ಅಂಧರಿಗೆ ಅನುಕಂಪದ ಬದಲು ಆತ್ಮವಿಶ್ವಾಸ ತುಂಬಿ
ಕ.ಪ್ರ. ವಾರ್ತೆ ಕುಣಿಗಲ್ ಜೂ.26
ಅಂಧರಿಗೆ ಅನುಕಂಪ ತೋರಿಸುವ ಬದಲು, ಅವರೂ ಸಾಮಾನ್ಯರಂತೆ ಸಾಧಿಸಿ, ಮುಂದೆ ಬರುವಂತೆ ವಾತಾವರಣ ನಿರ್ಮಾಣ ಮಾಡುವ ಮೂಲಕ, ಅವರಲ್ಲಿ ಮನೋಬಲ ವೃದ್ಧಿಗೊಳಿಸುವ
ವಾತಾವರಣ ನಿರ್ಮಾಣ ಮಾಡಬೇಕಾದ್ದು ಎಲ್ಲರ ಕರ್ತವ್ಯ ಎಂದು ಡಿವೈಎಸ್ಪಿ ಉಮಾರಾಣಿ ತಿಳಿಸಿದರು.
ಮಂಗಳವಾರ, ಪಟ್ಟಣದ ಟೌನ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ನವಚೇತನ ಅಂಧಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ ಹೊಲಿಸಿಕೊಡಲಾದ ಶಾಲಾ ಸಮವಸ್ತ್ರ ಮತ್ತು ಇತರೆ ಅಗತ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನುದ್ಘಾಟಿಸಿ ಮಾತನಾಡಿ, ಅಂಧ ಮಕ್ಕಳಲ್ಲೂ ಅಸಾಧಾರಣ ಪ್ರತಿಭೆಗಳಿದ್ದು, ಸಂಗಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈಗಾಗಲೆ ಹಲವು ಅದ್ಭುತ ಸಾಧನೆಗಳನ್ನು ಮಾಡಿತೋರಿಸಿರುವ ದೃಷ್ಟಿಹೀನ ಸಾಧಕರು ಇತಿಹಾಸದಲ್ಲಿ ಆಗಿ ಹೋಗಿದ್ದಾರೆ. ಅಂಧಮಕ್ಕಳಿಗೆ ಪೂರಕವಾಗಿ ನೆರವಾಗಲು ಅವರು ಬಳಸುವ ಕಂಪ್ಯೂಟರ್ ಸೇರಿದಂತೆ ಹಲವು ಪರಿಣಾಮಕಾರಿ ಸಾಧನೆಗಳು ಅವಿಷ್ಕಾರಗೊಂಡಿದ್ದು, ಸಂಘ, ಸಂಸ್ಥೆಗಳ, ಸರ್ಕಾರದ ಸಹಕಾರ, ನೆರವಿನಿಂದ ಅಂಧಮಕ್ಕಳು ಮತ್ತಷ್ಟು ಉತ್ತಮಸಾಧನೆ ಮಾಡಿ ಮುಂದೆ ಬರಬೇಕೆಂದರು.
ಒಬ್ಬಂಟಿಗರಲ್ಲ: ತಹಸೀಲ್ದಾರ್ ಜಗದೀಶ್, ಅಂಧಮಕ್ಕಳು ಒಬ್ಬಂಟಿಗರಲ್ಲ, ಸಮಾಜ ಸದಾ ಅವರೊಂದಿಗಿದ್ದು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುತ್ತಾ, ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಅವರು ಸಾಮಾನ್ಯರಂತೆ ಜೀವನ ನಿರ್ವಹಣೆ ಮಾಡುವಂತ ಮುಕ್ತವಾತಾವರಣ ಕಲ್ಪಿಸಿಕೊಟ್ಟಿದೆ. ಅಂಧರೆಂದ ಮಾತ್ರಕ್ಕೆ ಅವರು ಅಧೀರರಾಗುವ ಅವಶ್ಯಕತೆ ಇಲ್ಲ. ಸರ್ಕಾರ, ಸಂಘ, ಸಂಸ್ಥೆಗಳು ಅಂಧರ ಸರ್ವತೋಮುಖ ಅಭಿವೃದ್ಧಿಗೆ, ಸ್ವಾವಲಂಬಿ ಜೀವನ ನಿರ್ವಹಣೆಗೆ ಸದಾ ಶ್ರಮಿಸುತ್ತಿವೆ. ಸುಸ್ಥಿರ, ಸುಭದ್ರ ಸಮಾಜ ನಿರ್ಮಾಣದಲ್ಲಿ ಎಲ್ಲರ ಕೊಡಗೆ, ಸಹಕಾರ ಅತ್ಯಗತ್ಯವಾಗಿದ್ದು, ಅಂಧರೂ ಸಹ ಸಮಾಜದ ಪ್ರಗತಿಗೆ ಪೂರಕವಾಗಿ, ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗ ಬೇಕೆಂದರು.
ಪ್ರೋತ್ಸಾಹ: ಕ್ಲಬ್ನ ಅಧ್ಯಕ್ಷರಾದ ಬಿ.ಎಂ.ಹುಚ್ಚೇಗೌಡ ಅಧ್ಯಕ್ಷತೆ ವಹಿಸಿದ್ದು, ಕ್ಲಬ್ನ ನಿರ್ದೇಶಕ ಈ. ಮಂಜು ಕಳೆದ ಹಲವು ವರ್ಷಗಳಿಂದಲೂ ಸಂಸ್ಥೆಯವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವುದು, ಅಂಧರಶಾಲೆಗೆ ಪೂರಕ ಸಾಮಗ್ರಿ ಪೂರೈಸುವುದು ಸೇರಿದಂತೆ ಹಲವು ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕ್ಲಬ್ ನಡೆಸಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲೂ ಮತ್ತಷ್ಟು ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದರು.
ಸಿಪಿಐ ಧಮೇಂದ್ರ, ಪಿಎಸೈ ಗುರುಪ್ರಸಾದ್, ಪ್ರಮುಖರಾದ ನಂಜುಂಡಯ್ಯ ಅ.ರಾಜಣ್ಣ, ತೋಪೇಗೌಡ, ಸುರೇಶ್, ರವಿ, ಶಿವಶಂಕರ್, ನಾರಾಯಣಗೌಡ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಉತ್ತರಾಖಂಡ್ನಲ್ಲಿ ಮಳೆಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು, 30 ಕ್ಕೂ ಹೆಚ್ಚು ಅಂಧಮಕ್ಕಳಿಗೆ ಕ್ಲಬ್ನ ವತಿಯಿಂದ ಸಮವಸ್ತ್ರ ಹೊಲಿಸಿ, ಅಗತ್ಯ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ರಿಕ್ರಿಯೇಶನ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ, ಸಿಪಿಐ ಮತ್ತು ಪಿಎಸೈ ಮೂವರು ಅಧಿಕಾರಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.