ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ತಮ್ಮಣ್ಣಗೌಡ ಅವಿರೋಧ ಆಯ್ಕೆ
ಕ.ಪ್ರ ವಾರ್ತೆ ತುರುವೇಕೆರೆ ಜು. 29
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅರಮಲ್ಲೇನಹಳ್ಳಿಯ ತಮ್ಮಣ್ಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಹೊನ್ನೇಗೌಡರು ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಹುದ್ದೆ ಖಾಲಿಯಾಗಿತ್ತು. ತುರುವೇಕೆರೆಯ ಸಹಕಾರ ಸಂಘಗಳ ನಿರೀಕ್ಷಕರಾದ ಶಿವಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸಂಘದ ಸದಸ್ಯರಾದ ಮಂಜುನಾಥ್, ಡಿ.ಪಿ.ರಾಜು, ಬಿ.ಎಸ್. ದೇವರಾಜು, ಶಿವಾನಂದ್, ಜಿ.ಎಂ. ಲಕ್ಷ್ಮೀಕಾಂತ್, ಮಲ್ಲೇಶಣ್ಣ, ಕೆಂಚಯ್ಯ ಚುನಾವಣಾ ವೇಳೆ ಉಪಸ್ಥಿತರಿದ್ದರು. ಕಳೆದ ಸಾಲಿನಲ್ಲಿ ಸಂಘವು ಸುಮಾರು 10 ಲಕ್ಷಕ್ಕೂ ಹೆಚ್ಚು ಲಾಭಗಳಿಸಿದೆ ಎಂದು ನೂತನ ಅಧ್ಯಕ್ಷ ತಮ್ಮಣ್ಣಗೌಡ ಹೇಳಿದರು. ಶಾಲಾ ಮಕ್ಕಳಿಗಾಗಿ ಮಾರಾಟ ಮಾಡಲಾಗುತ್ತಿರುವ ನೋಟ್ ಪುಸ್ತಕಗಳ ಮಾರಾಟವೊಂದರಲ್ಲೇ 2.11 ಲಕ್ಷ ರು. ಲಾಭ ಬಂದಿದೆ. ಈಗಾಗಲೇ ತಮ್ಮ ಸಂಘದ ವತಿಯಿಂದ ದಿನಸಿ ಧಾನ್ಯಗಳನ್ನೂ ಸಹ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಧವಸ ಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿರುವುದರಿಂದ ಉತ್ತಮವಾದ ವ್ಯಾಪಾರ ವಹಿವಾಟು ತಮ್ಮ ಸಂಘದಲ್ಲಿ ನಡೆಯುತ್ತಿದೆ ಎಂದು ಸದಸ್ಯರು ಹೇಳಿದರು.
ಸಾಲ ಸೌಲಭ್ಯ: ತಾಲೂಕಿನ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೇಂದ್ರ ಬ್ಯಾಂಕ್ (ಡಿಸಿಸಿ ) ವತಿಯಿಂದ ಸುಮಾರು 1.25 ಕೋಟಿ ಸಾಲ ಸೌಲಭ್ಯ ನೀಡಲು ಸಿದ್ಧತೆ ನಡೆದಿದೆ ಎಂದು ಕೇಂದ್ರ ಬ್ಯಾಂಕ್ನ ನಿರ್ದೇಶಕ ಬಿ.ಎಸ್.ದೇವರಾಜು ತಿಳಿಸಿದ್ದಾರೆ. ಜಿಲ್ಲಾ ಅಧ್ಯಕ್ಷ ಎನ್.ಆರ್.ರಾಜಣ್ಣ ಅವರ ಸೂಚನೆ ಮೇರೆಗೆ ತಾಲೂಕಿನಲ್ಲಿರುವ 24 ಸಹಕಾರಿ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡಲಾಗುವುದು. ಪ್ರತಿ ರೈತನಿಗೆ ಕನಿಷ್ಠ 25 ಸಾವಿರ ರು.ಗಳನ್ನಾದರೂ ಸಾಲ ಸೌಲಭ್ಯ ನೀಡಬೇಕು ಎಂಬುದು ಬ್ಯಾಂಕ್ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಬಾರಿ ತಾಲೂಕಿನ ರೈತಾಪಿಗಳಿಗೆ 19 ಕೋಟಿ ರು.ಗಳ ಸಾಲ ಸೌಲಭ್ಯ ನೀಡಲಾಗಿತ್ತು. ಇದರಲ್ಲಿ ರಾಜ್ಯ ಸರ್ಕಾರ ಬಡ್ಡಿ ಹಾಗೂ ಸಾಲ ಮನ್ನಾ ಘೋಷಣೆ ಮಾಡಿದ ಫಲವಾಗಿ ಸುಮಾರು 13.47 ಕೋಟಿ ಮನ್ನಾ ಆಗಿದೆ ಎಂದು ದೇವರಾಜು ತಿಳಿಸಿದರು.