'ಮಾನವನ ಮೇಲೆ ಮುನಿದಿದ್ದಾಳೆ ಪ್ರಕೃತಿ ಮಾತೆ'
ಕುಣಿಗಲ್: ಪ್ರಕೃತಿ ಮಾತೆ ಮಾನವನ ಮೇಲೆ ಮುನಿದಿದ್ದಾಳೆ. ಉತ್ತರಾಖಂಡ ರಾಜ್ಯದಲ್ಲಿ ಅಪಾರ ಪ್ರಮಾಣದ ಮಳೆಯಿಂದ ದಿನನಿತ್ಯ ಸಂಭವಿಸುತ್ತಿರುವ ಸಾವು, ನೋವುಗಳು ಪ್ರಕೃತಿಯ ಮುಂದೆ ಮಾನವನ ಆಟ ಸಾಗೋದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿವೆ. ಅಲ್ಲಿನ ಜನರ ನೆರವಿಗೆ ಸ್ವಲ್ಪವಾದರೂ ಕೈಚಾಚಿ ಮಾನವತೆ ಮೆರೆಯಬೇಕಿದೆ ಎಂದು ಭಗೀರಥ ಪೀಠಾಧ್ಯಕ್ಷರಾದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ಮಂಗಳವಾರ, ತಾಲೂಕಿನ ಯಡೆಯೂರು ಹೋಬಳಿಯ ಕಂಠನಹಳ್ಳಿ ಗ್ರಾಮದಲ್ಲಿನ ರೇಣುಕಾ ಎಲ್ಲಮ್ಮ ದೇವಿಯ ಆರನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಮಹಾಚಂಡಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದ ಅವರು, ಧರ್ಮೋ ರಕ್ಷತಿ ರಕ್ಷಿತಹ, ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ, ಅಸಹಾಯಕ ಸ್ಥಿತಿಯಲ್ಲಿರುವ ಜನರು, ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸೂಕ್ತ ಸಹಾಯ ಮಾಡುವುದು ಧರ್ಮವೇ ಆಗಿರುವುದರಿಂದ, ಮಹಾಮಳೆಯ ಸಂಕಷ್ಟಕ್ಕೆ ಸಿಲುಕಿರುವ ಜನತೆಯ ಸಹಾಯಕ್ಕೆ ಮುಂದಾಗಬೇಕಿದೆ ಎಂದರು.
ಪರದಾಟ: ರಾಷ್ಟ್ರದ ಉತ್ತರಭಾಗಲ್ಲಿ ಅತಿವೃಷ್ಟಿಯಾದರೆ ದಕ್ಷಿಣ ಭಾಗವಾದ ನಮ್ಮ ರಾಜ್ಯದಲ್ಲಿ ಇನ್ನು ಮಳೆಯಾಗದೆ ಅನ್ನದಾತ ಸೇರಿದಂತೆ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಭಗವಂತನ ಕರುಣೆಯಿಂದ ಮಳೆಯಾಗಲು ಸಂಕಲ್ಪಿಸಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಧರ್ಮಾಚರಣೆಯ ಪದ್ಧತಿಗಳ ಬಗ್ಗೆ ಅನಾದರ ತೋರುತ್ತಿರುವುದು ಕಳವಳಕಾರಿಯಾಗಿದೆ. ಎಂತಹ ಸಂಧರ್ಭದಲ್ಲೂ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳ, ಧರ್ಮಾಚರಣೆ ಪದ್ಧತಿಗಳ ಬಗ್ಗೆ ಅನಾದರ ತೋರುವುದರಿಂದ ನಮಗೆ ಮಾರಕವೇ ಹೊರತು ಶ್ರೇಯಸ್ಸಲ್ಲ. ಧರ್ಮಾಚರಣೆಯಿಂದ ಉತ್ತಮ ಸಂಸ್ಕೃತಿ, ಸಂಸ್ಕಾರಗಳು ವೃದ್ಧಿಗೊಂಡು, ಗ್ರಾಮದಲ್ಲಿ ಶಾಂತಿ, ನೆಮ್ಮದಿ ಮೂಡಲು ಸಹಕಾರಿಯಾಗುತ್ತದೆ ಎಂದರು.
ಪಂಡಿತ್ ನಾಗರಾಜ್ ಶರ್ಮ ನೇತೃತ್ವದಲ್ಲಿ ವಿವಿಧ ಹೋಮ, ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ್ದು, ಪ್ರಮುಖರಾದ ಬಿ.ವೈ.ನಾಗೇಂದ್ರಕುಮಾರ್ ಇತರರು ಉಪಸ್ಥಿತರಿದ್ದರು.