದಕ್ಕೆ ಹೊರತಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement