'ಕೌಟುಂಬಿಕ ಸಮಸ್ಯೆಗಳಿಗೆ ರಾಜಿ ಸೂತ್ರ ಮುಖ್ಯ'
ತುಮಕೂರು: ಕೌಟುಂಬಿಕ ಸಮಸ್ಯೆಗಳಿಗೆ ರಾಜಿ ಸೂತ್ರ ಮುಖ್ಯ ಎಂದು ವಕೀಲ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್ ಪ್ರತಿಪಾದಿಸಿದರು.
ಅವರು ತುಮಕೂರು ಸಮೀಪದ ಬುಗುಡನಹಳ್ಳಿಯಲ್ಲಿ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕೌಟುಂಬಿಕ ದೌರ್ಜನ್ಯ ತಡೆ - ಮಹಿಳಾ ಜಾಗೃತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೌಟುಂಬಿಕ ಸಮಸ್ಯೆ, ದೌರ್ಜನ್ಯಗಳು ಎಲ್ಲ ಕಡೆ ಇದ್ದದ್ದೇ. ಆದರೆ ಅವುಗಳನ್ನು ಬಗೆಹರಿಸಿಕೊಳ್ಳುವ ಮಾರ್ಗ ತಿಳಿದುಕೊಳ್ಳಬೇಕು. ಕೌಟುಂಬಿಕ ಸಮಸ್ಯೆಗಳನ್ನು ರಾಜಿ ಸಂಧಾನ ಸೂತ್ರಗಳ ಮೂಲಕ ಪಂಚಾಯ್ತಿಗಳಲ್ಲಿ, ಸಾಂತ್ವನ ಕೇಂದ್ರಗಳಲ್ಲಿ, ಗುರು-ಹಿರಿಯರ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲು ಹತ್ತಬೇಕು ಎಂದು ಸಲಹೆ ನೀಡಿದರು.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ವಯ ನೊಂದ ಮಹಿಳೆಯರು ಮಹಿಳಾ ಇಲಾಖೆಯ ಸಂರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬಹುದು. ಇಲ್ಲವೆ ಕಾನೂನು ಹೋರಾಟಕ್ಕೂ ಅಣಿಯಾಗಬಹುದು ಎಂದರು.
ಹೆಚ್ಚಿನ ಬಡ್ಡಿಆಸೆಗೆ ಮಾರು ಹೋಗದಿರಿ: ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಯ್ಯ ಮಾತನಾಡಿ, ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ, ಮಹಿಳೆಯರನ್ನು ಸಾಲಗಾರರನ್ನಾಗಿಸುವ ಸಂಘ - ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿರಲಿ: ಈ ರೀತಿಯಲ್ಲಿ ಹಣ ಪಾವತಿಸಿಕೊಂಡು, ಸಾಲ ನೀಡುವ ಹಣಕಾಸು ಸಂಸ್ಥಗಳ ಬಗ್ಗೆ ಸದಾ ಎಚ್ಚರಿಕೆಯಿರಬೇಕು. ವಸೂಲು ಮಾಡುವ ಬಡ್ಡಿ ಎಷ್ಟೆಂಬುದರ ಬಗ್ಗೆ ಅರಿವಿರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರದ ಹಿಡಿತದಲ್ಲಿರುವ ಸಹಕಾರಿ ಸಂಸ್ಥೆ, ಬ್ಯಾಂಕ್ಗಳನ್ನೇ ಆಶ್ರಯಿಸುವುದು ಒಳಿತು ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ರವಿ, ಜಗನ್ಮಾಥ, ಮುಖ್ಯೋಪಾದ್ಯಾಯ ಪಾಲಾಕ್ಷಯ್ಯ, ಮೇಲ್ವೀಚಾರಕಿ ಸುಪ್ರೀತಾ, ಗ್ರಾಪಂ ಸದಸ್ಯೆ ನಾಗಮ್ಮ ಉಪಸ್ಥಿತರಿದ್ದರು.