ಪಾರಿವಾಳ ಸ್ಪರ್ಧೆ ರಾಷ್ಟ್ರೀಯ ಕೀಡೆಯಾಗಿ ಪರಿಗಣಿಸಿ: ವರ್ತೂರು
ಕನ್ನಡಪ್ರಭವಾರ್ತೆ,ಕೋಲಾರ,ಜು.29
ಪಾರಿವಾಳ ಓಟದ ಸ್ಪರ್ಧೆಯನ್ನು ಜೂಜು ಎಂದು ನಿರ್ಬಂಧಿಸದೆ ರಾಷ್ಟ್ರೀಯ ಕ್ರೀಡೆಯಾಗಿ ಪರಿಗಣಿಸಬೇಕೆಂದು ಶಾಸಕ ಆರ್.ವರ್ತೂರು ಪ್ರಕಾಶ್ ಒತ್ತಾಯಿಸಿದರು.
ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಕೋಲಾರ ಪಾರಿವಾಳ ಓಟದ ಸ್ಪರ್ಧೆ ಕ್ಲಬ್ ಆಯೋಜಿಸಿದ್ದ ಸಮಾರಂಭದಲ್ಲಿ ವಿಜೇತ ಪಾರಿವಾಳ ಮಾಲೀಕರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಪಾರಿವಾಳವನ್ನು ಸಂದೇಶ ರವಾನೆಗಾಗಿ ಹಾರಿ ಬಿಡುತ್ತಿದ್ದುದ್ದಕ್ಕೆ ಭಾರತದಲ್ಲಿ ಶತಮಾನಗಳ ಇತಿಹಾಸವಿದೆ. ಆಧುನಿಕ ಯುಗದಲ್ಲಿಯೂ ಅಂಚೆ ಪತ್ರಗಳನ್ನು ಪಾರಿವಾಳದ ನೆರವಿನಿಂದಲೇ ಕಳುಹಿಸಲಾಗುತ್ತಿತ್ತು ಎಂದರು.
ಆದರೂ ಕೆಲವು ರಾಜ್ಯಗಳಲ್ಲಿ ಪಾರಿವಾಳಗಳ ಓಟದ ಸ್ಪರ್ಧೆಯನ್ನು ಜೂಜು ಎಂದು ಪರಿಗಣಿಸಿ ಅವಕಾಶ ಕಲ್ಪಿಸುತ್ತಿಲ್ಲ. ಇದನ್ನು ಪೂರ್ಣ ಪ್ರಮಾಣದ ಕ್ರೀಡೆ ಎಂದು ಪರಿಗಣಿಸಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳು, ಪಾರಿವಾಳಗಳನ್ನು ಗುರುತಿಸಿ ಸರಕಾರದ ಹಂತದಲ್ಲಿಯೇ ಪ್ರಶಸ್ತಿ ಪುರಸ್ಕಾರ ನೀಡುವ ಮೂಲಕ ಪುರಾತನ ಪದ್ಧತಿಯನ್ನು ಪೋಷಿಸಿ ಪ್ರೋತ್ಸಾಹಿಸಬೇಕಾಗಿದೆಯೆಂದರು.
ಮುಂದಿನ ಅಕ್ಟೋಬರ್ನಲ್ಲಿ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ಭಾರತ ಪಾರಿವಾಳ ಓಟದ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದೊಳಗಾಗಿ ತಾವು ಪಾರಿವಾಳವನ್ನು ಕ್ರೀಡೆಯಾಗಿ ಪರಿಗಣಿಸುವಂತೆ ಕೋರಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳಿಗೆ ಸಮಸ್ತ ಪಾರಿವಾಳ ಪೋಷಕರ ಪರವಾಗಿ ಪತ್ರ ಬರೆಯುವುದಾಗಿ ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಭಾರತ ಪಾರಿವಾಳ ಓಟದ ಕ್ಲಬ್ನ ಅಧ್ಯಕ್ಷ ಪಳಿಯಪ್ಪನ್ ಮಾತನಾಡಿದರು.
ಕೋಲಾರದಲ್ಲಿ ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ಐದು ವಿಭಾಗಗಳ ಪಾರಿವಾಳ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಪಾರಿವಾಳ ಪೋಷಕ ಕೆ.ಎಸ್.ಮುನಿರಾಜುಗೆ ಚಾಂಪಿಯನ್ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಇದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಲಕ್ಷ್ಮೀನಾರಾಯಣರನ್ನು ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಅಧ್ಯಕ್ಷ ಸಿ.ರಘುರಾಂ, ನಗರಸಭಾ ಸದಸ್ಯರಾದ ವಿ.ಮಂಜುನಾಥ್, ಸಿ.ಸೋಮಶೇಖರ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿ.ಕೃಷ್ಣ, ತುಮಕೂರು ಓಟದ ಪಾರಿವಾಳ ಕ್ಲಬ್ ಅಧ್ಯಕ್ಷ ಸುರೇಶ್, ಚನ್ನೈ ಮತ್ತು ತಮಿಳುನಾಡಿನ ವಿವಿಧ ಜಿಲ್ಲೆಗಳ ಪಾರಿವಾಳ ಓಟದ ಕ್ಲಬ್ಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.