ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಕ್ಕಳ ಮೇಲೆ ದೌರ್ಜನ್ಯ ಸಲ್ಲದು: ಅನ್ನಪೂರ್ಣ ವೆಂಕಟನಂಜಪ್ಪ

Srinivasa Murthy VN
Updated On : 26 Jun 2013, 12:41 pm

ತುಮಕೂರು: ಮಕ್ಕಳ ಮೇಲೆ ದೌರ್ಜನ್ಯ ನಡೆಯದೆ ಇರುವಂತಹ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಬೇಕೆಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಅಭಿಪ್ರಾಯಪಟ್ಟರು.
ಅವರು ವಿಶ್ವ ಮಕ್ಕಳ ಹಕ್ಕುಗಳ ದಿನದ ಅಂಗವಾಗಿ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬಾಪು ವಿಕಾಸ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ವಿಷಯದಲ್ಲಿ ಕಾನೂನುಗಳು ಸಾಕಷ್ಟು ಬದಲಾಗಿವೆ. ಬಾಲನ್ಯಾಯ ಕಾಯ್ದೆ ಜಾರಿಗೆ ಬಂದಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಯಾರಿಗಾದರೂ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಅಥವಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಮಹಿಳಾ ಇಲಾಖೆ ನಿರೂಪಣಾಧಿಕಾರಿ ನಟರಾಜ್ ಮಾತನಾಡಿ, ಅನಾಥ ಮಕ್ಕಳು, ನಿರ್ಗತಿಕ ಮಕ್ಕಳು ಸಹ ಸಮಾಜದ ಇತರ ಮಕ್ಕಳಂತೆ ಬೆಳೆಯಬೇಕು. ಅವರನ್ನು ಮುಖ್ಯ ವಾಹಿನಿಗೆ ತರುವ ಸರ್ಕಾರದ ಪ್ರಯತ್ನಕ್ಕೆ ಸಂಘ - ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದರು.
ಮಕ್ಕಳು ಹಕ್ಕುಗಳು, ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಎಲ್ಲ ಪೋಷಕರು ತಿಳುವಳಿಕೆ ಹೊಂದಬೇಕಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದರು.
ಬ್ರೂಣ ಹತ್ಯೆ ನಿಲ್ಲಲಿ: ಸಾಹಿತಿ ಬಾ.ಹ. ರಮಾಕುಮಾರಿ ಮಾತನಾಡಿ, ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭ್ರೂಣಹತ್ಯೆ ನಡೆಯುತ್ತಿದೆ. ಇದು ನಿಲ್ಲಬೇಕು. ಸಮಾಜದ ಎಲ್ಲೇ ಆಗಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ 1098 ಸಂಪರ್ಕಿಸಬಹುದಾಗಿದೆ ಎಂದರು.
ಬಾಪೂಜಿ ಸಂಸ್ಥೆಯ ಎಂ. ಬಸವಯ್ಯ ಮಾತನಾಡಿ, ಮಕ್ಕಳು ಉತ್ತಮ ಪ್ರಜೆಗಳಾಗಲು ಪೋಷಕರು, ಶಿಕ್ಷಕರು ಎಲ್ಲರೂ ಒಟ್ಟುಗೂಡಿ ಶ್ರಮಿಸಬೇಕು ಎಂದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಈರಣ್ಣ ಮಾತನಾಡಿ, ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಜಾಲಗಳು ಹೆಚ್ಚುತ್ತಿದ್ದು, ಜಾಗೃತರಾಗಿರಬೇಕೆಂದರು. ಇದೇ ಸಂದರ್ಭದಲ್ಲಿ ಎಂ. ಬಸವಯ್ಯ ಹಾಗೂ ಗೌರಮ್ಮ ದಂಪತಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ. ರಾಜಕುಮಾರ್, ವದಕ್ಷಿಣೆ ವಿರೋಧಿ ವೇದಿಕೆಯ ಮಮತಾ ರವಿಕುಮಾರ್, ಅಕ್ಕಮ್ಮ, ಲಲಿತಾ ಮಲ್ಲಪ್ಪ, ಸಾಂತ್ವನ ಕೇಂದ್ರದ ಅಂಬುಜಾಕ್ಷಿ, ಪಾರ್ವತಮ್ಮ, ಗಂಗಲಕ್ಷ್ಮಿ, ನಂಜುಂಡಪ್ಪ, ಮುಂತಾದವರು ಉಪಸ್ಥಿತರಿದ್ದರು. ವಾಣಿ ಕಾರ್ಯಕ್ರಮ ನಿರೂಪಿಸಿದರು.

