ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆರ್ಥಿಕ ಸಂಪತ್ತು ನಶ್ವರ, ಕಲೆಯೊಂದೇ ಅಮರ

Srinivasa Murthy VN
Updated On : 30 Jul 2013, 12:26 pm

ಕನ್ನಡಪ್ರಭ ವಾರ್ತೆ ತುಮಕೂರು ಜು.29
ಆರ್ಥಿಕ ಸಂಪತ್ತು ನಶ್ವರ, ಕಲೆಯೊಂದೇ ಅಮರ ಎಂದು ಖ್ಯಾತ ನಾಟಕಕಾರ ಬೇಲೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕ್ಯಾತ್ಸಂದ್ರದಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಜರುಗಿದ ನಟ ನಿರ್ದೇಶಕ ಚನ್ನಬಸಯ್ಯ ಗುಬ್ಬಿ ಅವರ ಬಾಲ್ಯ, ಬದುಕು ಸಾಧನೆ ಕುರಿತ ವಿಚಾರ ಸಂಕಿರಣದಲ್ಲಿ ಕಲಾಯೋಗಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕನ್ನಡ ನಾಡಿನ ನಾಟಕ ಕಲೆ ಭರತ ಖಂಡದಲ್ಲೇ ವೈಶಿಷ್ಟ್ಯಪೂರ್ಣವಾದುದು. ಅದು ವೃತ್ತಿ ರಂಗಭೂಮಿ ಕಾಣ್ಕೆಯಂತೂ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದು. ನಾಡಿನ ನಾಟಕಗಳು ವೈವಿಧ್ಯಮ. ಹಾಗೆಯೇ ರಂಗನಟರ ಕಾಣ್ಕೆ ಅಭಿನಂದನೀಯ. ಗುಬ್ಬಿ ವೀರಣ್ಣ, ಕೆ. ಹಿರಣ್ಣಯ್ಯ ನಂತರ ಇಂದಿಗೂ ಆ ಕಲಾ ಪರಂಪರೆ ಉಳಿಸಿ ಬೆಳೆಸಿದ ಕೀರ್ತಿ ಚನ್ನಬಸಯ್ಯ ಗುಬ್ಬಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ಅಪೂರ್ವ, ಅಮೂಲ್ಯ: ವಿಚಾರ ಸಂಕಿರಣದಲ್ಲಿ ಮಾತನಾಡಿದ ಖ್ಯಾತ ಕವಿ ವಿಮರ್ಶಕ ಹೊರೆಯಾಲ ದೊರೆಸ್ವಾಮಿ ಕಲಾದೇವಿ ಸೇವೆಯಲ್ಲಿ 91 ವರ್ಷಗಳ ಬದುಕನ್ನು ಸವೆಸಿದ ಶ್ರೀಯುತರ ಸಾಧನೆ ಅಪೂರ್ವ ಹಾಗೂ ಅಮೂಲ್ಯವಾದುದು ಎಂದರು. ಲೇಖಕಿ ಡಾ. ಲೀಲಾ ಲೇಪಾಕ್ಷ ಮಾತನಾಡಿ ಇವರು ಬಹುಮುಖ ಪ್ರತಿಭಾಶ್ರೀಗಳು. ನೇತಾಜಿಯವರ ಬಗ್ಗೆ ನಾಟಕ ಬರೆದು ನಾಡಿನಲ್ಲೆಲ್ಲಾ ಅಭಿನಯಿಸಿದ ಮಹಾನ್ ದೇಶ ಪ್ರೇಮಿ ಎಂದರು. ಮತ್ತೊರ್ವ ಕಲೋಪಾಸಕ ರಂಗತಜ್ಞ ಆಂಜನೇಯ ಮಾತನಾಡಿ ಇವರ ಬದುಕೇ ಒಂದು ಸುಂದರ ನಾಟಕ. ಅಲ್ಲಿ ಶೃಂಗಾರಕ್ಕಿಂತ ರೌದ್ರ ಭೀಭತ್ಸವೇ ಅಧಿಕ ಎಂದು ನುಡಿದರು. ಅಮರೇಶ್ವರ ಕಂಪನಿ ಒಡನಾಟ ಕುರಿತು ಬಿ.ಎ. ಶಾಂತಲಾದೇವಿ ಎಳೆಎಳೆಯಾಗಿ ಬಿಡಿಸಿ ಈ ವಯೋವೃದ್ಧರ ಕಲಾ ಬದುಕು ಪರಿಪಕ್ವವಾದ ಹಣ್ಣು ಎಂದರು. ಮಗಳು ರತ್ನ ಶಿವರಾಜು ಮಾತನಾಡಿ ಮನೆ ಮರೆತ ಅಪ್ಪ ಕಲಾ ಲೋಕದ ಭೂಪ ಎಂದರು.
