ಪುರಸಭೆ ಗಾದಿ ಯಾರಿಗೆ?
ಕ.ಪ್ರ.ವಾರ್ತೆ ಕುಣಿಗಲ್ ಜೂ.27
ಕುಣಿಗಲ್ ಪುರಸಭೆಯ ಅಧ್ಯಕ್ಷಗಾದಿ ಹಿಡಿಯಲು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷರ ನಡುವೆ ಬಿರುಸಿನ ಪೈಪೋಟಿ ನಡೆದಿದ್ದು, ಈ ಪೈಪೋಟಿ ನಡುವೆ ಕಾಂಗ್ರೆಸ್ನ ಮತ್ತೊಂದು ಬಣವು, ಕಾಂಗ್ರೆಸ್ನ ಮಹಿಳಾ ಸದಸ್ಯರನ್ನು ಅಧ್ಯಕ್ಷ ಗಾದಿಗೆ ತರಲು ಹರಸಾಹಸ ಯತ್ನದಲ್ಲಿರುವ ವಿಷಯ ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿ, ನಾಗರಿಕರಲ್ಲಿ ಕುತೂಹಲ ಕೆರಳಿಸಿದೆ.
2008ರ ಪುರಸಭೆಗೆ ಕಳೆದ ಬಾರಿ ಮೊದಲ 30 ತಿಂಗಳ ಅವಧಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದು, 2ನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಮೊದಲ ಅವಧಿಯಲ್ಲಿ ಜೆಡಿಎಸ್ನಿಂದ ರಾಜೇಶ್ವರಿ ಸುಗಂಧರಾಜು ಅಧ್ಯಕ್ಷರಾಗಿ ಪೂರ್ಣ ಅಧಿಕಾರ ನಡೆಸಿದರೆ, 2ನೇ ಅವಧಿಯಲ್ಲಿ ಜೆಡಿಎಸ್ನ ಆಯಿಶಾಬೀ 15 ತಿಂಗಳು, ನಂತರ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ನಳಿನಾ ಭೈರಪ್ಪ, ಅಧ್ಯಕ್ಷ ಗಾದಿಗೇರಲು ಈ ಹಿಂದೆ ಇದ್ದ ಕಾಂಗ್ರೆಸ್ ಶಾಸಕರ ಮತ ಸಳೆಯಲು ಅಧ್ಯಕ್ಷರಾಗುವ ತನಕ ಕಾಂಗ್ರೆಸ್ನಲ್ಲಿದ್ದು, ಅಧ್ಯಕ್ಷ ಗಾದಿಗೇರಿದ ಮರು ದಿನವೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಮ್ಮುಖ ಜೆಡಿಎಸ್ ಸೇರ್ಪಡೆಗೊಂಡು ಅಧಿಕಾರಾವಧಿ ಪೂರ್ಣಗೊಳಿಸಿದ್ದರು.
ಜೆಡಿಎಸ್ನ ಗುಂಪುಗಾರಿಕೆಯಿಂದ 2013 ಪುರಸಭೆ ಚುನಾವಣೆ ರಂಗೇರಿದ್ದು, 23 ಸ್ಥಾನಗಳ ಪೈಕಿ, ಹಾಲಿ ಶಾಸಕ ಡಿ.ನಾಗರಾಜಯ್ಯ ತಮ್ಮ ಪರವಾಗಿ ಬಂಡಾಯವಾಗಿ ನಿಲ್ಲಿಸಿದ್ದ 7 ಬಂಡಾಯ ಜೆಡಿಎಸ್ ಸದಸ್ಯರು ವಿಜಯಿಯಾದರೆ, 2013ರ ವಿಧಾನಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತಗೊಂಡಿದ್ದ ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡರು, ಅಧಿಕೃತವಾಗಿ 'ಬಿ' ಫಾರಂ ವಿತರಿಸಿ ಗೆಲ್ಲಿಸಿದ 7 ಜೆಡಿಎಸ್ ಅಧಿಕೃತ ಅಭ್ಯರ್ಥಿಗಳು, ಪುರಸಭೆ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡುವ ಮೂಲಕ 7 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾದರೆ, ಉಳಿಕೆ ಒಂದು ಸ್ಥಾನದಲ್ಲಿ ಬಿಜೆಪಿ ಸದಸ್ಯ ತನ್ನ ಸ್ವಂತ ವರ್ಚಸ್ಸಿನಿಂದ ಅಧಿಕಾರಕ್ಕೆ ಬಂದಿದ್ದಾರೆ.