ಚರಿತ್ರಾರ್ಹ ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಕ.ಪ್ರ. ವಾರ್ತೆ ಶಿರಾ ಜೂ.25
ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಚರಿತ್ರಾರ್ಹ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಸಿ 2000 ಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯದಾನ ಮಾಡಿದ ಸಂಘದ ಕಾರ್ಯ ಪ್ರಶಂಸನೀಯವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.
 ಅವರು ಪಟ್ಟಣದ ಶ್ರೀ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಕಾಲೇಜು ಆವರಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ವೈದ್ಯರ ಸಂಘದ ವತಿಯಿಂದ  ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಎಲ್ಲಾ ಆಸ್ತಿಗಳಿಗಿಂತ ಆರೋಗ್ಯ ಮಿಗಿಲಾದುದು. ನೌಕರ ಸಂಘದ ಬಾಂಧವರು ತಾಲೂಕಿನ ಜನತೆಯ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮ: ತಾಲೂಕಿನಲ್ಲಿ ಡೆಂಘೀ ಜ್ವರದ ಪ್ರಕರಣಗಳು ನಿಯಂತ್ರಣಕ್ಕೆ ಬರದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಸಚಿವರು ತಾಲೂಕಿನಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು. ಅಂಗವಿಕಲ, ಸಂಧ್ಯಾಸುರಕ್ಷಾ ವಿಧವಾ ವೇತನ ಮತ್ತಿತರರ ಮಾಸಾಶನ ಅರ್ಜಿಗಳನ್ನು ಅತಿ ಶೀಘ್ರ ಇತ್ಯರ್ಥಗೊಳಿಸಲು ಹೋಬಳಿವಾರು ಅದಾಲತ್ ಕಾರ್ಯಕ್ರಮ ಆಯೋಜಿಸಲಾಗುವುದು. ಪ್ರಾಯೋಗಿಕವಾಗಿ ಪ್ರಥಮ ಭಾರಿಗೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅದಾಲತ್ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಜನತೆಯ ಆಶೋತ್ತರಗಳನ್ನು ಅವಶ್ಯಕತೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಜನತೆಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಆಡಳಿತದಲ್ಲಿ ಬದಲಾವಣೆ ಅವಶ್ಯಕತೆ ಇದ್ದು ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಇನ್ನೂ 375 ಕ್ಕೂ ಹೆಚ್ಚು ಸೇವೆಗಳನ್ನು ಸಕಾಲ ಕಾರ್ಯಕ್ರಮದಡಿಯಲ್ಲಿ ಅಳವಡಿಸುವ ಯೋಜನೆ ಇದೆ ಎಂದರು.
ವೈದ್ಯರ ದಂಡು: ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ತುಮಕೂರಿನ ಮಣಿಪಾಲ್ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ, ಬೆಂಗಳೂರು ಕಿದ್ವಾಯಿ ಆಸ್ಪತ್ರೆ, ಸರ್ಕಾರಿ ದಂತ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ಶಿರಾ ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳ ನುರಿತ ವೈದ್ಯರ ದಂಡು ಶಿಬಿರದಲ್ಲಿ ಪಾಲ್ಗೊಂಡು 2000 ಕ್ಕೂ ಹೆಚ್ಚು ರೋಗಿಗಳು ತಪಾಸಣೆಯನ್ನು ಮಾಡಿಸಿಕೊಂಡರು.
ಶಿಬಿರದಲ್ಲಿ ಹೃದಯ ರೋಗ ವಿಭಾಗದಲ್ಲಿ 250 ಮಂದಿ, ಕ್ಯಾನ್ಸರ್ ತಪಾಸಣಾ ವಿಭಾಗದಲ್ಲಿ 60 ಮಂದಿ, ಮೂತ್ರ ಜನಕಾಂಗ ವಿಭಾಗದಲ್ಲಿ 100 ಮಂದಿ, ಶ್ವಾಸಕೋಶ ವಿಭಾಗದಲ್ಲಿ 250 ಮಂದಿ, ದಂತ ಚಿಕಿತ್ಸಾ ವಿಭಾಗದಲ್ಲಿ 150 ಮಂದಿ, ಕೀಲು ಮತ್ತು ಮೂಳೆ ರೋಗ ವಿಭಾಗದಲ್ಲಿ 200 ಮಂದಿ, ಚರ್ಮರೋಗ ವಿಭಾಗದಲ್ಲಿ 80 ಮಂದಿ, ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ 400 ಮಂದಿ, ಮಧುಮೇಹ ವಿಭಾಗದಲ್ಲಿ 300 ಮಂದಿ ಸೇರಿದಂತೆ ಸಾಮಾನ್ಯ ರೋಗ ತಪಾಸಣಾ ವಿಭಾಗದಲ್ಲಿ 1500 ಕ್ಕೂ ಹೆಚ್ಚು ಒಟ್ಟು 2500 ಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಒಳಪಟ್ಟರು.
ರೋಗಿಗಳಿಗೆ ಉಚಿತ ಊಟ ವ್ಯವಸ್ಥೆ ಮಾಡಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ತಿಪ್ಪೇಸ್ವಾಮಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಗುಳಿಗೇನಹಳ್ಳಿ ನಾಗರಾಜು, ಕಾರ್ಯದರ್ಶಿ ಹೆಚ್.ಜಿ.ಲಿಂಗಯ್ಯ, ತಹಸೀಲ್ದಾರ್ ಕುಲಕರ್ಣಿ, ಆಯುಕ್ತರಾದ ಬಿ.ಟಿ.ರಂಗಸ್ವಾಮಿ, ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರಗೌಡ, ಡಿ.ಸಿ.ಸಿ. ಬ್ಯಾಂಕ್ ನಿರ್ದೆಶಕ ಅಂದುಕುಂಟೆ ರವಿ, ಸಂಘದ ಖಜಾಂಚಿ ಈ. ದೊಡ್ಡಣ್ಣ, ಕಾರ್ಯದರ್ಶಿ ಅನಂತರಾಮು, ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ.ವಿನಯ್, ತಾಲೂಕು ವೈದ್ಯಾಧಿಕಾರಿ ತಿಮ್ಮರಾಜು, ಡಾ.ಮಂಜುನಾಥ್, ಮುಬಾರಕ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement