'ಜಾತಿ ಆಧಾರದ ಮೇಲೆ ಸಾಲ ಮನ್ನಾ ಖಂಡನೀಯ'
ತಿಪಟೂರು: ಅಲ್ಪಸಂಖ್ಯಾತ, ಹಿಂದುಳಿದ, ಹರಿಜನ ಎಂಬ ಜಾತಿ ಆಧಾರದ ಮೇಲೆ ವಿವಿಧ ಇಲಾಖೆಗಳ ಸಾಲ ಮನ್ನಾ ಮಾಡಿರುವ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಜೆಡಿಎಸ್ ರಾಜ್ಯ ಮಹಿಳಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯೆ ರೇಖಾ ಅನೂಪ್ ಕಿಡಿಕಾರಿದ್ದಾರೆ. ಬರಗಾಲದಿಂದ ಕಂಗಾಲಾಗಿರುವ ರೈತರ ಯಾವುದೇ ಸಾಲಮನ್ನಾ ಮಾಡದಿರುವುದು ಹಾಗೂ ಮಧ್ಯಮ ವರ್ಗದ ಜನತೆಗೆ ಸರ್ಕಾರದ ಸವಲತ್ತುಗಳನ್ನು ನೀಡದಿರುವುದು ಶೋಚನೀಯ ಸಂಗತಿ. ಬಸ್ ದರಗಳನ್ನು ಹೆಚ್ಚಿಸುವ ಮೂಲಕ ವಿದ್ಯುತ್ ಬಿಲ್ಲನ್ನೂ ಹೆಚ್ಚಿಸ ಹೊರಟಿರುವುದು ಸರ್ಕಾರದ ಯಾವ ದಿಕ್ಕಿನಲ್ಲಿ ಹೊರಟಿದೆ ಎಂಬುದನ್ನು ತೋರಿಸುತ್ತದೆ. ಒಂದು ರು. ನಂತೆ ಅಕ್ಕಿಯನ್ನು ವಿತರಿಸಲು ಹೊರಟಿರುವ ಇವರು ಮಧ್ಯಮ ವರ್ಗದವರಿಗೆ (ಎಪಿಎಲ್) ಸಿಗುತ್ತಿದ್ದ ಅಕ್ಕಿ ಮತ್ತಿತರೆ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿರುವುದು ಖಂಡನೀಯ ಎಂದು ರೇಖಾ ತಿಳಿಸಿದ್ದಾರೆ.್ಙ
ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರವಿ
ಕುಣಿಗಲ್: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಚ್.ಬಿ.ರವಿಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿವಮ್ಮ, ಪ್ರಧಾನ ಕಾರ್ಯದರ್ಶಿ - ಬಿ.ಎನ್.ರವಿಕುಮಾರ್, ಖಜಾಂಚಿ ಕೆ.ಕೆ.ರಮೇಶ್, ಸಹ ಕಾರ್ಯದರ್ಶಿ ವರಲಕ್ಷ್ಮೀ, ಸಂಘಟನಾ ಕಾರ್ಯದರ್ಶಿ ಮಹಾಲಕ್ಷ್ಮಮ್ಮ ಅವರನ್ನು ನೇಮಕ ಮಾಡಿ ಜಿಲ್ಲಾ ಸಂಘದ ಅಧ್ಯಕ್ಷರಾದ ಆರ್.ಪರಶಿವಮೂರ್ತಿ, ಪ್ರದಾನ ಕಾರ್ಯದರ್ಶಿ ಎನ್.ಗೋಪಾಲಕೃಷ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಸಂಘದ ನೇಮಕ ಮಾಡಿದ ಪದಾಧಿಕಾರಿಗಳೇ ಅಧಿಕೃತವಾಗಿದ್ದು, ಇವರನ್ನು ಹೊರತುಪಡಿಸಿ ಸ್ವಯಂ ಘೋಷಿತವಾಗಿ ಘೋಷಣೆ ಮಾಡಿಕೊಂಡಿರುವ ಪದಾಧಿಕಾರಿಗಳಿಗೆ ಜಿಲ್ಲಾ ಅಥವಾ ರಾಜ್ಯ ಸಂಘದಲ್ಲಿ ಯಾವುದೇ ಮಾನ್ಯತೆ ಇಲ್ಲವೆಂದು ತಿಳಿಸಿದ್ದಾರೆ.
ಕು.ನಾಗಭೂಷಣ್ ನಿಧನಕ್ಕೆ ಸಂತಾಪ
ಚಿಕ್ಕನಾಯಕನಹಳ್ಳಿ: ಚಲನಚಿತ್ರ ರಂಗದಲ್ಲಿ ಎಲ್ಲಾ ಪ್ರಾಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಖ್ಯಾತ ಸಾಹಿತಿ, ನಟ ಕುಣಿಗಲ್ ನಾಗಭೂಷಣ್ ನಿಧನಕ್ಕೆ ತಾಲೂಕು ವಿಪ್ರ ಹಿತರಕ್ಷಣಾ ವೇದಿಕೆ ಸಂತಾಪ ವ್ಯಕ್ತಪಡಿಸಿದೆ. 'ಆಡು ಮುಟ್ಟದ ಸೊಪ್ಪಿಲ್ಲ' ಎಂಬಂತೆ ಕುಣಿಗಲ್ ನಾಗಭೂಷಣ್ ತಮ್ಮ ಚಿತ್ರರಂಗದ ವೃತ್ತಿ ಜೀವನದ ಕಾಲದಲ್ಲಿ ಸಾಹಿತಿ, ಹಾಸ್ಯನಟ, ಸಂಭಾಷಣೆಕಾರರಾಗಿ ರಾಜ್ಯಾದ್ಯಂತ ಕನ್ನಡಿಗರ ಜನಮಾನಸದಲ್ಲಿ ಇಂದಿಗೂ ನೆಲೆಸಿದ್ದಾರೆ. ಅವರ ಅಕಾಲಿಕ ಮರಣದಿಂದ ಅವರ ಕುಟುಂಬಕ್ಕಾಗಿರುವ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ವಿಪ್ರ ಹಿತರಕ್ಷಣಾ ವೇದಿಕೆ ಪ್ರಾರ್ಥಿಸಿದೆ.
29ರಂದು ಶಾಸಕರ ಕಚೇರಿ ಮನೆಗಳ ಮುಂದೆ ಧರಣಿ
ತುಮಕೂರು: ರಾಜ್ಯದಲ್ಲಿರುವ ಸ್ಲಂ ನಿವಾಸಿಗಳಿಗೆ ಜನಸಂಖ್ಯಾ ಆಧಾರದಲ್ಲಿ ಬಜೆಟ್ನಲ್ಲಿ ಪಾಲಿಗಾಗಿ, ಸ್ಲಂ ಜನರಿಗೆ ಭೂಮಿ ಹಕ್ಕು ಖಾತರಿಗಾಗಿ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯಕ್ಕೆ ಆಗ್ರಹಿಸಿ ಇದೇ ತಿಂಗಳ 29 ರಂದು ಸ್ಲಂಜನಾಂದೋಲನಾ-ಕರ್ನಾಟಕದ ವತಿಯಿಂದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಶಾಸಕರ ಕಚೇರಿ ಮನೆಗಳ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ತುಮಕೂರು ಜಿಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯು ಶಾಸಕರ ಕ:ಕೆರಿ ಮುಂದೆ ಅಂದು ಧರಣಿ ನಡೆಸಿ ಮನವಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಶೆಟ್ಟಾಳಯ್ಯ ತಿಳಿಸಿದರು.
ಇಂದಿನಿಂದ ರಂಗಸಂಭ್ರಮ ನಾಟಕೋತ್ಸವ
ತುಮಕೂರಿನ ಪ್ರಯೋಗದಾಟಗಳ ರಂಗಕೇಂದ್ರವಾದ ನಾಟಕಮನೆ ವತಿಯಿಂದ ಜೂನ್ 27 ರಿಂದ 29ರವರಗೆ ಮೂರು ದಿನಗಳ ಮುಂಗಾರು ರಂಗಸಂಭ್ರಮ ಕಾರ್ಯಕ್ರಮವನ್ನು ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಜೂನ್ 27 ರ ಗುರುವಾರ ಸಂಜೆ 6 ಗಂಟೆಗೆ ಮುಂಗಾರು ರಂಗಸಂಭ್ರಮದ ಉತ್ಸವಕ್ಕೆ ಹಿರಿಯ ರಂಗಕರ್ಮಿ ಹೆಚ್.ಎಂ.ರಂಗಯ್ಯ ಚಾಲನೆ ನೀಡುವರು. ಹಿರಿಯ ರಂಗಕರ್ಮಿಗಳಾದ ಚನ್ನಬಸವಯ್ಯ ಗುಬ್ಬಿ, ಹೆಬ್ಬಾಕ ಸಿದ್ದಲಿಂಗಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ರಂಗನಿರ್ದೇಶಕ ಮೆಳೆಹಳ್ಳಿ ದೇವರಾಜ್ ಆಗಮಿಸಲಿದ್ದಾರೆ. ಮುಂಗಾರು ರಂಗಸಂಭ್ರಮದ ಪ್ರಾರಂಭಿಕ ಕಾರ್ಯಕ್ರಮವಾಗಿ ಯುವ ಹೆಸರಾಂತ ರಂಗಸಂಗೀತ ನಿರ್ದೇಶಕ ರಾಜಗುರುಹೊಸಕೋಟೆ ತಂಡ ರಂಗಗೀತೆಗಳನ್ನು ಹಾಡಲಿದ್ದಾರೆ. ಸಂಜೆ 7 ಗಂಟೆಗೆ ಬೆಂಗಳೂರಿನ ನಾಟ್ಯ ಸರಸ್ವತಿ ಕನ್ನಡ ಕಲಾ ಸಂಘದ ಕಲಾವಿದರಿಂದ ನೂತನ ಪ್ರಯೋಗವಾದ ವಿಕಟವಿಲಾಸ ನಾಟಕವನ್ನು ಅಭಿಯಯಿಸಲಿದ್ಧಾರೆ. ನಾಟಕವನ್ನು ಯು.ಗೋವಿಂದೇಗೌಡ ರಚಿಸಿ ನಿರ್ದೇಶಿಸಿದ್ದಾರೆ. ಜೂನ್ 28ರ ಶುಕ್ರವಾರದಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಸಿ.ವಿ.ಮಹದೇವಯ್ಯ, ಎಸ್. ನಾಗಣ್ಣ, ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್, ಗಂಗಾಂತರಂಗ ನಾಟಕದ ರಚನೆಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್ ಮತ್ತು ನಿರ್ದೇಶಕ ತುಮಕೂರು ಶಿವಕುಮಾರ್ ಅವರು ಉಪಸ್ಥಿತರಿರುವರು. ಜೂನ್ 29 ರ ಶನಿವಾರ ಸಂಜೆ 6ಗಂಟೆಗೆ ಬೆಂಗಳೂರಿನ ದೃಶ್ಯ (ರಿ) ತಂಡ ದಕ್ಷಾಯಿಣಿ ಭಟ್ ನಿರ್ದೇಶನದಲ್ಲಿ ಮೋಹನ್ ಚಂದ್ರ ಅವರು ಕನ್ನಡಕ್ಕೆ ಅನುವಾದಿಸಿರುವ ಜಪಾನಿ ಮೂಲದ ನಾಟಕ ಬಸ್ತಿ ಪ್ರದರ್ಶನಗೊಳ್ಳಲಿದೆ. ನಂತರ ತುಮಕೂರಿನ ನಾಟಕಮನೆ ಕಲಾವಿದರಿಂದ ಧನ್ವಂತ್ರಿ ನಿರ್ದೇಶನದಲ್ಲಿ ಯು.ಗೋವಿಂದೇಗೌಡ ರಚಿಸಿರುವ ನೂತನ ಪ್ರಯೋಗವಾದ ಜನ-ಮನ-ಗಣ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಾಟಕ ಮಹಾಲಿಂಗು ತಿಳಿಸಿದ್ದಾರೆ.