ಪುರಸಭೆ ಫಲಿತಾಂಶ ಘೋಷಣೆಯಾಗಿ, ವಿಧಾನಸಭಾ ಚುನಾವಣೆಗಳು ನಡೆದು, ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ವಿಜೇತರಾದ ಪುರಸಭಾ ಸದಸ್ಯರಿಗೆ ಸೂಕ್ತ ಅಧಿಕಾರ ಸಿಗದೆ, ತಮ್ಮ ವಾರ್ಡ್ಗಳಲ್ಲಿನ ಸಮಸ್ಯೆ ಬಗೆಹರಿಸಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮದ್ಯೆ ಸರ್ಕಾರ ಈ ತಿಂಗಳ ಅಂತ್ಯದೊಳಗೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಘೋಷಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಧ್ಯಕ್ಷಗಾದಿಗೆ ತಾಲೂಕು ಕಾಂಗ್ರೆಸ್ ಅಧ್ಯಕ್ಷ (ಕುಣಿಗಲ್ ಬ್ಲಾಕ್) ಶಂಕರ್, ಪ.ಜಾತಿ ವರ್ಗದಿಂದ 19ನೇ ವಾರ್ಡ್ನಿಂದ ಆಯ್ಕೆಯಾಗಿದ್ದು, ತಾವು ಅಧ್ಯಕ್ಷರಾಗಲು, ತಮ್ಮದೇ ಆದ ಹಲವು ಲೆಕ್ಕಾಚಾರಗಳನ್ನು ಹಾಕಿಕೊಂಡು, ಅಧ್ಯಕ್ಷ ಸ್ಥಾನ, ಪ.ಜಾತಿಗೆ ಪುರುಷರಿಗೆ ಮೀಸಲಾದಲ್ಲಿ ಜೆಡಿಎಸ್ನಲ್ಲಿ ಪ.ಜಾತಿ ಪುರುಷ ಅಭ್ಯರ್ಥಿ ಇಲ್ಲದ ಕಾರಣ ತಾವೇ ಅಧ್ಯಕ್ಷರಾಗುವ ಸಾಧ್ಯತೆ ಇರುವ ಬಗ್ಗೆ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಸೇರಿದಂತೆ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತಾ ಲಾಬಿ ನಡೆಸುತ್ತಿದ್ದರೆ.
ಕಾಂಗ್ರೆಸ್ನ ಮತ್ತೊಂದು ಬಣದ ಗುಂಪು 6ನೇ ವಾರ್ಡ್ನ ಪ.ಜಾತಿ ಮಹಿಳೆ ಮೀಸಲು ಸ್ಥಾನದಿಂದ ಆಯ್ಕೆಯಾಗಿರುವ ತಾರಾದೇವಿ ಅವರನ್ನು ಅಧ್ಯಕ್ಷಗಾದಿಗೆ ತರಲು, ಬೆಂಗಳೂರಿನಲ್ಲಿ ವಿವಿಧ ಮಂತ್ರಿ, ಮಹೋದಯರ ಕಚೇರಿ, ಮನೆ ಬಾಗಿಲಿಗೆ ತೆರಳಿ ಲಾಬಿ ನಡೆಸುತ್ತಿದ್ದಾರೆ. ಈ ಮದ್ಯೆ ಪುರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದೆ. ಯಾವುದೇ ಕಾರಣಕ್ಕೂ ಅಧ್ಯಕ್ಷಗಾದಿ ಜೆಡಿಎಸ್ ವಶದಲ್ಲೆ ಉಳಿಸಿಕೊಳ್ಳಲು, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್. ಹರೀಶ್, (ಪುರಸಭೆ ಚುನಾವಣೆಯಲ್ಲಿ ಬಂಡಾಯ ಜೆಡಿಎಸ್ ಅಭ್ಯರ್ಥಿಯಾಗಿ 23ನೇ ವಾರ್ಡ್ನಿಂದ ಸ್ಪರ್ಧಿಸಿ ವಿಜಯಿಯಾಗಿದ್ದರು) ಸಹ ಬಿರುಸಿನ ಲಾಬಿ ನಡೆಸುತ್ತಿದ್ದು, ಶಾಸಕರ ಸಹಕಾರದ ಜೊತೆಯಲ್ಲಿ, ಕಾಂಗ್ರೆಸ್ ಪಕ್ಷದ ಶಾಸಕ, ಸಚಿವರನ್ನು ಸಂಪರ್ಕಿಸಿ, ಪುರಸಭೆ ಅಧ್ಯಕ್ಷ ಗಾದಿ ಸಾಮಾನ್ಯ ವರ್ಗಕ್ಕೆ ದಕ್ಕುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ, ಜೆಡಿಎಸ್ನ ಮತ್ತೊಂದು ಗುಂಪು ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾದರೆ ಈಗಾಗಲೇ 3 ಬಾರಿ ಅಧ್ಯಕ್ಷರಾಗಿ, ಅಧಿಕಾರ ರುಚಿ ಕಂಡಿರುವ ಹರೀಶ್ ಪುನಃ ಅಧ್ಯಕ್ಷರಾಗುವುದನ್ನು ತಪ್ಪಿಸಲು ಬಿಸಿಎಂ 'ಬಿ' ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಪೌರಾಡಳಿತ ಸಚಿವರ ಬಳಿ ನಿಯೋಗ ತೆರಳಿ ಲಾಬಿ ನಡೆಸುತ್ತಿರುವ ವಿಷಯ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜನತೆಯಲ್ಲಿ ತೀವೃ ಕುತೂಹಲ ಕೆರಳಿಸಿದೆ. ರಾಜ್ಯ ಸರ್ಕಾರ ಅಂತಿಮವಾಗಿ ಹೊರಡಿಸುವ ಪ್ರಕಟಣೆಯ ನಂತರ ಎಲ್ಲಾ ಚರ್ಚೆ, ಕುತೂಹಲಕ್ಕೆ ತೆರೆಬೀಳಲಿದೆ.