ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊಬ್ಬರಿ ಖರೀದಿ ಕೇಂದ್ರಗಳನ್ನು ಹೆಚ್ಚಿಸಲು ಲೋಕೇಶ್ವರ ಒತ್ತಾಯ

Srinivasa Murthy VN
Updated On : 27 Jun 2013, 11:55 am

ಕ.ಪ್ರ.ವಾರ್ತೆ ತಿಪಟೂರು ಜೂ.27
ಇಲ್ಲಿನ ಮಾರುಕಟ್ಟೆಯಲ್ಲಿ ಕನಿಷ್ಠ 4 ಕೊಬ್ಬರಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಕೆಜೆಪಿ ಮುಖಂಡ ಲೋಕೇಶ್ವರ ಆಗ್ರಹಿಸಿದರು.
ಕೊಬ್ಬರಿ ನಾಡು ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದರಿಂದ ರೈತರು ಹಾಗೂ ವಿರೋಧ ಪಕ್ಷಗಳ ಒತ್ತಡದಿಂದ ಬೆಂಬಲ ಬೆಲೆ 5550ಕ್ಕೆ ಸರ್ಕಾರ ಬೆಳೆಗಾರರ ಕೊಬ್ಬರಿಯನ್ನು ನಫೆಡೆ ಮೂಲಕ ಖರೀದಿಸುತ್ತಿದೆ. ಜೊತೆಗೆ ಕ್ವಿಂಟಾಲ್‌ವೊಂದಕ್ಕೆ 1000 ಪ್ರೋತ್ಸಾಹ ಬೆಲೆ ನೀಡುತ್ತಿದೆ. ಒಟ್ಟು ಬೆಳೆಗಾರನಿಗೆ ಕ್ವಿಂಟಾಲಿಗೆ 6550 ಸಿಗುತ್ತಿರುವುದು ಸ್ವಾಗತಾರ್ಹ. ಆದರೆ ನಫೆಡ್ ಖರೀದಿ ಕೇಂದ್ರದಲ್ಲಿ ದಿನನಿತ್ಯ ಕೇವಲ 300 ಚೀಲ ಕೊಬ್ಬರಿ ಮಾತ್ರ ಖರೀದಿಸುತ್ತಿರುವುದು ನೋಡಿದರೆ ಇದೊಂದು ರೈತರ ಕಣ್ಣೊರೆಸುವ ನಾಟಕವಾಗಿದೆ. ಪ್ರೋತ್ಸಾಹಧನ ನೀಡಿ ಖರೀದಿಸಲು ಸರ್ಕಾರ ಪ್ರಾಮಾಣಿಕವಾಗಿ ಯತ್ನಿಸಬೇಕೆ ಹೊರತು ಇದು ರೈತರ ಕಣ್ಣೊರೆಸುವ ತಂತ್ರವಾಗಬಾರದು ಎಂದರು.
ತಿಪಟೂರು ತಾಲೂಕಿನಿಂದ ಮಾರುಕಟ್ಟೆಗೆ ದಿನಕ್ಕೆ 3-4 ಸಾವಿರ ಚೀಲ ಕೊಬ್ಬರಿ ಬರುತ್ತಿದೆ. ಈಗ ಕೇವಲ 300 ಚೀಲ ಕೊಬ್ಬರಿ ಕೊಳ್ಳುವ 1 ಕೇಂದ್ರ ಮಾತ್ರ ಆರಂಭಿಸಿರುವುದು ನೋಡಿದರೆ, ಈ ಸರ್ಕಾರಕ್ಕೆ ರೈತರ ಬಗ್ಗೆ ನಿಜ ಕಾಳಜಿ ಇಲ್ಲ ಎಂಬುದು ಕಾಣುತ್ತದೆ. ನಿಜವಾಗಿ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಇಲ್ಲಿನ ಮಾರುಕಟ್ಟೆಯಲ್ಲಿ ಕನಿಷ್ಠ 4 ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರೈತರಿಗೆ ಬೇಗ ಹಣ ಸಿಗಲಿ:  ನಫೆಡ್‌ಗೆ ಕೊಬ್ಬರಿ ಮಾರಾಟ ಮಾಡಿದ ರೈತರಿಗೆ ಖರೀದಿ ನಡೆಸಿದ ಒಂದೆರಡು ದಿನಗಳಲ್ಲಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವಂತಾಗಬೇಕು. ಜಿಲ್ಲಾ ಸಚಿವ ಜಯಚಂದ್ರ ಅವರು ನೀಡಿದ ಭರವಸೆಯಂತೆ ಕೊಬ್ಬರಿ ಖರೀದಿಯಾದ ಎರಡು ಮೂರು ದಿನಗಳಲ್ಲೇ ಹಣ ಪಾವತಿಯಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ನೀರಿನ ಸಮಸ್ಯೆಗೆ ಪರಿಹಾರವಿಲ್ಲ:  ನಗರ ಮತ್ತು ಗ್ರಾಮೀಣ ಪ್ರದೇಶಗಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ತೊಂದರೆಯಾಗಿದ್ದರೂ ತಾಲೂಕು ಮತ್ತು ನಗರಾಡಳಿತ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದೆ. ನಗರದಲ್ಲಿ ಮಟ್ಕಾ ಹವಾಳಿ ಹೆಚ್ಚಾಗಿದ್ದು, ನಿಯಂತ್ರಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement