ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಎಲ್ಲ ಸರ್ಕಾರಿ ಕಚೇರಿ, ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯ'

Srinivasa Murthy VN
Updated On : 30 Jul 2013, 12:31 pm

ಕೊರಟಗೆರೆ: 66 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಇಲಾಖಾ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ರಾಮಚಂದ್ರಪ್ಪ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು ಹಾಗೂ 15 ರಂದು ಬೆಳಗ್ಗೆ 9 ಗಂಟೆಗೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳೂ ಪಾಲ್ಗೊಳ್ಳಬೇಕು. ಯಾರು ಭಾಗವಹಿಸುವುದಿಲ್ಲವೋ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಿನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ಮಾಜಿ ಸೈನಿಕರನ್ನು ಸನ್ಮಾನಿಸಲಾಗುವುದು ಎಂದರು. ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾಗೂ ಈ ಪೂರ್ವಭಾವಿ ಸಭೆಗೆ ಭಾಗವಹಿಸದ ಇಲಾಖಾ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ತಾಲೂಕು ವೈದ್ಯಾಧಿಕಾರಿ ಡಾ. ಮೋಹನ್‌ದಾಸ್ ಇನ್ನಿತರರು ಭಾಗವಹಿಸಿದ್ದರು.

'ಹಿಂದಿಭಾಷಾ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಿ'
ಕುಣಿಗಲ್:
ಮಾತೃಭಾಷೆಯ ಕಲಿಕೆಯ ಜೊತೆಯಲ್ಲಿ ರಾಷ್ಟ್ರಭಾಷೆಯಾದ ಹಿಂದಿ ಕಲಿಕೆಗೂ ವಿದ್ಯಾರ್ಥಿಗಳು ಆಕರ್ಷಿತರಾಗುವ ನಿಟ್ಟಿನಲ್ಲಿ ಹಿಂದಿಭಾಷಾ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಜಿ.ಲೋಕೇಶ್ ತಿಳಿಸಿದರು. ಪಟ್ಟಣದ ಬಾಲಕಿಯರ ಪ.ಪೂ.ಕಾಲೇಜಿನಲ್ಲಿ ತಾಲೂಕಿನ ಹಿಂದಿಭಾಷಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಹಿಂದಿ ಭಾಷೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಭಾಷೆಯಾಗಿದ್ದು, ಮಾತೃಭಾಷೆಯ ಕಲಿಕೆ ಜೊತೆಯಲ್ಲಿ ಮಕ್ಕಳಲ್ಲಿ ರಾಷ್ಟ್ರಭಾಷೆಯ ಕಲಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಹಿಂದಿಭಾಷೆಯ ಕಲಿಕೆ ಬಗ್ಗೆ ಆಕರ್ಷಿತರಾಗುವ ವಾತಾವರಣ ನಿರ್ಮಾಣ ಮಾಡಿ, ಮಕ್ಕಳಿಗೆ ಹಿಂದಿಭಾಷೆ ಸುಲಭವಾಗಿ  ಅರ್ಥವಾಗುವ ನಿಟ್ಟಿನಲ್ಲಿ ಬೋಧನಾ ಕೌಶಲ್ಯ ಪ್ರದರ್ಶಿಸಬೇಕಿದೆ ಎಂದರು. ಅಕ್ಷರದಾಸೋಹ ಯೋಜನಾಧಿಕಾರಿ ಡಿ.ಕೃಷ್ಣ, ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್, ಧನಂಜಯ, ಜ್ವಾಲೇಂದ್ರಕುಮಾರ್, ಮಹಾದೇವಯ್ಯ, ಜೀವೇಂದ್ರಕುಮಾರ್ ಇತರರು ಇದ್ದರು.

'ಸ್ವಾಭಿಮಾನಿಯಾಗಿ ಬದುಕನ್ನು ಸಾರ್ಥಕಪಡಿಸಿಕೊಳ್ಳಿ'
ತಿಪಟೂರು:
ಪ್ರತಿಯೊಬ್ಬ ವ್ಯಕ್ತಿಯು ಸ್ವಾಭಿಮಾನಿಯಾದಾಗ ಮಾತ್ರ ಬದುಕನ್ನು ಸಾರ್ಥಕಪಡಿಸಿಕೊಳ್ಳಬಹುದೆಂದು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.  ನಗರದ ಗುರುಕುಲಾನಂದಾಶ್ರಮದಲ್ಲಿ ನಡೆದ 201ನೇ ಬೆಳದಿಂಗಳ ಶರಣಧರ್ಮ ಚಿಂತನಾ ಗೋಷ್ಠಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಶಿವಯೋಗದ ಸಾಧನೆಯಿಂದ ಮಾತ್ರ ಮಾನವ ತನ್ನ ಬದುಕಿನಲ್ಲಿ ಶಾಶ್ವತವಾದ ಸುಖ, ನೆಮ್ಮದಿ, ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.  ಕಡೂರಿನ ಕೃಷಿಕ ಸಮಾಜದ ಬಿ.ಟಿ.ದೇವರಾಜು ಮಾತನಾಡಿದರು.

ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ
ಕೊರಟಗೆರೆ:
ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಆ.1 ರಂದು ಕೋಟೆ ಮಾರಮ್ಮನ ಜಾತ್ರೆ ಪ್ರಯುಕ್ತ 5 ನೇ ವರ್ಷದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ. ಕೊರಟಗೆರೆ ಪ್ರೆಸ್ ಕ್ಲಬ್, ಡಾ.ರಾಜ್ ಕರ್ನಾಟಕ ರಕ್ಷಣಾ ಸೇನೆ, ವಿಷ್ಣು ಸೇನಾ ಸಮಿತಿ, ಚಾಣುಕ್ಯ ಪಬ್ಲಿಕ್ ಸ್ಕೂಲ್, ಮಾರುತಿ ಮೋಟಾರ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಇವರ ಸಂಯುಕ್ತಾಶ್ರದಲ್ಲಿ ಜು.30 ರಿಂದ ಆ.1 ವರೆಗೆ ಮೂರು ದಿನಗಳಕಾಲ ನಡೆಯುವ ಕೋಟೆ ಮಾರಮ್ಮ ಜಾತ್ರೆ ಅಂಗವಾಗಿ ಆ.1 ಗುರುವಾರ ಮಧ್ಯಾಹ್ನ 1 ಕ್ಕೆ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು ಆಸಕ್ತಿ ಉಳ್ಳ ಕುಸ್ತಿ ಪಟುಗಳು ಭಾಗವಹಿಸುವಂತೆ ವ್ಯವಸ್ಥಾಪಕ ಕೆ.ಆರ್. ಓಬಳರಾಜು ತಿಳಿಸಿದ್ದಾರೆ.

ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ
ಮಧುಗಿರಿ:
ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಉಪನ್ಯಾಸಕ ಎನ್.ಮಹಾಲಿಂಗೇಶ್ ಅವಿರೋಧವಾಗಿ ಆಯ್ಕೆಯಾದರು. ರಾಜ್ಯ ಪರಿಷತ್ ಸದಸ್ಯರಾಗಿ ಪ್ರಭಾಕರರೆಡ್ಡಿ, ಖಜಾಂಚಿಯಾಗಿ ಎಸ್.ಎನ್.ಹನುಮಂತರಾಯಪ್ಪ ಆಯ್ಕೆಯಾದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement