ಮರೆಯಾಗುತ್ತಿರುವ ಕನ್ನಡ ಭಾಷೆ ರಕ್ಷಣೆ ಅಗತ್ಯ
ಶಿರಾ: ಜಾಗತೀಕರಣದ ಹೆಸರಿನಲ್ಲಿ ಮರೆಯಾಗುತ್ತಿರುವ ಕನ್ನಡ ಭಾಷೆ ರಕ್ಷಣೆಯಾಗಬೇಕಿದೆ ಎಂದು ಪತ್ರಕರ್ತ ಎಸ್.ನಾಗಣ್ಣ ಕರೆ ನೀಡಿದರು. ಅವರು ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡುವ ಬದಲು ಕನ್ನಡ ಭಾಷೆ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ ಎಂದ ಅವರು ಜಗತ್ತಿನ ಯಾವು ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲುವ ಶಕ್ತಿ ಕನ್ನಡ ಭಾಷೆಗಿದೆ. ಅಂತರರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಭಾಷೆಯನ್ನು, ಸಾಹಿತ್ಯವನ್ನು ತೆಗೆದುಕೊಂಡು ಹೋಗುವ ತುರ್ತು ಕಾರ್ಯ ನಮ್ಮದಾಗಬೇಕು ಎಂದರು.
ದುಃಖದ ವಿಷಯ: ದುಃಖದ ವಿಚಾರವೆಂದರೆ ಇಂದು ಕನ್ನಡ ಓದುವ ಪ್ರವೃತ್ತಿ ಜನರಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಕ್ಷೀಣಿಸುತ್ತಿದೆ. ಕನ್ನಡ ಭಾಷಾ ಬಳಕೆ ಕಡಿಮೆ ಆಗುತ್ತಿದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಕಾನ್ವೆಂಟೀಕರಣಗೊಂಡು ಕನ್ನಡ ಭಾಷೆ ಕನ್ನಡತನ, ಕನ್ನಡ ಸಂಸ್ಕೃತಿ ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಭಾಷಾ ಪ್ರೇಮ ಎಲ್ಲಾ ಪ್ರಾಂತಗಳಲ್ಲೂ ಇದ್ದದ್ದೇ, ಆ ಪ್ರಾಂತ್ಯದ ಸರ್ಕಾರಗಳು ಆಚರಣೆ ಮತ್ತು ಇಚ್ಛಾಶಕ್ತಿಯಿಂದ ಭಾಷೆಯ ಉಳಿವಿಗೆ ಚಿಂತನೆ ಮಾಡಬೇಕು. ಅಂಥದೊಂದು ಪ್ರಕ್ರಿಯೆಗೆ ಕರ್ನಾಟಕದಲ್ಲಿ ಕನ್ನಡ ಸಮೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಆಶಿಸಿದರು.
ಸೋರಗುವುದು ಬೇಡ: ಪ್ರಾಸ್ತವಿಕ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸೋಮು ಭಾಸ್ಕರಾಚಾರ್ ಅವರು700 ವರ್ಷಗಳ ಹಿಂದೆ ಹುಟ್ಟಿದ ಇಂಗ್ಲಿಷ್ ಭಾಷೆ ಜಗತ್ತನ್ನಾಳುತ್ತಿದೆ. 2000 ವರ್ಷ ಇತಿಹಾಸವಿರುವ ಕನ್ನಡ ಭಾಷೆ ಸೊರಗುವುದು ಬೇಡ. ನಾಡಿನ ಶ್ರೀಮಂತಿಕೆಯಾಗಿ ಕನ್ನಡ ಬೆಳಗಲಿ ಎಂದು ತಿಳಿಸಿ ತುಮಕೂರಿನಲ್ಲಿ ನಿರ್ಮಿಸುತ್ತಿರುವ ಹಾಗೂ ತಾಲೂಕಿನ ಎಲ್ಲೆಡೆ ನಿರ್ಮಿಸುತ್ತಿರುವ ಕ.ಸಾ.ಪ. ಭವನಗಳ ನಿರ್ಮಾಣ ಕುಂಠಿತಗೊಂಡಿದ್ದು ಹಾಜರಿರುವ ಸಚಿವ ಟಿ.ಬಿ.ಜಯಚಂದ್ರ ಅವರು ಇವುಗಳ ಕಾಯಕಲ್ಪಕ್ಕೆ ಮುಂದಾಗಬೇಕು ಎಂದರು.
ಸಚಿವ ಟಿ.ಬಿ.ಜಯಚಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಕೆ.ಚಂದ್ರಣ್ಣ, ಆಶಯ ನುಡಿಗಳನ್ನಾಡಿದರು, ತಾಲೂಕು ಕಸಾಪ ಅಧ್ಯಕ್ಷ ನರೇಶ್ ಬಾಬು ಪ್ರಾಸ್ತವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯರಾದ ಸಿ.ಆರ್.ಉಮೇಶ್, ಅರೇಹಳ್ಳಿ ರಮೇಶ್, ನಗರಸಭೆ ಸದಸ್ಯರಾದ ಬಸವರಾಜು, ದಿಲ್‌ದಾರ್, ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಚಿದಾನಂದ್, ಎಸ್.ಎನ್.ಕೃಷ್ಣಯ್ಯ, ರಾಜಣ್ಣ, ಆಯುಕ್ತರಾದ ಬಿ.ಟಿ.ರಂಗಸ್ವಾಮಿ, ತಹಸೀಲ್ದಾರ್ ಕುಲಕರ್ಣಿ, ಪ್ರಾಚಾರ್ಯ ಪಿ.ಹೆಚ್. ಮಹೇಂದ್ರಪ್ಪ, ಸೇರಿದಂತೆ ತಾಲೂಕು ಕಸಾಪ ಪದಾಧಿಕಾರಿಗಳು ಹಾಜರಿದ್ದರು. ಕಳ್ಳಂಬೆಳ್ಳ ಜಯರಾಂ ಸ್ವಾಗತಿಸಿ, ನರಸಿಂಹಚಾರ್ಯ ವಂದಿಸಿದರು.
'ಅಖಂಡ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಬೇಡ'
ಶಿರಾ: ಅಖಂಡ ಕರ್ನಾಟಕ ನಿರ್ಮಾಣ ಹಾಗೂ ಭಾಷೆ, ಸಂಸ್ಕೃತಿ, ನೆಲ, ಜಲ ಉಳಿವಿಗೆ ರಾಜ್ಯದ ಸಮಗ್ರ ಅಭಿವೃದ್ಧಿಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದರು. ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಖಂಡ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಬೇಡ. ಹೈದರಾಬಾದ್ ಕರ್ನಾಟಕ, ಮಧ್ಯಕರ್ನಾಟಕ, ಮತ್ತಿತರರ ಕರ್ನಾಟಕಗಳು ಒಂದೇ ಕರ್ನಾಟಕದಲ್ಲಿ ಇರಲಿ. ಬೇರೆ ಬೇರೆ ಕರೆಯುವ ಅವಶ್ಯಕತೆ ಇಲ್ಲ. ಅಖಂಡ ಕರ್ನಾಟಕ ಒಂದಾಗಿರಲಿ ಎಂದರು.
ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ತೆಲಂಗಾಣ ಎಂಬ ಪ್ರತ್ಯೇಕತೆಯ ಕೂಗು ಎದ್ದಿದೆ. ಇದಕ್ಕೆ ಪ್ರಾದೇಶಿಕ ಅಸಮತೋಲನ ಕಾರಣ ಎಂದರು.
ಹೈದರಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿಲಾಗಿದೆ. ಮಧ್ಯ ಕರ್ನಾಟಕದ ಅಭಿವೃದ್ಧಿಗಾಗಿ ಈಗ ದಾವಣಗೆರೆ- ಶಿರಾ ಮಾರ್ಗವಾಗಿ ತುಮಕೂರು ರೇಲ್ವೆ ಮಾರ್ಗ ನಿರ್ಮಿಸಲು ಮಂಜೂರಾತಿ ದೊರಕಿದೆ. ಇದಕ್ಕಾಗಿ 1933 ಕೋಟಿ ಅವಶ್ಯಕತೆ ಇದ್ದು ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸದರಿ ರೇಲ್ವೆ ಯೋಜನೆಗೆ ಸಹಕಾರ ನೀಡುತ್ತಿದೆ. ಇದರಿಂದ ಸಮಗ್ರ ಕರ್ನಾಟಕದ ಅಭಿವೃದ್ಧಿ ಕಾಣುವಂತಾಗುತ್ತದೆ ಎಂದರು.
ಭವನ ನಿರ್ಮಾಣ: ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನಗಳ ಪೂರ್ಣ ನಿರ್ಮಾಣಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.
ಗೌರವ ಸಮರ್ಪಣೆ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಳಗುಂದ ನರಸಿಂಹಯ್ಯ, ಎಸ್.ವಿ.ಚಲಪತಿ, ಎಲ್.ರಂಗನಾಥ್, ವಸಂತಲಕ್ಷ್ಮಿ, ಹರದೇವ್, ಪಿ.ಆರ್.ರಮೇಶ್, ಪಿ.ರವಿ, ಕೆ.ಎಚ್.ಹನುಮಂತರಾಯಪ್ಪ, ಪೈಲ್ವಾನ್ ರಾಂಸಿಂಗ್, ಇವರನ್ನು ಸನ್ಮಾನಿಸಲಾಯಿತು. ವಿಚಾರಗೋಷ್ಠ, ಕವಿಗೋಷ್ಠಿಗಳು ನಡೆದವು. ಸಮ್ಮೇಳನಾಧ್ಯಕ್ಷರಾದ ಎಸ್.ನಾಗಣ್ಣ ಅವರನ್ನು ಸಚಿವ ಟಿ.ಬಿ.ಜಯಚಂದ್ರ ಸನ್ಮಾನಿಸಿದರು.
ಪ್ರಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ತಾಳ ಮದ್ದಳೆ ವಿವಿಧ ಕಲಾತಂಡಗಳ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.