ಸಮರೋಪಾದಿಯಲ್ಲಿ ಹೇಮಾವತಿ ನಾಲೆ ದುರಸ್ತಿ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯದ ಸಭೆಯಲ್ಲಿ ಸಚಿವ ಜಯಚಂದ್ರ ಘೋಷಣೆ
ಕ.ಪ್ರ.ವಾರ್ತೆ ತುಮಕೂರು ಜು.29
ಹೇಮಾವತಿ ನಾಲಾ ದುರಸ್ತಿ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಕೈಗೊಂಡು ಜುಲೈ 31 ರೊಳಗಾಗಿ ಜಿಲ್ಲೆಗೆ ನೀರು ಹರಿಸಲು ಸಕಲ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಗೆ ಹೇಮಾವತಿ ನೀರು ಹರಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಸಾಲಿನವರೆಗೂ ಜಿಲ್ಲೆಗೆ 19 ರಿಂದ 20 ಟಿ.ಎಂ.ಸಿ.ಯಷ್ಟು ನೀರನ್ನು ಪಡೆಯಲಾಗಿದ್ದು, ಈ ಬಾರಿ ತುಮಕೂರು ಜಿಲ್ಲೆಯ ಪಾಲಿನ 25 ಟಿ.ಎಂ.ಸಿ ನೀರನ್ನು ಸಂಪೂರ್ಣವಾಗಿ ಪಡೆಯಲಾಗುವುದು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದರು.
ಎಲ್ಲಿಯೂ ಸಹ ಸಾರ್ವಜನಿಕರು ನಾಲೆ ಮುಟ್ಟದ ಹಾಗೆ ಮತ್ತು ನೀರನ್ನು ತಿರುಗಿಸದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಎಲ್ಲಾ ತಾಲೂಕುಗಳಲ್ಲೂ ತೀವ್ರವಾದ ನೀರಿನ ಕೊರತೆ ಎದುರಾಗಿದ್ದು, ಈ ಬಾರಿ ನಮ್ಮ ಪಾಲಿನ 25 ಟಿ.ಎಂ.ಸಿ. ನೀರನ್ನು ಪೂರ್ಣವಾಗಿ ಪಡೆಯುವ ನಿಟ್ಟಿನಲ್ಲಿ ಯಾವುದೇ ಲೋಪದೋಷಕ್ಕೆ ಆಸ್ಪದವಾಗದಂತೆ ಅಧಿಕಾರಿಗಳು ಕೆಲಸ ಮಾಡುವಂತೆ ಸೂಚಿಸಿದರು.
ಪ್ರಸ್ತಾವನೆ ಸಲ್ಲಿಕೆ: ನಾಲೆ ಆಧುನೀಕರಣ ಹಾಗೂ ನಾಲಾ ನಿರ್ವಹಣೆಗಾಗಿ ಯೋಜನೆ ರೂಪಿಸಲಾಗಿದ್ದು, ಡಿ.ಪಿ.ಆರ್. ಪೂರ್ಣಗೊಂಡ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಿ, ಯೋಜನೆಗೆ ಅನುಮೋದನೆ ಪಡೆದು, ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮೂಲ ಯೋಜನೆಯಂತೆ ತುಮಕೂರು ಶಾಖಾ ನಾಲೆಯ 9509 ಅಚ್ಚುಕಟ್ಟು ಪ್ರದೇಶಕ್ಕೆ 18.07 ಟಿ.ಎಂ.ಸಿ., ನಾಗಮಂಗಲ ಶಾಖಾ ನಾಲೆಗೆ 59488 ಅಚ್ಚುಕಟ್ಟು ಪ್ರದೇಶಕ್ಕೆ 11.19 ಟಿ.ಎಂ.ಸಿ., ಬಾಗೂರು ನವಿಲೆ ಸುರಂಗ ನಿರ್ಗಮನ ಭಾಗದ ಏತನೀರಾವರಿ ಯೋಜನೆಯ 2358 ಅಚ್ಚುಕಟ್ಟು ಪ್ರದೇಶಕ್ಕೆ 0.29 ಟಿ.ಎಂ.ಸಿ., ತುಮಕೂರು ಮತ್ತು ಅರಸೀಕರೆ-ತಿಪಟೂರು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ 1.44 ಟಿ.ಎಂ.ಸಿ. ಹೇಮಾವತಿ ನೀರು ಹಂಚಿಕೆಯಾಗಿದೆ ಎಂದು ಸಚಿವರು ತಿಳಿಸಿದರು.