ಡಾ.ರಾಜ್ ಉದಾಹರಣೆ: ಅಧ್ಯಕ್ಷತೆ ವಹಿಸಿದ್ದ ನಾಟಕಕಾರ ವಿದ್ಯಾವಾಚಸ್ಪತಿ ಕವಿತಾಕೃಷ್ಣ ರಾಜಕಾರಣಿ ಸತ್ತರೆ ಅಂತಹ ಹತ್ತು ಮಂದಿ ರಾಜಕಾರಣಿಗಳು ಹುಟ್ಟಬಹುದು. ಕವಿ, ಕಲಾವಿದ ಸತ್ತರೆ ಅಂತಹ ವ್ಯಕ್ತಿ ಮತ್ತೆ ಹುಟ್ಟಲಾರರು. ಡಾ. ರಾಜ್‌ಕುಮಾರ್ ಈ ಮಾತಿಗೆ ಉದಾಹರಣೆ ಎಂದರು. ಈ ಪರಂಪರೆಗೆ ಸೇರುವ ಚನ್ನಬಸಯ್ಯ ಅವರು ಊರು, ಮನೆ ಮರೆತ ವಿಶ್ವ ಸಂಸಾರಿಯಾಗಿದ್ದಾರೆ. ಇಂತಹವರನ್ನು ಗೌರವಿಸಿ ಸಾಹಿತ್ಯ ಮಂದಿರ ಸಾರ್ಥಕ ಕಾರ್ಯ ಮಾಡಿದೆ ಎಂದರು. ಕಮಲಾ ಬಡ್ಡಿಹಳ್ಳಿ ಅಭಿನಂದನಾ ನುಡಿಗಳನ್ನಾಡಿದರು. ರೋ. ಅಧ್ಯಕ್ಷ ಟಿ.ಆರ್. ಹೆಚ್. ಪ್ರಕಾಶ್, ವಿದ್ಯಾವಾಹಿನಿ ಕೆ.ಬಿ. ಜಯಣ್ಣ, ಸೀಗೆಹಳ್ಳಿ ನಾರಾಯಣ ಮಾತನಾಡಿದರು. ನಾಟಕ ಮಹಾಲಿಂಗು, ದೇವರಾಜು, ಹೆಬ್ಬಾಕ ಸಿದ್ಧಲಿಂಗಪ್ಪ, ಪುಟ್ಟಕಾಮಣ್ಣ, ರಂಗ ನಟಿ ಹೇಮ, ಭಾರತೀಪುರ ಕೆಂಪಣ್ಣ, ಬ್ಯಾ. ನಾಗಭೂಷಣ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಚೈತ್ರ ಪ್ರಾರ್ಥಿಸಿದರು. ಉಮಾಶರ್ಮ ಸ್ವಾಗತಿಸಿದರು. ಎಂ.ಪಿ. ಉಷಾ ವಂದಿಸಿದರು. ಖ್ಯಾತ ಲೇಖಕಿ ಪದ್ಮಾಕೃಷ್ಣಮೂರ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement