ತುಮಕೂರು ದಾವಣಗೆರೆ ರೇಲ್ವೇ ಮಾರ್ಗಕ್ಕೆ ಸಮ್ಮತಿ
ಕನ್ನಡಪ್ರಭ ವಾರ್ತೆ ತುಮಕೂರು ಜೂ.25
ಮಹತ್ವಾಕಾಂಕ್ಷಿ ತುಮಕೂರು ದಾವಣಗೆರೆ ನಡುವಣ ರೈಲು ಮಾರ್ಗಕ್ಕೆ ಕೇಂದ್ರ ರೇಲ್ವೇ ಸಚಿವರು ಸಮ್ಮತಿ ಸೂಚಿಸಿದ್ದಾರೆ.
ನವದೆಹಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಅವರು ಈ ಸಂಬಂಧ ಮುಖ್ಯಮಂತ್ರಿಯೊಂದಿಗೆ ರೇಲ್ವೆ ಸಚಿವರ ಜತೆ ಚರ್ಚಿಸಿದ ಬಳಿಕ ಈ ಭರವಸೆ ಸಿಕ್ಕಿದೆ.
1933 ಕೋಟಿ ರು. ವೆಚ್ಚದ ರೇಲ್ವೆ ಕಾಮಗಾರಿಗೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಆದೇಶ ಹೊರಬೀಳಲಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಅವರು ತಿಳಿಸಿದರು.
ಅವರು ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಾಪೆಡ್ ಕೊಬ್ಬರಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ರೇಲ್ವೆ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ಈ ರೇಲ್ವೇ ಮಾರ್ಗ ಚಾಲನೆಗೊಂಡಲ್ಲಿ ಕ್ಷೇತ್ರದ ಅಭಿವೃದ್ಧಿ ಗಣನೀಯವಾಗಿ ಏರಲಿದೆ ಎಂದು ಅವರು ತಿಳಿಸಿದರು.
ಹಿಂದೆ ಒಂದು ಸಾವಿರ ಕೊಬ್ಬರಿ 180 ಕೆ.ಜಿ. ತೂಗುತ್ತಿದ್ದು, ಈಗ ಅಂತರ್ಜಲ ಕಡಿಮೆಯಾಗಿರುವ ಹಿನ್ನಲೆಯಲ್ಲಿ ನೀರಿನ ಆಶ್ರಯದಲ್ಲಿ ಬೆಳೆಯುವ ತೆಂಗಿನಿಂದ ಪ್ರತಿ ಸಾವಿರ ಕೊಬ್ಬರಿ 100 ರಿಂದ 120 ಕೆ.ಜಿ. ದೊರಕುತ್ತಿದ್ದು, ರೈತರ ಸಂಕಷ್ಟ ನಿವಾರಿಸುವ ಹಿನ್ನೆಲೆಯಲ್ಲಿ 6500 ರು. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಮಧ್ಯವರ್ತಿಗಳು ಹಾಗೂ ವರ್ತಕರು ರೈತರ ಶೋಷಣೆ ಮಾಡುವುದನ್ನು ನಿಯಂತ್ರಿಸಲು ನ್ಯಾಪೆಡ್ ಕೇಂದ್ರ ತೆರೆಯಲಾಗಿದ್ದು, ಇದು 11ನೇ ನ್ಯಾಪೆಡ್ ಕೇಂದ್ರವಾಗಿದೆ. ಬೆಲೆ ಕಡಿಮೆ ಇರುವ ಸಂದರ್ಭದಲ್ಲೆಲ್ಲಾ ರೈತರಿಂದ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಅಡಿಕೆ, ತೆಂಗು ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಅಡಿಕೆ ಮತ್ತು ತೆಂಗು ಬೆಳೆಗಳು ಒಣಗಿರುವಂತಹ ಪ್ರದೇಶಗಳನ್ನು ಗುರುತಿಸಿ, ಪರಿಹಾರ ನೀಡಲು ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ ಎಂದ ಸಚಿವರು, ರೈತರಿಗೆ ಆಪತ್ತು ಕಾಲದಲ್ಲಿ ನೆರವಾಗುವ ದೃಷ್ಟಿಯಿಂದ ರಾಜ್ಯಕ್ಕೆ ಅನ್ವಯಿಸುವಂತೆ 100 ಕೋಟಿ ರು. ಹಣವನ್ನು ಮೀಸಲಿಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.