ತುರುವೇಕೆರೆ ಲಯನ್ಸ್ ಕ್ಲಬ್ಗೆ 12 ಪ್ರಶಸ್ತಿ
ತುರುವೇಕೆರೆ: ತಾಲೂಕಿನಲ್ಲಿ ಕಳೆದ 24 ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿರುವ ಲಯನ್ಸ್ ಕ್ಲಬ್ ಕಳೆದ ಸಾಲಿನ ಸೇವಾ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿರುವ ಲಯನ್ಸ್ನ ಕೇಂದ್ರ ಸಮಿತಿ 12 ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅತ್ಯುತ್ತಮ ಕಾರ್ಯಕ್ರಮಗಳು, ಮಾನಸಿಕ ಅಸ್ವಸ್ಥರಿಗಾಗಿ ಕಾರ್ಯಕ್ರಮ, ಉತ್ತಮ ಕ್ರೀಡಾ ಚಟುವಟಿಕೆ, ಉತ್ತಮ ಸೇವೆ, ಶೈಕ್ಷಣಿಕ ಸೇವೆ, ವಯೋವೃದ್ಧರಿಗಾಗಿ ಕಾರ್ಯಕ್ರಮ, ಕಣ್ಣಿನ ಆರೋಗ್ಯ ತಪಾಸಣಾ ಕಾರ್ಯಕ್ರಮ, ಉತ್ತಮ ಅಧ್ಯಕ್ಷ, ಕಾರ್ಯದರ್ಶಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ್ದರಿಂದ ಸ್ಥಳೀಯ ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು 12 ಪ್ರಶಸ್ತಿಗಳನ್ನು ಗಳಿಸಿರುವುದು ಸಾರ್ಥಕ ಸಾಧನೆಯಾಗಿದೆ ಎಂದು 317 ಎ ವಿಭಾಗದ ಲಯನ್ಸ್ ಕ್ಲಬ್ನ ಎರಡನೇ ಉಪರಾಜ್ಯಪಾಲ ವಸಂತಕುಮಾರ್ ಅವರು ಹೇಳಿದರು.
ಪಟ್ಟಣದಲ್ಲಿ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಬೋಧನೆ ಮಾಡಿದ ಅವರು ಗ್ರಾಮಾಂತರ ಪ್ರದೇಶದಲ್ಲಿ ಕಳೆದ 24 ವರ್ಷಗಳಿಂದಲೂ ಅತ್ಯುತ್ತಮವಾಗಿ ಸಾರ್ವಜನಿಕರ ಸೇವೆ ಮಾಡುತ್ತಿರುವುದರಲ್ಲಿ ಮಂಚೂಣಿಯಲ್ಲಿದೆ ಎಂದು ಅವರು ಹೇಳಿದರು. ಮುಂದಿನ ಎರಡು ವರ್ಷಗಳಲ್ಲಿ ಲಯನ್ಸ್ ಕ್ಲಬ್ 100 ನೇ ವರ್ಷದ ಐತಿಹಾಸಿಕ ಕ್ಷಣಗಳನ್ನು ಕಾಣಲಿದೆ. ಆದ್ದರಿಂದ ಸಾರ್ವಜನಿಕರಿಗೆ ಹಾಗೂ ಗ್ರಾಮಾಂತರ ಪ್ರದೇಶದ ಜನರಿಗಾಗೇ ಹಲವಾರು ವಿನೂತನ ಕಾರ್ಯಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ ಎಂದರು. ಲಯನ್ಸ್ ಕ್ಲಬ್ ಅಂಧತ್ವವನ್ನು ನಿವಾರಣೆ ಮಾಡುವ ಗುರಿ ಹೊಂದಿದೆ. ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದು ಕೆಲ ವರ್ಷಗಳಲ್ಲಿ ಅಂಧತ್ವವನ್ನು ತೊಡೆದು ಹಾಕುವ ಸಂಕಲ್ಪ ಮಾಡಲಿದೆ ಎಂದು ಹೇಮಂತ್ ಕುಮಾರ್ ಹೇಳಿದರು.
ನೂತನ ಅಧ್ಯಕ್ಷರಾಗಿ ಜಗರಾಮ್ ಪಟೇಲ್, ನಿಕಟ ಪೂರ್ವ ಅಧ್ಯಕ್ಷರಾಗಿ ಡಿ.ಟಿ.ಜಗದೀಶ್, ಕಾರ್ಯದರ್ಶಿಯಾಗಿ ಆರ್.ಸತ್ಯನಾರಾಯಣ್, ಖಜಾಂಚಿಯಾಗಿ ಎಂ.ಎಸ್.ಭಾಸ್ಕರ್, ಮೊದಲನೇ ಉಪಾಧ್ಯಕ್ಷರಾಗಿ ಗಂಗಾಧರ್ ದೇವರ ಮನೆ, ಎರಡನೇ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ದುಂಡ, ಮೂರನೇ ಉಪಾಧ್ಯಕ್ಷರಾಗಿ ಎಚ್.ಜೆ.ನಾರಾಯಣ್, ಟೇಮರ್ ಆಗಿ ಡಾ.ಎ.ನಾಗರಾಜು, ಟ್ವಿಸ್ಟರ್ ಆಗಿ ಮಂಜೇಶ್ ಗುಪ್ತ, ನಿರ್ದೇಶಕರಾಗಿ ಎಸ್.ದೇವರಾಜು, ಕೈಲಾಸ್, ಎಂ.ಎನ್.ಚಂದ್ರೇಗೌಡ, ಡಿ.ಜೆ.ರಂಗಸ್ವಾಮಿ, ಮಹೇಶ್, ರಂಗನಾಥ್ ಆಯ್ಕೆಯಯಾಗಿದ್ದಾರೆ. ದೃಷ್ಟಿ ನಿವಾರಣಾ ಸಮಿತಿಯ ಅಧ್ಯಕ್ಷರಾಗಿ ವಕೀಲ ಪಿ.ಎಚ್.ಧನಪಾಲ್ ನೇಮಕವಾಗಿದ್ದಾರೆ. ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ 317ಎ ನ ಘಟಕಾಧ್ಯಕ್ಷ ಧನಂಜಯ್ ರಾವ್, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಸ್ವಾಗತ ಸಮತಿಯ ಅಧ್ಯಕ್ಷ ಟಿ.ಎ.ವಿ.ಗುಪ್ತ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಜಗದೀಶ್ ಸ್ವಾಗತಿಸಿದರು. ಎಸ್.ಎಂ.ಕುಮಾರಸ್ವಾಮಿ ನಿರೂಪಿಸಿದರು. ಆರ್.ಸತ್ಯನಾರಾಯಣ್ ವಂದಿಸಿದರು.