ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೆಣ್ಣು ಎಂದೂ ಕೆಡುಕು ಬಯಸಬಾರದು

Srinivasa Murthy VN
Updated On : 29 Jul 2013, 12:19 pm

ಕ.ಪ್ರ.ವಾರ್ತೆ ಶಿರಾ ಜು.28
ಸಮಾಜಕ್ಕೆ ಬುದ್ಧಿ ಹೇಳಬೇಕಾದ ಹೆಣ್ಣು ಎಂದೂ ಕೆಡುಕನ್ನು ಬಯಸಬಾರದು. ಹೆಣ್ಣೊಬ್ಬಳು ಸರಿಯಿದ್ದರೆ ಇಡೀ ಸಮಾಜವನ್ನು ಬದಲಾಯಿಸಬಹುದು. ಅಂತಹ ಪ್ರಬಲವಾದ ಶಕ್ತಿ ಸ್ತ್ರೀ ಕುಲದಲ್ಲಿದೆ ಎಂದು ಸಾಹಿತಿ  ಡಾ.ದೊಡ್ಡರಂಗೇಗೌಡ ತಿಳಿಸಿದರು.
ಅವರು ಪಟ್ಟಣದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಸಣ್ಣದಾದ ರೇಷ್ಮೆ ಹುಳುವೊಂದು ಹೊಟ್ಟೆಯ ಹಸಿವಿನಿಂದ ಎಲೆಯನ್ನು ಅಗಿದು ತಿಂದು ಅರಳಿ ಸುಂದರವಾದ ಪತಂಗವಾಗುತ್ತದೆ. ಮಕ್ಕಳ ಮನಸ್ಸು ಕೂಡ ಹಾಗೆಯೇ ಅದು ಸುಂದರವಾದ ಪತಂಗವಿದ್ದಂತೆ. ಈ ನಿಟ್ಟಿನಲ್ಲಿ ಮಕ್ಕಳು ತಮ್ಮ ಮನಸ್ಸನ್ನು ಅರಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.  ನಮ್ಮ ಮನೆಯ ಅಂಗಳ ಮೊದಲು ಸರಿಯಿರಬೇಕು. ಅನಂತರ ಇಡೀ ಸಮಾಜ ಹಾಗೂ ದೇಶದ ಅಂಗಳವನ್ನು ಸರಿಪಡಿಸಬೇಕು. ಆಗ ಸಮಾಜ ದೇಶ ಎಲ್ಲವೂ ತನ್ನಷ್ಟಕ್ಕೆ ತಾನೇ ಸರಿಯಾಗುತ್ತದೆ. ಶಿಕ್ಷಣದಲ್ಲಿ ಪದವಿ ಹೊಂದಿರುವ ಪ್ರತಿ ವಿದ್ಯಾರ್ಥಿಯೂ ಮಣ್ಣಿನ ಸಂಸರ್ಗದಲ್ಲಿ ಹೊಂದಿಕೊಂಡು ಬೆಳೆಯಬೇಕು. ಮಣ್ಣನ್ನು ಮರೆತವರಿಗೆ ಎಂದಿಗೂ ಉಳಿಗಾಲವಿಲ್ಲ ಎಂದರು.
ಬದಲಾಗುತ್ತಿದೆ: ದೇಶದ ಚಿತ್ರಣವೇ ಇದೀಗ ಬದಲಾಗುತ್ತಿದೆ. ಓದಿದವರು, ಕಲಿತವರಿಂದಲೇ ದೇಶಕ್ಕೆ  ಅಪಾಯ ಹೆಚ್ಚಾಗುವ ಸಾಧ್ಯತೆಗಳಿವೆ. ವಿದ್ಯಾವಂತರೆ ಸರ್ಕಾರಕ್ಕೆ ತೆರಿಗೆ ಕಟ್ಟಲು ವಂಚನೆ ಮಾಡುತ್ತಾರೆ. ಜಾತಿ ಆದಾಯ ಪತ್ರವನ್ನು ನಕಲೀಕರಿಸುತ್ತಾರೆ. ಇದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ವಿಷಾದಿಸಿದರು. ಸಮಾರಂಭದಲ್ಲಿ ಶ್ರೀ ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ಪ್ರೊ.ಕೆ.ಹನುಮಂತರಾಯಪ್ಪ ಪ್ರಾಚಾರ್ಯ ಪಿ.ಎಚ್.ಮಹೇಂದ್ರಪ್ಪ, ಪ್ರೆಸಿಡೆನ್ಸಿ ಶಾಲೆ ಸಂಸ್ಥಾಪಕ ಎಂ.ಚಿದಾನಂದ ಗೌಡ, ನಗರಸಭಾ ಸದಸ್ಯ ರಾಜಣ್ಣ, ಮಾಜಿ ಸದಸ್ಯೆ ಪಾರ್ವತಮ್ಮ, ಡಾ.ಶಂಕರ್, ಬಿ.ಪಿ.ಪಾಂಡುರಂಗಪ್ಪ, ಶೋಭಾನಾಗರಾಜ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement