ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಧಿಕಾರಿಗಳಿಂದ ತಪ್ಪು ಮಾಹಿತಿ, ಸರ್ಕಾರಕ್ಕೆ ಮುಜುಗರ

Srinivasa Murthy VN
Updated On : 26 Jun 2013, 12:40 pm

ಕ.ಪ್ರ. ವಾರ್ತೆ ತುಮಕೂರು ಜೂ.25
ಪರಮಶಿವಯ್ಯ ವರದಿಯಾಧಾರಿತ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಸಂಬಂಧಿಸಿದ ವಾಟರ್‌ಗ್ರಿಡ್ ಕೆನಾಲ್ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುವುದರ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರವನ್ನುಂಟುಮಾಡಿದ್ದಾರೆ ಎಂದು ತುಮಕೂರು ಲೋಕಸಭಾ ಸದಸ್ಯ ಹಾಗೂ ಪರಮಶಿವಯ್ಯ ವರದಿ ಜಾರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿರುವ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 24-6-2012 ರಂದು ಬೆಂಗಳೂರಿನ ಕಾಫಿ ಬೋರ್ಡ್ ಕಟ್ಟಡದಲ್ಲಿರುವ  ಕರ್ನಾಟಕ ನೀರಾವರಿ ನಿಗಮದಲ್ಲಿ ನಡೆದ ಕೋಲಾರ, ಚಿಕ್ಕಬಳ್ಳಾಪುರ  ಹಾಗೂ ಬೆಂಗಳೂರು ಗ್ರಾಮಾಂತರದ ಜನಪ್ರತಿನಿಧಿಗಳ ಸಭೆಯಲ್ಲಿ ಇನ್ನು 6 ತಿಂಗಳೊಳಗಾಗಿ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಭರವಸೆಯನ್ನು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ನೀಡಿರುವುದು ಸ್ವಾಗತಾರ್ಹ. ಆದರೆ ಕಾಮಗಾರಿಯ ನಿರ್ದಿಷ್ಟ ಹೆಸರನ್ನು ಅಂದರೆ, ಜಿ.ಎಸ್. ಪರಮಶಿವಯ್ಯನವರ ವರದಿಯಾಧಾರಿತ ಹೆಡ್ ವರ್ಕ್ಸ್ ಕಾಮಗಾರಿಗೋ, ಎತ್ತಿನ ಹೊಳೆ ಹೆಡ್ ವರ್ಕ್ಸ್ ಯೋಜನೆ ಕಾಮಗಾರಿಗೋ, ಹೇಮಾವತಿ ಪ್ಲಡ್ ಕೆನಾಲ್ ಹೆಡ್ ವರ್ಕ್ಸ್ ಕಾಮಗಾರಿಗೋ ಅಥವಾ 3 ಯೋಜನೆಗಳ ಮೂಲಕ ನೀರು ಹರಿಸುವ ಸಂಯುಕ್ತ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಯೋಜನೆಗೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಕೂಡಲೇ ಯಾವ ಯೋಜನೆ ಎಂಬುದನ್ನು ಸಚಿವರು ಸ್ಪಷ್ಟಪಡಿಸಬೇಕು ಎಂದು ಬಸವರಾಜ್ ಆಗ್ರಹಿಸಿದರು.
ಪ್ರತಿಭಟಿಸಲಾಗಿದೆ: 24 ರಂದು ನಡೆದ ಸಭೆಯಲ್ಲಿ ಅಧಿಕಾರಿಗಳು ಸಚಿವರಿಗೆ ತಪ್ಪು ಮಾಹಿತಿ ಹಾಗೂ ಅಪೂರ್ಣ ಮಾಹಿತಿಗಳನ್ನು ನೀಡಿ ಸಚಿವರಿಂದಲೇ ತಪ್ಪು ಹೇಳಿಕೆ ನೀಡಿಸಿರುವುದು ದುರದೃಷ್ಟಕರ. ಸ್ವತಃ ಸಚಿವ ಪಾಟೀಲರು ಸಿವಿಲ್ ಎಂಜಿನಿಯರ್ ಆಗಿದ್ದು, ಜಲ ಸಂಪನ್ಮೂಲ ಸಚಿವರೂ ಆಗಿದ್ದಾರೆ. ಇಂತಹ ತಿಳುವಳಿಕೆ ಹಿನ್ನೆಲೆಯಿರುವ ಸಚಿವ ಪಾಟೀಲರಿಂದಲೇ ತಪ್ಪು ಹೇಳಿಕೆ ನೀಡಿಸಿರುವ ಅಧಿಕಾರಿಗಳ ಧೋರಣೆಯನ್ನು ಸಭೆಯಲ್ಲೇ ಖಂಡಿಸಲಾಗಿದ್ದು, ಪ್ರತಿಭಟಿಸಲಾಗಿದೆ ಎಂದು ಬಸವರಾಜು ತಿಳಿಸಿದರು.
ಪೂರಕ ಟಿಪ್ಪಣಿ ಹಾಸ್ಯಾಸ್ಪದ: ಆದಾಗ್ಯೂ ವಿಧಾನಸಭೆಯಲ್ಲಿ ನಿಯಮ 69 ರಡಿ ಚರ್ಚೆಗೆ ಉತ್ತರ ನೀಡಿದ್ದ ಸಚಿವರ ಹೇಳಿಕೆ ಸ್ವಾಗತಾರ್ಹ. ಆದರೆ 24 ರಂದು ನಡೆದ ಸಭೆಯಲ್ಲಿ ಮುಂದುವರೆದ ಪೂರಕ ಟಿಪ್ಪಣಿ ಹಾಸ್ಯಾಸ್ಪದವಾಗಿದೆ. ಸರ್ಕಾರ ಅರಸೀಕೆರೆಯಿಂದ ಕರ್ನಾಟಕ ವಾಟರ್‌ಗ್ರಿಡ್ ಕೆನಾಲ್ ನಿರ್ಮಿಸುವುದಾಗಿ ಮರು ಹೇಳಿಕೆ ನೀಡಿದ್ದು, ಅಲ್ಲಿಯವರೆಗೆ 2 ಕಾಲುವೆಗಳನ್ನು  ಪ್ರತ್ಯೇಕವಾಗಿ ನಿರ್ಮಿಸಲು ನೀಡಿರುವ ಕಾರಣ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಸಮುದ್ರ ಮಟ್ಟದಿಂದ 965 ಮೀಟರ್ ಎತ್ತರದವರೆಗೆ ಲಿಫ್ಟ್ ಮಾಡಬೇಕಾಗಿದೆ ಎಂದು ಪ್ರಕಟಿಸಿದ್ದಾರೆ.
ವಾಸ್ತವಿಕವಾಗಿ ವಾಣಿ ವಿಲಾಸ ಸಾಗರ ಸಮುದ್ರ ಮಟ್ಟದಿಂದ 658.28 ಮೀಟರ್ ಎತ್ತರದಲ್ಲಿದೆ. ಕರ್ನಾಟಕ ವಾಟರ್‌ಗ್ರಿಡ್ ಕೆನಾಲ್ ಸಮುದ್ರ ಮಟ್ಟದಿಂದ 909 ಮೀಟರ್ ಎತ್ತರದಲ್ಲಿ ಹರಿಯಲಿದೆ. ಈ ಪ್ರಕಾರ ಸುಮಾರು 307 ಮೀಟರ್ ತಗ್ಗಿನಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಿ, ವಿದ್ಯುತ್ ಸಹ ಉತ್ಪಾದಿಸಬಹುದಾಗಿದೆ. ಆದರೆ ಅಧಿಕಾರಿಗಳು ಸಚಿವ ಪಾಟೀಲರಿಂದ ಏಕೆ ತಪ್ಪು ಮಾಹಿತಿ ನೀಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಜಿಎಸ್‌ಬಿ ತಿಳಿಸಿದ್ದಾರೆ.
ತಾಂತ್ರಿಕತೆಯೇ: ಹಾಸನ ಜಿಲ್ಲೆಯ ಅರಸೀಕೆರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮತ್ತು ಚಿತ್ರದುರ್ಗ ಜಿಲ್ಲೆಯ ವಿವಿಧ ಕೆರೆಗಳಿಗೆ ನೀರುಣಿಸಲು 965 ಮೀಟರ್ ಎತ್ತರಕ್ಕೆ ಲಿಫ್ಟ್ ಮಾಡುವುದು ಅಗತ್ಯವಾಗಿದೆ. ಆದರೆ ಆ ಎತ್ತರದ ಪ್ರದೇಶದಲ್ಲಿರುವ ಕೆರೆಗಳಿಗೆ ಅಗತ್ಯವಿರುವ ನೀರನ್ನು ಮಾತ್ರ ಲಿಫ್ಟ್ ಮಾಡುವುದು ಸೂಕ್ತವಾಗಿದೆ. ಆದರೆ 24.00 ಟಿಎಂಸಿ ನೀರನ್ನು ಅಷ್ಟು ಎತ್ತರಕ್ಕೆ ಲಿಫ್ಟ್ ಮಾಡಿ, ಸುಮಾರು 80 ಕಿಮೀ ದೂರ ಹರಿಸಿ, ಮತ್ತೆ ವಾಟರ್ ಗ್ರಿಡ್ ಕೆನಾಲ್‌ಗೆ ಹರಿಸುವುದು ತಾಂತ್ರಿಕತೆಯೇ ಎಂದು ಜಿಎಸ್‌ಬಿ ಪ್ರಶ್ನಿಸಿದ್ದಾರೆ.

