'ಮಕ್ಕಳ ಪೌಷ್ಟಿಕತೆ ಬಗ್ಗೆ ವಿಶೇಷ ಗಮನ ನೀಡಲಿ'
ಕ.ಪ್ರ. ವಾರ್ತೆ, ಮಾಲೂರು.ಜು.29
ವರ್ಷಕ್ಕೆ ಶೇ.12 ರಷ್ಟು ಮಕ್ಕಳು ಅತಿಸಾರದಿಂದ ಸಾವನ್ನಪ್ಪುತ್ತಿದ್ದು, ಪೋಷಕರು ಮಕ್ಕಳ ಪೌಷ್ಟಿಕತೆ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಜಿಲ್ಲಾ ಲಸಿಕಾ ಕೇಂದ್ರದ ಅಧಿಕಾರಿ ಡಾ. ಪ್ರಸನ್ನ ಕುಮಾರ್ ಹೇಳಿದರು.
ಅವರು ಪಟ್ಟಣದ ಹೊರವಲಯದ ಗುಡ್ನಹಳ್ಳಿ ರಸ್ತೆಯಲ್ಲಿರುವ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಓಆರ್‌ಎಸ್ ದಿನಾಚರಣೆಯಲ್ಲಿ ಮಾತನಾಡುತ್ತ ಕುಲಷಿತ ನೀರು-ಆಹಾರದಿಂದ ಬರಲಿರುವ ಈ ಅತಿಸಾರ ಭೇದಿಯನ್ನು ತಡೆಯುವಂತಹ ಶಕ್ತಿವರ್ಧಕಗಳು ಮಕ್ಕಳಿನ ಅಪೌಷ್ಟಿಕತೆಯಿಂದ ಕಡಿಮೆಯಾಗಿರುತ್ತದೆ. ಅತಿಸಾರ ಪ್ರಾರಂಭದ ಹಂತದಲ್ಲೇ ಚಿಕಿತ್ಸೆ ನೀಡಬೇಕು. ದೇಶದಲ್ಲಿ ನಿಮೋನಿಯ ನಂತರ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿರುವುದು ಈ ಅತಿಸಾರದಿಂದ ಎಂದರು.
ಸರ್ಕಾರವು ಈ ನಿಟ್ಟಿನಲ್ಲಿ ಓಆರ್‌ಎಸ್ ದಿನವನ್ನು ಆಚರಿಸುವ ಮೂಲಕ ಅತಿಸಾರ ಬಗ್ಗೆ ಮಕ್ಕಳಲ್ಲಿ-ಪೋಷಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಓಆರ್‌ಎಸ್ ದಿನಾಚರಣೆ ಅಂಗವಾಗಿ ಕೋಲಾರದ ದೇವರಾಜ ಅರಸು ಆಸ್ಪತ್ರೆಯ ಮಕ್ಕಳ ತಜ್ಞರ ತಂಡ ಪ್ರಯೋಜಿಸಿದ್ದ ಉಚಿತ ಮಕ್ಕಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಸೆಂಟ್ ಮೇರಿಸ್ ಆಸ್ಪತ್ರೆ ನಿರ್ದೇಶಕಿ ಡಾ. ಲೂಸಿಯನಾ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ತಜ್ಞ ಡಾ. ನವೀನ್ ಕುಮಾರ್ ಮಕ್ಕಳಲ್ಲಿನ ಪೌಷ್ಟಿಕತೆ ಬಗೆ ಮಾಹಿತಿ ನೀಡಿದರು. ಅತಿಸಾರ ಭೇದಿ ಬಗ್ಗೆ ಇದೇ ಸಂದರ್ಭದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು. ನಂತರ ಮಕ್ಕಳಿಗೆ ಅತಿಸಾರ ಬಗ್ಗೆ ಸ್ಪರ್ಧೆ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಡಾ. ಶಿವಕುಮಾರ್, ಡಾ. ಫಾಸಿಯಾ, ಗ್ರೇಶ್‌ನ್ ಆಲ್ಮೇಡಾ, ಡಾ. ಮಲ್ಲಿಕಾ ಇದ್ದರು. ಸಿಸ್ಟರ್ ವಲ್ಸ್ ಸ್ವಾಗತಿಸಿದರು. ಡಾ. ಶೇಷಾದ್ರಿ ಕಾರ್ಯಕ್ರಮ ನಿರೂಪಿಸಿದರು.