ಸತತ ಬರ: ಶಾಸಕ ಸುರೇಶ್ ಗೌಡ ಅವರು ಮಾತನಾಡಿ, ಕಳೆದ ಮೂರು ವರ್ಷದಿಂದ ಸತತ ಬರ ಕಾಡಿದ್ದು, ಜಿಲ್ಲೆಯ ಯಾವುದೇ ಕೆರೆಕಟ್ಟೆಗಳು ತುಂಬಿಲ್ಲ. ಈ ಬಾರಿ ನಮ್ಮ ಪಾಲಿನ 25 ಟಿ.ಎಂ.ಸಿ. ನೀರನ್ನು ತರಲೇಬೇಕಿದೆ. ಅಣೆಕಟ್ಟು ಒಡೆದು ಹೋಗಿರುವ ಕುರಿತಂತೆ ತನಿಖೆ ನಡೆಸಬೇಕಿದೆ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಈ ಸಂದರ್ಭ ತಿಳಿಸಿದರು.
ಶಾಸಕ ನಾಗರಾಜಯ್ಯ ಅವರು ಮಾತನಾಡಿ, ನಾಲೆ ಒಡೆದು ಹೋಗಿರುವುದಕ್ಕೆ ಕಾರಣ ಪತ್ತೆಹಚ್ಚಬೇಕಿದೆ. ವಾರ್ಷಿಕ ನಾಲಾ ದುರಸ್ತಿ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೈಗೊಂಡಿಲ್ಲವೆ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ವ್ಯಯಿಸಲ್ಪಟ್ಟ ಖರ್ಚು ವೆಚ್ಚದ ಮಾಹಿತಿಯನ್ನು ಪಡೆದು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ರಕ್ಷಣೆ ಅಗತ್ಯ: ಶಾಸಕ ಕೆ.ಎನ್. ರಾಜಣ್ಣ ಅವರು ಮಾತನಾಡಿ, ನಾಲೆಗೆ ಸಂಪೂರ್ಣ ರಕ್ಷಣೆ ನೀಡುವ ಅಗತ್ಯತೆ ಇದೆ. ಪೋಲೀಸರು ನಾಲೆಯನ್ನು ಸಂರಕ್ಷಿಸುವ ಮೂಲಕ ಎಲ್ಲಿಯೂ ನಾಲೆ ಹಾನಿಯಾಗದಂತೆ ಮತ್ತು ನೀರು ಪೋಲಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ಅವರು ಮಾತನಾಡಿ, ಸಮರೋಪಾದಿಯಲ್ಲಿ ನಾಲೆಯ ದುರಸ್ತಿ ಕೆಲಸ ಮಾಡಿಸಿ, ನಾಲಾ ವ್ಯಾಪ್ತಿಯಲ್ಲಿನ ಕಳೆ ಹಾಗೂ ಹೂಳನ್ನು ತೆಗೆಯುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಶಾಸಕರಾದ ಷಡಕ್ಷರಿ, ಸುಧಾಕರ್‌ಲಾಲ್, ಆರ್. ಶ್ರೀನಿವಾಸ್, ಚನ್ನರಾಯಪಟ್ಟಣದ ಶಾಸಕ ಬಾಲಕೃಷ್ಣ, ಹುಲಿನಾಯ್ಕರ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿ.ಪಂ. ಸಿ,ಇ.ಓ. ಗೋವಿಂದರಾಜು ಉಪಸ್ಥಿತರಿದ್ದರು.