ಸರ್ಕಾರದ ತಾರತಮ್ಯ ಧೋರಣೆ
ತುಮಕೂರು: 12-03-2013 ರ ಸಚಿವ ಸಂಪುಟದ ನಿರ್ಣಯಕ್ಕೆ ಆದೇಶ ನೀಡದೇ ಇರುವ ಸರ್ಕಾರದ ಧೋರಣೆ ಮಲತಾಯಿ ಧೋರಣೆಯಾಗಿದೆ. ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ 3 ನೇ ಹಂತದ ಯೋಜನೆಗೆ 17,200 ಕೋಟಿ ರು. ಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಾಗೆಯೇ ಎತ್ತಿನ ಹೊಳೆ ಯೋಜನೆಗೆ 8223 ಕೋಟಿ ರು. ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ ಈ ಎರಡು ಯೋಜನೆಗಳಿಗೂ ಈವರೆವಿಗೆ ಡಿಪಿಆರ್ ಸಿದ್ಧಪಡಿಸಿಲ್ಲ. ಯಾವುದೋ ಒಬ್ಬ ಗುತ್ತಿಗೆದಾರ ಅನಧಿಕೃತವಾಗಿ ನೀಡಿರುವ ಲೈನ್ ಎಸ್ಪಿಮೇಟ್‌ಗೆ ಸಚಿವ ಸಂಪುಟ ಅನುಮೋದನೆ ನೀಡಿ ಕಳೆದ ಮುಂಗಡ ಪತ್ರದಲ್ಲಿ ಹಣ ಕಾಯ್ದಿರಿಸಿದೆ.
ಆದರೆ ಸರ್ಕಾರವೇ ಅಧಿಕೃತವಾಗಿ ಪರಮಶಿವಯ್ಯನವರ ವರದಿಯಾಧಾರಿತ ಯೋಜನೆಗೆ ಟೆಂಡರ್ ಕರೆದಿದ್ದು, ಯು.ಆರ್.ಎಸ್. ಸ್ಕಾಟ್ ವಿಲ್ಸನ್ ಇಂಡಿಯಾ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಡಿಸೆಂಬರ್ 2012 ರಲ್ಲಿ 40 ಟಿಎಂಸಿ ನೀರಿನ ಯೋಜನೆಗೆ  26,580 . 56 ಕೋಟಿ ರು. ವೆಚ್ಚದ ಪ್ರಾಥಮಿಕ ವರದಿ ನೀಡಿದೆ. ಪುನಃ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ನಿರ್ದೇಶನದಂತೆ ಮಾರ್ಪಡಿಸಿ, 83.07 ಟಿಎಂಸಿ ನೀರಿನ ಯೋಜನೆಗೆ ರು. 64,300 ಕೋಟಿ ಯೋಜನೆಯ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದರೂ ಸಹ ಸಚಿವ ಸಂಪುಟದಲ್ಲಿ ಅನುಮೋದನೆ ನೀಡದಿರುವುದು ವಿಷಾದಕರ ಎಂದು ಜಿಎಸ್‌ಬಿ ತಿಳಿಸಿದ್ದಾರೆ.
ಒಟ್ಟಾರೆ ಸರ್ಕಾರ ಡಿಪಿಆರ್ ಸಿದ್ಧಪಡಿಸಿದ ಯೋಜನೆಗಳಿಗೆ ಹಣ ನೀಡಿ, ಸಚಿವ ಸಂಪುಟದಲ್ಲಿ ಅನುಮೋದನೆಗೊಂಡಿರುವ ವಾಟರ್‌ಗ್ರಿಡ್ ಕೆನಾಲ್‌ಗೆ ಹಸಿರು ನಿಶಾನೆ ತೋರದಿರುವುದು ತಾರತಮ್ಯ ಧೋರಣೆಗೆ ಉದಾಹರಣೆಯಾಗಿದೆ ಎಂದು ಜಿಎಸ್‌ಬಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement