ಬಾಕಿ ಅರ್ಜಿಗಳಲ್ಲಿ 5 ಸಾವಿರ ವಿಲೇವಾರಿ
ಕೋಲಾರ: ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ ವಿಲೇವಾರಿ ಆಗದೆ ಬಾಕಿ ಉಳಿದಿದ್ದ 14 ಸಾವಿರಕ್ಕೂ ಹೆಚ್ಚು ಅರ್ಜಿಗಳ ಪೈಕಿ 5 ಸಾವಿರ ಅರ್ಜಿಗಳು ತಾವು ಅಧಿಕಾರ ವಹಿಸಿಕೊಂಡ ನಂತರ ವಿಲೇವಾರಿ ಆಗಿವೆ ಎಂದು ಲೋಕಾಯುಕ್ತರಾದ ಡಾ.ವೈ.ಭಾಸ್ಕರ್ ರಾವ್ ತಿಳಿಸಿದರು.
ಅವರು ಕೋಲಾರದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 5 ಸಾವಿರ ಪ್ರಕರಣಗಳಲ್ಲಿ 78 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಸಿಬ್ಬಂದಿ ಕೊರತೆ ಇನ್ನೂ ಇರುವುದರಿಂದ ಕಡತಗಳ ವಿಲೇವಾರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ಕೋಲಾರದಲ್ಲಿ ಸೋಮವಾರ ನಡೆದ ಅಹವಾಲು ಸ್ವೀಕಾರ ಸಭೆ ತೃಪ್ತಿ ತಂದಿದೆ. ಬಡವರ ಕಷ್ಟ ಅರಿತು ಅದಕ್ಕೆ ಪರಿಹಾರ ಹುಡುಕುವುದಕ್ಕೆ ಸಹಾಯವಾಗಿದೆ ಎಂದ ಲೋಕಾಯುಕ್ತರು, ಕೆಲ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಅಸಡ್ಡೆ ಹಾಗೂ ವಿಳಂಬ ನೀತಿಯಿಂದಾಗಿ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿರುವುದಲ್ಲದೆ, ಸರ್ಕಾರದ ವಿರುದ್ಧ ಜನತೆ ಆಕ್ರೋಶಗೊಳ್ಳುವಂತಾಗಿದೆ ಎಂದು ಹೇಳಿದರು. ಬಾಕಿ ಇರುವ ಪ್ರಕರಣಗಳನ್ನು 2 ರಿಂದ 4 ತಿಂಗಳಲ್ಲಿ ಇತ್ಯರ್ಥ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗೆ ಶಿಕ್ಷೆ ನೀಡುವುದಕ್ಕಿಂತ ಆತನಿಂದ ಜನರ ಸೇವೆ ಮಾಡಿಸುವುದು ಪ್ರಮುಖ ಉದ್ದೇಶವಾಗಿರುವುದರಿಂದ ಅಧಿಕಾರಿಗಳಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂಬ ಉದ್ದೇಶದಿಂದ ಅಹವಾಲು ಸ್ವೀಕಾರ ಸಭೆ ಹಾಗೂ ವಿಚಾರಣೆ ಕೈಗೊಂಡಿರುವುದಾಗಿ ತಿಳಿಸಿದರು.
ರಾತ್ರಿ 8 ಗಂಟೆತನಕ ಸಭೆ: ಲೋಕಾಯುಕ್ತ ಡಾ.ವೈ.ಭಾಸ್ಕರ್ರಾವ್ ಅವರು ಬೆ. 10-30ರಿಂದ ಮಧ್ಯಾಹ್ನ 1.45 ನಂತರ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಹವಾಲು ಸ್ವೀಕರಿಸಿ, 4.30ಕ್ಕೆ ಪತ್ರಿಕಾಗೋಷ್ಠಿಯ ನಂತರ ಸಾರ್ವಜನಿಕರ ಒತ್ತಾಯದ ಮೇರೆಗೆ 5.15 ರಿಂದ ರಾತ್ರಿ 8ಗಂಟೆಯ ವರೆಗೆ ಸಭೆ ನಡೆಸಿ ಒಟ್ಟು 218 ಅರ್ಜಿಗಳನ್ನು ಸ್ವೀಕಾರ ಮಾಡಿ ನಂತರ ಬೆಂಗಳೂರಿಗೆ ತೆರಳಿದರು.